ಬೀದರ್: ಪಾಲಕರು ಮೊಬೈಲ್ನಿಂದ ಮಕ್ಕಳನ್ನು ದೂರವಿರಿಸಬೇಕು ಎಂದು ಜಹೀರಾಬಾದ್ ತಾಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಪತಿ ಶ್ರೀ ಡಾ.ಬಸವಲಿಂಗ ಅವಧೂತರು ಹೇಳಿದರು.
ತಾಲೂಕಿನ ಚಿಮಕೋಡ್ ಗ್ರಾಮದಲ್ಲಿ ನಾಗೇಶ್ವರ ಖಾಂಡ ಪ್ರಯುಕ್ತ ಸಂಜೆ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಅತಿಯಾದ ಮೊಬೈಲ್ ಬಳಕೆಯು ಮಕ್ಕಳ ದೈಹಿಕ, ಮಾನಸಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಮೊಬೈಲ್ ಗೀಳು ಅಂಟಿಸಿಕೊಂಡವರು ಮಾನಸಿಕ ಖಿನ್ನತೆಗೂ ಒಳಗಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾನವ ಜನ್ಮ ಇರುವುದು ಒಂದೇ. ಜಾತಿ, ಮತ, ಪಂಥವೆನ್ನದೆ ಪರಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ದದಿಂದ ಬದುಕು ಸಾಗಿಸಬೇಕು. ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಯಾರಿಗೂ ಕೇಡು ಉಂಟು ಮಾಡಬಾರದು ಎಂದು ಕಿವಿಮಾತು ಹೇಳಿದರು.
ಆಲಸ್ಯದಿಂದ ರಕ್ತದೊತ್ತಡ, ಮಧುಮೇಹದಂಥ ರೋಗಗಳು ಬರುತ್ತವೆ. ಶ್ರಮ ಸಂಸ್ಕೃತಿ ರೂಢಿಸಿಕೊಂಡವರ ಬಳಿ ಯಾವ ರೋಗಗಳೂ ಸುಳಿಯುವುದಿಲ್ಲ. ಕಾರಣ, ನಿತ್ಯ ಸತ್ಯಶುದ್ಧ ಕಾಯಕ ಮಾಡಬೇಕು. ಅದರಿಂದ ಬರುವ ಆದಾಯದಲ್ಲಿ ಒಂದಿಷ್ಟು ದಾಸೋಹಕ್ಕೂ ಬಳಸಬೇಕು ಎಂದು ತಿಳಿಸಿದರು.
ನಿತ್ಯ ನಸುಕಿನ ಜಾವ ಎದ್ದು ಜಪ, ತಪ, ಧ್ಯಾನ ಮಾಡಿದರೆ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ. ಶರಣರು, ಸಂತರ ಜೀವನ ಚರಿತ್ರೆ, ವಚನ ಸಾಹಿತ್ಯದ ಅಧ್ಯಯನದಿಂದ ಸಾರ್ಥಕ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ದೇವಸ್ಥಾನದ ಪೂಜಾರಿ ಶಿವಕುಮಾರ ಸ್ವಾಮಿ, ಪ್ರಮುಖರಾದ ನಾಗೇಶ ಜಾಪಟ್ಟೆ, ಕಿರಣ ಕಡೆದೊಡ್ಡೆ, ಪರಮೇಶ ಢೆಂಪೆ, ರಮೇಶ ಬಿರಾದಾರ್, ಆನಂದ ಗಡ್ಡೆ, ನಾಗೇಶ ಪಾಟೀಲ್, ಪವನ ಶೆಟ್ಟೆಪ್ಪನೂರ್, ಮಲ್ಲಿಕಾರ್ಜುನ ಚಿನ್ನಪ್ಪನೋರ್, ವಿನೋದ ಕಡಗಂಚಿ ಚಿಂಚೋಳಿ ಮೊದಲಾದವರು ಇದ್ದರು.