ಜಿಲ್ಲೆ

ಮೊಬೈಲ್ ದುರುಪಯೋಗ ಆಗದಿರಲಿ- ದಾವಿವಿ ಕುಲಸಚಿವ ಡಾ.ಶಿವಶಂಕರ್

ದಾವಣಗೆರೆ: ಮೊಬೈಲ್ ತಂತ್ರಜ್ಞಾನ ದೇವರು ಕೊಟ್ಟ ವರ. ಅದನ್ನು ಅಗತ್ಯಕ್ಕೆ ತಕ್ಕಷ್ಟೆ ಬಳಸಿ, ದುರುಪಯೋಗ ಮಾಡದಿರಿ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ. ಡಿ.ಶಿವಶಂಕರ್ ಹೇಳಿದರು.
ದೇವರಾಜ ಅರಸು ಬಡಾವಣೆಯ ಹಾಲಕೆರೆ ಶ್ರೀ ಅನ್ನದಾನೀಶ್ವರ ಶಾಖಾ ಮಠದಲ್ಲಿ ಶುಕ್ರವಾರ ರಾತ್ರಿ ಏರ್ಪಡಿಸಿದ್ದ 253ನೇ ಶಿವಾನುಭವ ಸಂಪದ ಉದ್ಘಾಟಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರು ಮತ್ತು ಶಿಕ್ಷಕರಿಗೆ ಸವಾಲಿನ ಪ್ರಶ್ನೆಯಾಗಿದೆ. ಮಕ್ಕಳನ್ನೂ ಮೊಬೈಲ್ ಗೀಳಿನಿಂದ ಹೊರ ತರಬೇಕಿದೆ ಎಂದು ಹೇಳಿದರು. ಆಚಾರ ವಿಚಾರಗಳನ್ನು ಮರೆತಿರುವ ಕಾರಣಕ್ಕೆ ರೋಗರುಜಿನ ಹೆಚ್ಚುತ್ತಿವೆ. ಕರೊನಾ ಮಾರಿಯಿಂದಾಗಿ ಮನುಷ್ಯರಲ್ಲಿ ಆತಂಕ ಸೃಷ್ಟಿಸಿ ಪರಸ್ಪರ ಮುಖ ನೋಡದ ಸಂದರ್ಭಗಳು ಸೃಷ್ಟಿಯಾಗಿತ್ತು. ಮಾನವರು ಸಿರಿತನಕ್ಕೆ ಮಾರು ಹೋಗದೆ ದುಡಿಮೆ ಜತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕು ಎಂದರು. ಹೊಸ ವರ್ಷಾಚರಣೆ ವೇಳೆ ವಿಕೃತಿಗಳು ಬೇಡ. ಪಾಶ್ಚಿಮಾತ್ಯರನ್ನು ಅನುಸರಿಸಲು ಹೋಗಿ ಭಾರತೀಯ ಆಚಾರ, ಸಂಸ್ಕಾರವನ್ನು ಮರೆಯಬಾರದು. ಪರಸ್ಪರ ಸಹಬಾಳ್ವೆಯಿಂದ ಸ್ವಸ್ಥ ಸಮಾಜ ಕಟ್ಟಬೇಕು ಎಂದು ಹೇಳಿದರು. ದಿವ್ಯ ಸಾನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸ್ವಾತಂತ್ರೃ ಪೂರ್ವದಲ್ಲಿ ಮಠ ಮಾನ್ಯಗಳು ಶಿಕ್ಷಣಕ್ಕೆ ಒತ್ತು ಕೊಡದಿದ್ದರೆ ಸಾಕ್ಷರತೆ ಪ್ರಮಾಣ ಹೆಚ್ಚುತ್ತಿರಲಿಲ್ಲ. ಆದರೆ ಸಾಕ್ಷರರು ಇಂದು ರಾಕ್ಷಸರಂತೆ ವರ್ತಿಸುತ್ತಿದ್ದಾರೆ, ಇದು ಸರಿಯಲ್ಲ ಎಂದರು. ದಾವಣಗೆರೆ ಸ್ಮಾರ್ಟ್‌ಸಿಟಿ ಎಂ.ಡಿ. ರವೀಂದ್ರ ಮಲ್ಲಾಪುರ, ವಿಶ್ರಾಂತ ಇಂಜಿನಿಯರ್ ಎಸ್.ಎಸ್.ಬಿರಾದಾರ್, ವಿಶ್ರಾಂತ ಪ್ರಾಂಶುಪಾಲ ಉಮೇಶ್ ಹಿರೇಮಠ್, ಟ್ರಸ್ಟ್ ಕಾರ್ಯದರ್ಶಿ ಒ.ಅಡಿವೆಪ್ಪ, ನಾಗರಾಜ್ ಯರಗಲ್ ಇದ್ದರು. ಡಾ. ಅಶ್ವಿನಿ ಶಿವಶಂಕರ್, ಸುಮಂಗಲಮ್ಮ ಎನ್.ಜಿ.ಅಮರೇಶ್, ಎನ್.ಪಿ.ರೇಖಾ ಎನ್.ಜಿ.ಪ್ರಕಾಶ್, ಕಾಯಕ ರತ್ನ ಪ್ರಶಸ್ತಿ ಪುರಸ್ಕೃತ ವೀಣಾ ಮಂಜುನಾಥ್, ಅಕ್ಕನ ಬಳಗದ ಅಧ್ಯಕ್ಷೆ ಮಂಗಳಾ ವೀರಪ್ಪ ಭಾವಿ, ಸಂಗಮ್ಮ ಅಡಿವೆಪ್ಪ, ನೀಲಮ್ಮ ಮಹಾಂತೇಶ್ ಅವರನ್ನು ಸನ್ಮಾನಿಸಲಾಯಿತು. ಟಿಎಚ್‌ಎಂ ಶಿವಕುಮಾರಸ್ವಾಮಿ ಪ್ರಾರ್ಥಿಸಿದರು. ವೀರಪ್ಪ ಎಂ ಭಾವಿ ಸ್ವಾಗತಿಸಿದರು. ಸುಜಾತಾ ಕಾರ್ಯಕ್ರಮ ನಿರೂಪಿಸಿದರು. ವಿ.ಬಿ.ತನುಜಾ ವಂದಿಸಿದರು. ----