ಹೊಳೆನರಸೀಪುರ: ವಿದ್ಯಾರ್ಥಿಗಳು ಮೊಬೈಲ್ ಗೇಮ್‌ಗಳನ್ನು ಆಡುತ್ತ ಕಾಲ ಕಳೆಯುವುದನ್ನು ಬಿಟ್ಟು ಕ್ರೀಡಾಂಗಣಕ್ಕೆ ಆಗಮಿಸಿ ಮನಸ್ಸಿಗೆ ಮುದ ನೀಡುವ, ದೇಹಕ್ಕೆ ಉತ್ತಮ ವ್ಯಾಯಾಮ ನೀಡುವ ಕ್ರಿಕೆಟ್, ಫುಟ್ಬಾಲ್ ಆಟವಾಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಮಹಾಲಿಂಗಯ್ಯ ಸಲಹೆ ನೀಡಿದರು.
ಹೇಮಾವತಿ ಕ್ರೀಡಾಂಗಣದಲ್ಲಿ ಟಾಪರ್ಸ್ ಪಿಯು ಕಾಲೇಜಿನ ಸಹಯೋಗದಿಂದ ಗುರುವಾರ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಮಟ್ಟದ ಕ್ರೀಡೆಗಳಲ್ಲಿ ಗೆದ್ದು, ನಂತರ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಹಾಗೂ ಒಲಿಂಪಿಕ್‌ನಲ್ಲೂ ಗೆದ್ದು ದೇಶಕ್ಕೆ ಕೀರ್ತಿ ತಂದ ಅನೇಕ ಕ್ರೀಡಾಪಟುಗಳಿದ್ದಾರೆ. ಜಿಲ್ಲೆಯ ಜಾವಗಲ್ ಶ್ರೀನಾಥ್ ಹಾಗೂ ಪ್ಯಾರಾ ಒಲಿಂಪಿಕ್‌ನಲ್ಲಿ ಗಿರೀಶ್ ಅದೇ ರೀತಿ ಗೆದ್ದವರು. ನೀವು ಕೂಡ ಉತ್ತಮವಾಗಿ ಆಟ ಆಡಿಗೆದ್ದು ದೇಶಕ್ಕೆ ಕೀರ್ತಿ ತನ್ನಿ ಎಂದರು.
ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಓದಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆಗೂ ನೀಡಬೇಕು, ಓದು ಜ್ಞಾನವನ್ನು ಹೆಚ್ಚಿಸಿದರೆ, ಕ್ರೀಡೆ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ. ಕ್ರೀಡೆ ಗೆಲ್ಲಲೇಬೇಕು, ಗುರಿ ಮುಟ್ಟಲೇ ಬೇಕು ಎನ್ನುವ ಮನೋಭಾವ ಬೆಳೆಸುತ್ತದೆ. ಆದ್ದರಿಂದ ಯುವಕರು ಕ್ರೀಡೆ ಹಾಗೂ ವ್ಯಾಯಾಮಕ್ಕೆ ನಿತ್ಯ ಸಮಯವನ್ನು ಮೀಸಲಿಡಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗೋಪಾಲ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಎಚ್.ಕುಮಾರಸ್ವಾಮಿ, ಟಾಪರ್ಸ್ ಕಾಲೇಜಿನ ಪ್ರಾಂಶುಪಾಲ ಸಂತೋಷ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜ್ ಉಪಸ್ಥಿತರಿದ್ದರು.
ತಾಲೂಕು ಕ್ರೀಡಾ ಸಂಯೋಜಕ ಸುಜತ್ ಅಲಿ ಹಾಗೂ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರು ನೇತೃತ್ವ ವಹಿಸಿದ್ದರು.
ಕ್ರೀಡಾ ಧ್ವಜಾರೋಹಣ ನಡೆಸಿ, ಪಾರಿವಾಳ ಹಾರಿಬಿಟ್ಟು, ಕ್ರೀಡಾಪಟುಗಳಿಂದ ವಂದನೆ ಸ್ವೀಕರಿಸಿದ ನಂತರ ಕ್ರೀಡೆಗಳು ಪ್ರಾರಂಭವಾದವು.