ಮೈಸೂರು: ‘ಜೆಡಿಎಸ್ ಶಾಸಕರನ್ನು ಕರೆತರುತ್ತೇನೆ’ ಎಂದಿರುವ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಜೆಡಿಎಸ್ ಮಾಜಿ ಸಾ.ರಾ.ಮಹೇಶ್ ಅವರು, ‘ಸಿ.ಪಿ.ಯೋಗೇಶ್ವರ್ ತಮ್ಮ ಸರ್ಕಾರ ಉಳಿಸಿಕೊಳ್ಳುವ ಕೆಲಸ ಮಾಡಲಿ’ ಎಂದು ಕುಟುಕಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಮೊದಲು ಕಾಂಗ್ರೆಸ್ ಶಾಸಕರ ಬಗ್ಗೆ ಗಮನಹರಿಸಲಿ. ಆ ಮೇಲೆ ಬೇಕಿದ್ದರೆ ಜೆಡಿಎಸ್ ಶಾಸಕರ ಖರೀದಿ ಬಗ್ಗೆ ಮಾತನಾಡಲಿ ಎಂದು ಪ್ರತಿಕ್ರಿಯಿಸಿದರು.
ಚನ್ನಪಟ್ಟಣ ಕ್ಷೇತ್ರದ ಜನರು ಯೋಗೇಶ್ವರ್‌ಗೆ ಆಶೀರ್ವಾದ ಮಾಡಿದ್ದಾರೆ.
ಇನ್ನೂ ಮೂರು ವರ್ಷ ಜನರ ಸೇವೆ ಮಾಡುವ ಅವಕಾಶವಿದೆ. ಕಾಂಗ್ರೆಸ್‌ನಲ್ಲಿ 30ರಿಂದ 35 ಶಾಸಕರು ಅಸಮಾಧಾನಿತರಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್ ಹೇಳಿದ್ದರು.
ಅವರು ಯಾರ್ಯಾರು ಅಂತ ಯೋಗೇಶ್ವರ್‌ಗೆ ಚೆನ್ನಾಗಿ ಗೊತ್ತು. ಮೊದಲು ಕಾಂಗ್ರೆಸ್‌ನ ಅಸಮಾಧಾನಿತ ಶಾಸಕರ ಹೆಸರನ್ನು ಸಿಎಂ, ಡಿಸಿಎಂ ಅವರಿಗೆ ಕೊಡಲಿ. ಆ ಮೇಲೆ ಜೆಡಿಎಸ್ ಶಾಸಕರ ಬಗ್ಗೆ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು.
ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದವರ ಪೈಕಿ ಇವರದು ಕೂಡ ಪ್ರಮುಖ ಪಾತ್ರ ಇದೆ. ಇವರೇನು ಅಂತ ನಮಗೂ ಗೊತ್ತಿದೆ. ಜೆಡಿಎಸ್ ಪ್ರಾದೇಶಿಕ ಪಕ್ಷವಾದರೂ ನಮ್ಮ ಶಾಸಕರು ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಜತೆಗೆ ವಿಶ್ವಾಸದಲ್ಲಿದ್ದಾರೆ ಎಂದು ಹೇಳಿದರು.