ಜಿಲ್ಲೆ

ಮೊದಲ ಮೇಯರ್ ಕನಸಿಗೆ ಪೆಟ್ಟು? ಆಶಯ ಈಡೇರಿಸಿಕೊಳ್ಳಲು ನಗರ ಸಭಾಧ್ಯಕ್ಷ ಚಂದ್ರೇಗೌಡ ಪಟ್ಟು

ಹಾಸನ: ಬುಧವಾರ ನಗರಸಭೆ ಉಪಾಧ್ಯಕ್ಷರಾಗಿ ಜೆಡಿಎಸ್‌ನ ಹೇಮಲತಾ ಕಮಲ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೇಮಲತಾ ಆಯ್ಕೆಗೆ ಬಿಜೆಪಿ ಸದಸ್ಯರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಇದರೊಂದಿಗೆ ಒಪ್ಪಂದದಂತೆ ನಗರಸಭೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡದೆ ಪಟ್ಟು ಹಿಡಿದಿರುವ ಅಧ್ಯಕ್ಷ ಎಂ. ಚಂದ್ರೇಗೌಡ ಅವರ ಹಾಸನದ ಮೊದಲ ಮೇಯರ್ ಆಗಬೇಕು ಎಂಬ ಕನಸಿಗೆ ಪೆಟ್ಟು ಬೀಳುವ ಸಾಧ್ಯತೆ ದಟ್ಟವಾಗಿದೆ.

ಆರು ತಿಂಗಳ ಹಿಂದೆ ನಡೆದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಎಂ. ಚಂದ್ರೇಗೌಡ ಹಾಗೂ ಲತಾದೇವಿ ಆಯ್ಕೆಯಾಗಿದ್ದರು. ಈ ಸಮಯದಲ್ಲಿ ಇರುವ ಒಂದು ವರ್ಷದಲ್ಲಿ ನಾಲ್ವರನ್ನು ಅಧ್ಯಕ್ಷರನ್ನಾಗಿ, ಇಬ್ಬರನ್ನು ಉಪಾಧ್ಯಕ್ಷರನ್ನಾಗಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಅದರಂತೆ ಅಧ್ಯಕ್ಷ ಸ್ಥಾನ ವಹಿಸಿಕೊಂಡವರು 3 ತಿಂಗಳಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಮಾತುಕತೆ ಕೂಡ ಆಗಿತ್ತು. ಆರು ತಿಂಗಳ ಬಳಿಕ ಮಾತಿನಂತೆ ಲತಾದೇವಿ ಅವರು ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅಧ್ಯಕ್ಷ ಎಂ. ಚಂದ್ರೇಗೌಡ ಅವರು ಆರು ತಿಂಗಳಾದರೂ, ‘ಹಾಸನಾಂಬ ಉತ್ಸವ, ಇತರೆ ಕಾರಣಗಳಿಂದ ಆರು ತಿಂಗಳಲ್ಲಿ ಅಧ್ಯಕ್ಷನಾಗಿ ಏನೂ ಕೆಲಸ ಮಾಡಲಾಗಿಲ್ಲ. ಅಧ್ಯಕ್ಷನಾಗಿ ಏನಾದರೂ ಕೆಲಸ ಮಾಡಲು ಮತ್ತಷ್ಟು ಸಮಯ ನೀಡಿ’ ಎಂಬ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡದೆ ಪಟ್ಟು ಹಿಡಿದು ಕುಳಿತಿದ್ದಾರೆ.

ಈ ನಡುವೆ ಹಾಸನ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿ ಕಳೆದ ತಿಂಗಳ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಈ ಮಾಸಾಂತ್ಯದಲ್ಲಿ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಈ ಸಂಬಂಧ ಸರ್ಕಾರದ ಆದೇಶ ಹೊರಬೀಳುವ ಸಾಧ್ಯತೆ ಇದೆ. ಮಹಾನಗರ ಪಾಲಿಕೆಯಾದಲ್ಲಿ ಈಗ ಅಧ್ಯಕ್ಷರಾಗಿದ್ದವರು ಮೇಯರ್ ಆಗಲಿದ್ದಾರೆ. ಹೀಗಾಗಿ ಹಾಸನದ ಮೊದಲ ಮೇಯರ್ ಆಗಬೇಕು ಎಂಬ ಆಸೆಯಲ್ಲಿ ಎಂ.ಚಂದ್ರೇಗೌಡ ಅವರು ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಆದರೆ, ಎಂ.ಚಂದ್ರೇಗೌಡರ ನಿರ್ಧಾರ ಶಾಸಕರಾದ ಎಚ್.ಡಿ. ರೇವಣ್ಣ ಹಾಗೂ ಎಚ್.ಪಿ. ಸ್ವರೂಪ್ ಅವರಲ್ಲಿ ಭಾರೀ ಅಸಮಾಧಾನ ಮೂಡಿಸಿದೆ. ಹೀಗಾಗಿ ಹೇಗಾದರೂ ಮಾಡಿ ಎಂ.ಚಂದ್ರೇಗೌಡ ಅವರನ್ನು ಕೆಳಗೆ ಇಳಿಸಬೇಕು ಎಂದು ಪಣ ತೊಟ್ಟು ನಿಂತಿದ್ದಾರೆ.

ಅಧ್ಯಕ್ಷ ಎಂ. ಚಂದ್ರೇಗೌಡರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಜೆಡಿಎಸ್ ಮುಂದಾಗಿವೆ. ಅಧ್ಯಕ್ಷರ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸುವಾಗ ಸಭೆಯ ಅಧ್ಯಕ್ಷತೆಯನ್ನು ಉಪಾಧ್ಯಕ್ಷರು ನಿರ್ವಹಿಸಬೇಕು. ಹೀಗಾಗಿ ಖಾಲಿ ಇದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಸಿ ಎರಡು ಪಕ್ಷಗಳ ಬೆಂಬಲದೊಂದಿಗೆ ಹೇಮಲತಾ ಕಮಲ್ ಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇನ್ನು ಕೆಲವೆ ದಿನಗಳಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ದಿನ ನಿಗದಿ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಗರಸಭೆಯಲ್ಲಿ 35 ಸದಸ್ಯರು, 1 ಸ್ಥಳೀಯ ಶಾಸಕರು, 1 ವಿಧಾನ ಪರಿಷತ್ ಸದಸ್ಯರು ಹಾಗೂ 1 ಸಂಸದರುಸೇರಿ ಒಟ್ಟು 38 ಸದಸ್ಯ ಬಲವನ್ನು ಹೊಂದಿದೆ. ಇದರಲ್ಲಿ ಜೆಡಿಎಸ್ 17, ಬಿಜೆಪಿ 13, ಕಾಂಗ್ರೆಸ್ 02 ಹಾಗೂ ಪಕ್ಷೇತರರು ಮೂವರು ಇದ್ದಾರೆ. ಅವಿಶ್ವಾಸ ನಿರ್ಣಯಕ್ಕೆ ಮೂರನೇ ಒಂದು ಭಾಗದಷ್ಟು ಮತಗಳ ಅಗತ್ಯವಿದೆ. ಜೆಡಿಎಸ್‌ಗೆ ಬಿಜೆಪಿ ಬೆಂಬಲ ನೀಡಿದರೆ ಮಾತ್ರ ಅವಿಶ್ವಾಸ ನಿರ್ಣಯವನ್ನು ಯಶಸ್ವಿಯಾಗಲಿದೆ. ಅದರಂತೆ ಮೊದಲ ಹೆಜ್ಜೆಯಾಗಿ ಬಿಜೆಪಿ ಉಪಾಧ್ಯಕ್ಷರ ಆಯ್ಕೆಯಲ್ಲಿ ಬಹಿರಂಗ ಬೆಂಬಲ ನೀಡಿದೆ. ಆದರೆ, ಅವಿಶ್ವಾಸ ನಿರ್ಣಯದ ವೇಳೆ ಬೆಂಬಲ ನೀಡಲಿದ್ದಾರಾ? ಎಂದು ಕಾದು ನೋಡಬೇಕಿದೆ. ಅಂತಿಮವಾಗಿ ಮಾಜಿ ಶಾಸಕ ಪ್ರೀತಂ ಜೆ ಗೌಡ ಅವರ ನಿರ್ಧಾರದ ಮೇಲೆ ನಿಂತಿದೆ.