ಕಾರ್ಗಲ್: ಇತಿಹಾಸದಲ್ಲೇ ಮೊದಲ ಬಾರಿ ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.
ವಿಶ್ವಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕರೊನಾ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜೋಗ್ ನಿರ್ವಹಣಾ ಪ್ರಾಧಿಕಾರ ಜೋಗ ಜಲಪಾತದ ಮುಖ್ಯದ್ವಾರವನ್ನು ಸೋಮವಾರದಿಂದ ಮುಂದಿನ ಒಂದು ವಾರದ ಕಾಲ ಬಂದ್ ಮಾಡಿ, ಪ್ರವಾಸಿಗರಿಗೆ ನಿರ್ಬಂಧ ಹೇರಿದೆ.
ಜೋಗ ಜಲಪಾತದ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರವಾಸಿಗರ ವೀಕ್ಷಣೆಯನ್ನು ನಿರ್ಬಂಧಿಸುವ ಇಂತಹ ಘಟನೆ ನಡೆದಿದ್ದು ಇದರಿಂದ ಇಡೀ ಜೋಗ ಜಲಪಾತ ಸ್ತಬ್ಧವಾದಂತಿದೆ. ಮಾರ್ಚ್ ತಿಂಗಳ ಹಿನ್ನೆಲೆಯಲ್ಲಿ ಮೊದಲೇ ಜನರಿಲ್ಲದೆ ಬಿಕೋ ಎನ್ನುತ್ತಿರುವ ಜಲಪಾತ ಪ್ರದೇಶಕ್ಕೆ ಇದೀಗ ಕರೊನಾ ಭೀತಿ ವಕ್ಕರಿಸಿದೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಾ.15ರ ಬೆಳಗ್ಗೆಯಿಂದ ಮಾ.22ರ ಭಾನುವಾರದವರೆಗೆ ಒಂದು ವಾರ ಕಾಲ ಮುಖ್ಯದ್ವಾರವನ್ನು ಬಂದ್ ಮಾಡುವ ಮೂಲಕ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಜೋಗ ಜಲಪಾತ ವೀಕ್ಷಣೆ ಅವಕಾಶವನ್ನು ನಿರ್ಬಂಧಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್.ರಾಮಕೃಷ್ಣ ‘ವಿಜಯವಾಣಿ’ಗೆ ತಿಳಿಸಿದರು.
ಫೋಟೋ ಫ್ಲ್ಯಾಶ್ ಬಂದ್: ಜಲಪಾತದ ವಾಣಿಜ್ಯ ಸಂಕೀರ್ಣದಲ್ಲಿನ ಅಂಗಡಿ ಮುಂಗಟ್ಟುಗಳ ಮಾಲೀಕರು ಬಾಗಿಲು ಮುಚ್ಚಿದರು. ಪ್ರವಾಸಿಗರ ಛಾಯಾಚಿತ್ರವನ್ನು ತೆಗೆಯುವ ವೃತ್ತಿ ಮಾಡುತ್ತಿದ್ದ ಇಲ್ಲಿನ ಫೋಟೋಗ್ರಾಫರ್ಗಳು ಮನೆ ಕಡೆ ಮರಳಿದರು.
ಇಲ್ಲಿನ ಕೆಎಸ್ಟಿಡಿಸಿ ಅಧೀನದ ಡಿಲಕ್ಸ್ ಮಾದರಿಯ ಹತ್ತು ರೂಮ್್ಸ ಹೊಂದಿರುವ ಮಯೂರ ಲಾಡ್ಜ್ ಕೂಡ ಬಂದ್ ಆಯಿತು. ಈಗಾಗಲೇ ಆನ್ಲೈನ್ ಮೂಲಕ ಮುಂಗಡ ಬುಕ್ ಮಾಡಲಾದ ಪ್ರವಾಸಿಗರಿಗೆ ಹಣವನ್ನು ವಾಪಸ್ ನೀಡಲಾಗುತ್ತದೆ.
ಜೋಗ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಭಾನುವಾರ ಪ್ರವಾಸಿಗರಿಗೆ ಹಾಗೂ ಇಲ್ಲಿ ಕಾರ್ಯನಿರ್ವಹಿಸುವ ಸ್ಥಳೀಯ ಸಿಬ್ಬಂದಿಗೆ ಕರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದರು.
ಒಂದು ವಾರದ ನಂತರ ಪರಿಸ್ಥಿತಿ ನೋಡಿ ಮುಂದಿನ ಕ್ರಮಕೈಗೊಳ್ಳಲಾಗುವುದು. ಇಂತಹ ಪ್ರವಾಸಿ ತಾಣಗಳಿಗೆ ವ್ಯಾಪಕವಾಗಿ ಹೊರಭಾಗಗಳಿಂದ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಗುಂಪುಗಳನ್ನು ನಿಯಂತ್ರಿಸಲು ಕಷ್ಟವಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್.ರಾಮಕೃಷ್ಣ ತಿಳಿಸಿದರು.
15 ದಿನದಲ್ಲಿ 9,700 ಪ್ರವಾಸಿಗರು: ಪ್ರಾಧಿಕಾರದ ಅಂಕಿ ಸಂಖ್ಯೆಗಳ ಪ್ರಕಾರ ಮಾರ್ಚ್ 1ರಿಂದ 15ರವರೆಗೆ ಕೇವಲ 9,708 ಭಾರತೀಯ ಹಾಗೂ 26 ವಿದೇಶಿ ಪ್ರವಾಸಿಗರು ಜೋಗ ಜಲಪಾತಕ್ಕೆ ಭೇಟಿ ನೀಡಿದಾರೆ. ಮಳೆಗಾಲದ ಸಂದರ್ಭದಲ್ಲಿ ಮಾಸಿಕ ಒಂದು ಲಕ್ಷ ರೂ. ಸಮೀಪಿಸುವ ಆದಾಯ ಉಳಿದೆಲ್ಲ ಸಂದರ್ಭದಲ್ಲಿ 25-30 ಸಾವಿರ ರೂ. ಆಗುತ್ತದೆ. ಇದೀಗ 10 ಸಾವಿರ ರೂ. ಮಾತ್ರ ಸಂಗ್ರಹವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.