ಬೆಳಗಾವಿ: ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಹ್ಯೂಮ್ ಪಾರ್ಕ್ನಲ್ಲಿ ಆರಂಭವಾದ ಮಾವು ಮತ್ತು ಜೇನು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಮೊದಲ ದಿನ ಸುಮಾರು 45 ಲಕ್ಷ ರೂ. ಮೌಲ್ಯದ 25 ಟನ್ ಮಾವು ಮಾರಾಟವಾಗಿದೆ.
ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಮೇಳಕ್ಕೆ ಚಾಲನೆ ನೀಡಿದರು. ಮಾವು ಮತ್ತು ಜೇನು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವು ಏ.26ರಿಂದ ಏ.28ರವರೆಗೆ ನಡೆಯಲಿದೆ. ಮೇಳದಲ್ಲಿ ನೈಸರ್ಗಿಕವಾಗಿ ಮತ್ತು ವೈಾನಿಕವಾಗಿ ಮಾಗಿಸಿದ ವಿವಿಧ ತಳಿಯ ಮಾವುಗಳು ಲಭ್ಯವಿವೆ. 22 ಸ್ಟಾಲ್ ತೆರೆಯಲಾಗಿದೆ. ಆಪುಸ್, ತೊತಾಪುರಿ, ಕೇಸರ ಸೇರಿ ವಿವಿಧ ತಳಿಯ ಹಣ್ಣುಗಳು ಮಾರಾಟಕ್ಕಿಡಲಾಗಿದೆ. ಅಲ್ಲದೇ ಬೇರೆ ಬೇರೆ ರಾಜ್ಯಗಳ ಮಾವು ತಳಿಗಳಾದ ಟಾಮಿ, ಮಾಯಾ, ಆಮ್ಲೇಟ್, ಪುಲಿಹಾರ, ಚೇರುಕಾ, ರಸಮ್, ಕೇಂಟ್, ಕೊಬರಿ, ಲಿಟ್ಟಿ, ಸುವರ್ಣ, ಬಳೆ ಮಾವು, ಫೀರಂಗಿ, ವಾನರಾಜ್, ಶಿಂಧು, ನೀಲಮ್, ರಾಯಲ್ ಸ್ಪೇಷಲ್, ರತ್ನಾ, ರೂಮಾನಿ ಸೇರಿ 40 ವಿಧದ ಹಣ್ಣುಗಳನ್ನು ರೈತರಿಗೆ ಪರಿಚಯಿಸುವುದಕ್ಕೆ ಪ್ರದರ್ಶನದಲ್ಲಿ ಇಡಲಾಗಿದೆ.
ಉದ್ಘಾಟನೆ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಹಾಂತೇಶ ಮುರಗೋಡ, ಕೆ.ಎನ್.ಶಮಂತ, ಟಿ.ಎಸ್.ಮೋರೆ, ಎಂ.ಎಲ್.ಜಾನಮಟ್ಟಿ, ಮೋಹನ ಗಾಯಕವಾಡ ಇತರರಿದ್ದರು.