ಜಿಲ್ಲೆ

ಮೊಟ್ಟೆ ಎಸೆತ ಪ್ರಕರಣದಲ್ಲಿ ಸರ್ಕಾರದ ಕುಮ್ಮಕ್ಕು: ಮಾಜಿ ಸಚಿವ ಡಾ. ಮಹದೇವಪ್ಪ ಆರೋಪ

ಮೈಸೂರು: ವಿಧಾನಸಭೆಯ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಪ್ರಕರಣದಲ್ಲಿ ರಾಜ್ಯ ಸರ್ಕಾರ ಕುಮ್ಮಕ್ಕು ಇದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆರೋಪಿಸಿದರು.

ಸರ್ಕಾರದ ಕುಮ್ಮಕ್ಕು ಈ ಪ್ರಕರಣದಲ್ಲಿ ಎದ್ದು ಕಾಣುತ್ತಿದೆ. ಆದ್ದರಿಂದ ಹೈಕೋರ್ಟ್ ನ್ಯಾಯಾಧೀಶರ ಮೂಲಕ ತನಿಖೆಯಾಗಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ಕಡ್ಲೆಪುರಿ ತಿನ್ನುತ್ತ ಕುಳಿತುಕೊಳ್ಳುವುದಿಲ್ಲ. ಕಾಂಗ್ರೆಸ್ ಹೆದರಿ ಬಾಯಿ ಮುಚ್ಚಿಕೊಂಡಿರುವ ಪಕ್ಷ ಅಲ್ಲ. ಆರ್‌ಎಸ್‌ಎಸ್, ಎಬಿವಿಪಿ ಕಾರ್ಯಕರ್ತರು ಮೊಟ್ಟೆಯನ್ನು ಬೀದಿಯಲ್ಲಿ ಬೀಸಾಡುತ್ತಿದ್ದಾರೆ. ಇದು ಅವರ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದರು.

ಆರ್‌ಎಸ್‌ಎಸ್‌ನವರಿಗೆ ಎಲ್ಲ ಜಿಲ್ಲೆಗಳಲ್ಲಿ ಭೂಮಿ ಕೊಡುತ್ತಿದ್ದಾರೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೋಮುವಾದವನ್ನು ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ನೆರೆಪೀಡಿತ ಪ್ರದೇಶಗಳ ವೀಕ್ಷಣೆಗೆ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ತೆರಳಿದ್ದರು. ಪ್ರವಾಸದ ವೇಳಾಪಟ್ಟಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗಿತ್ತು. ಆದರೂ ಈ ಘಟನೆ ನಡೆದಿರುವುದು ಸರ್ಕಾರ ಮತ್ತು ಜಿಲ್ಲಾಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.

ವಿಧಾನಸಭೆಯ ನಾಯಕ ಸ್ಥಾನ ಸಂವಿಧಾನದ ಹುದ್ದೆ. ಇದಕ್ಕೆ ಅಗೌರವ ತೋರಲಾಗಿದೆ. ಕೊಡಗು ಸಾಂಸ್ಕೃತಿಕ ಬದುಕಿಗೆ, ಅತಿಥಿ ಸತ್ಕಾರಕ್ಕೆ ಹೆಸರುವಾಸಿಯಾದ ಜಿಲ್ಲೆ. ನಾನು ಎರಡು ವರ್ಷ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಪಕ್ಷಭೇದ ಮರೆತು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಆದರೆ, ಇಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಎರಡು ಪ್ರಮುಖ ಘಟನೆ ನಡೆದಿವೆ. ಆಡಳಿತದ ವರ್ಚಸ್ಸು ಕುಗ್ಗಿದೆ. ಅಭಿವೃದ್ಧಿಯೂ ಮರೀಚಿಕೆಯಾಗಿದೆ. ಬಿಜೆಪಿ ಅಧಿಕಾರದಲ್ಲಿ ರಾಜ್ಯ ಅಭಿವೃದ್ಧಿ ಕಂಡಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಹುಟ್ಟುಹಬ್ಬ ಐತಿಹಾಸಿಕ ಕಾರ್ಯಕ್ರಮವಾಗಿತ್ತು. ಅದರ ಪರಿಣಾಮ ಬಿಜೆಪಿಗೆ ಗಾಬರಿ ಆಗಿದೆ. ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರಿಗೆ ವ್ಯಕ್ತವಾಗಿರುವ ಜನ ಬೆಂಬಲ ನೋಡಿಯೇ ಬಿ.ಎಸ್.ಯಡಿಯೂರಪ್ಪಗೆ ಬಿಜೆಪಿಯಲ್ಲಿ ಉನ್ನತ ಹುದ್ದೆ ನೀಡಲಾಗಿದೆ. ಬಿಜೆಪಿ ಬುಡ ರಾಜ್ಯದಲ್ಲಿ ಅಲುಗಾಡುತ್ತಿದೆ ಎಂದರು.