ಮೈಸೂರು: ರಾತ್ರಿ ಹೊತ್ತಿನಲ್ಲಿ ಕತ್ತಲು ಆವರಿಸಿಕೊಂಡಿದ್ದ ಮೈಸೂರು ಹೊರವರ್ತುಲ ರಸ್ತೆಯಲ್ಲಿರುವ ದೀಪಗಳು ಪ್ರಜ್ವಲಿಸಲು ಶುರು ಮಾಡಿವೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಈ ವಿಷಯವಾಗಿ ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ರಿಂಗ್ ರಸ್ತೆಯಲ್ಲಿ ದೀಪಗಳು ಬೆಳಗಲು ಮತ್ತೆ ಶುರು ಮಾಡಿವೆ. ಡಿ. 10ರೊಳಗೆ ಸರ್ವಿಸ್ ರಸ್ತೆ ಸೇರಿದಂತೆ ಎಲ್ಲ 43 ಕಿ.ಮೀ.ಗಳಲ್ಲೂ ದೀಪಗಳು ಬೆಳಕು ನೀಡಲಿವೆ ಎಂದು ತಿಳಿಸಿದರು.
ಬೆಂಗಳೂರು- ಮೈಸೂರು ರಸ್ತೆ ಸಮೀಪದಲ್ಲಿರುವ ಮಣಿಪಾಲ ಆಸ್ಪತ್ರೆ ಬಳಿಯಿಂದ ನಂಜನಗೂಡು ಕಡೆಗೆ ಸಂಪರ್ಕಿಸುವವರೆಗಿನ ರಸ್ತೆಯಲ್ಲಿ ಅಳವಡಿಸಿರುವ 1,500 ವಿದ್ಯುತ್ ದೀಪಗಳಿಗೆ ಗುರುವಾರ ಚಾಲನೆ ನೀಡಲಾಗಿದೆ. ಈ ರಸ್ತೆಯಲ್ಲಿ ವಿದ್ಯುತ್ ದೀಪಗಳು ಬೆಳಗುವಂತೆ ಮಾಡಬೇಕು ಎಂಬುದು ಜನರ ಬಹುದಿನಗಳ ಬೇಡಿಕೆಯಾಗಿತ್ತು. ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರಿಗೆ ತೊಂದರೆ ಆಗುತ್ತಿತ್ತು. ಬಹಳಷ್ಟು ಮದ್ಯದಂಗಡಿಗಳು ಕೂಡ ಇರುವುದರಿಂದ ಜನರು ತಿರುಗಾಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ವಿವರಿಸಿದರು.
ಈ ಹಿಂದೆ 1.19 ಕೋಟಿ ರೂ. ವಿದ್ಯುತ್ ದೀಪದ ಬಿಲ್ ಬಾಕಿ ಇತ್ತು. ಇದರಿಂದಾಗಿ ದೀಪಗಳನ್ನು ಬೆಳಗಿಸಲು ಸಾಧ್ಯವಾಗಿರಲಿಲ್ಲ. 6 ತಿಂಗಳಿಂದ ಮುಡಾ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಸೆಸ್ಕ್‌ಗೆ ಬಾಕಿ ಇದ್ದ 1.19 ಕೋಟಿ ರೂ. ಮುಡಾದಿಂದ ಪಾವತಿ ಮಾಡಲಾಗಿದೆ. ದೀಪಗಳ ದುರಸ್ತಿಗಾಗಿ ಮುಡಾದಿಂದ 12 ಕೋಟಿ ರೂ. ನೀಡಲಾಗಿದೆ. ವಿದ್ಯುತ್ ಬಿಲ್ ಪಾವತಿ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ಪಾಲಿಕೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ಇದು ಮುಡಾ- ಪಾಲಿಕೆ ಸಮನ್ವಯದ ಯೋಜನೆ ಆಗಿದೆ. ರಿಂಗ್‌ರೋಡ್‌ನಲ್ಲಿ 4,550 ದೀಪಗಳು ಅಳವಡಿಸಬೇಕಿದೆ. ಈ ಪೈಕಿ 3,550 ದೀಪ ಹಾಕಲಾಗಿದೆ. ಉಳಿದೆಡೆ, 3 ದಿನಗಳಲ್ಲಿ ಬಲ್ಬ್‌ಗಳನ್ನು ಹಾಕಲಾಗುವುದು. ಬಹಳಷ್ಟು ಕಡೆಗಳಲ್ಲಿ ವಿದ್ಯುತ್ ಮಾರ್ಗದ ಸಂಪರ್ಕ ಸರಿಯಾಗಿಲ್ಲ. ಅದನ್ನೂ ಸರಿಪಡಿಸಲಾಗುತ್ತಿದೆ. 80 ಕಂಬಗಳನ್ನು ಕೂಡ ಬದಲಿಸಬೇಕಾಗಿದೆ. ಮಣಿಪಾಲ್ ಆಸ್ಪತ್ರೆಯಿಂದ ಕೆಆರ್‌ಎಸ್ ಜಂಕ್ಷನ್‌ವರೆಗೂ ಸಿದ್ಧವಾಗುತ್ತಿದೆ. ಜಂಕ್ಷನ್‌ವಾರು ದೀಪ ಬೆಳಗಿಸಲಾಗುತ್ತಿದೆ. ಪ್ರತಿ 3 ದಿನಕ್ಕೊಂದು ಜಂಕ್ಷನ್‌ವರೆಗೆ ಕೆಲಸ ಮಾಡಿ, ಡಿ.10ರ ಒಳಗೆ ಎಲ್ಲ ಕಡೆಯೂ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
43 ಕಿ.ಮೀ. ವರ್ತುಲ ರಸ್ತೆಯಲ್ಲಿ 86 ಕಿ.ಮೀ. ಕೇಬಲ್ ಅಳವಡಿಸಬೇಕಿದೆ. ಹಿಂದೆ ಅಳವಡಿಸಿದ್ದ ಕೇಬಲ್‌ಗಳು ಹಾಳಾಗಿದ್ದವು. ಆದ್ದರಿಂದ ಹೊಸದಾಗಿ ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ. ಈಗಾಗಲೇ 80 ಕಿ.ಮೀ.ನಷ್ಟು ಕೇಬಲ್‌ಗಳನ್ನು ಹಾಕಲಾಗಿದೆ ಎಂದರು.