ಭದ್ರಾವತಿ: ಮೈಸೂರು ಯದುವೀರರ ವಂಶಸ್ಥರಿಂದ ಆಚರಣೆೆಗೆ ಬಂದ ದಸರಾ ಮಹೋತ್ಸವಕ್ಕೆ ತನ್ನದೆ ಆದ ವೈಶಿಷ್ಟವಿದೆ. ಮೈಸೂರು ಆಸ್ಥಾನಕ್ಕೂ ಭದ್ರಾವತಿಗೂ ಸಾಕಷ್ಟು ಅವಿನಾಭಾವ ಸಂಬಂಧವಿದೆ. ಬೆಂಕಿಪುರ ಭದ್ರಾವತಿಯಾಗಲು ಜಯಚಾಮ ರಾಜೇಂದ್ರ ಒಡೆಯರ್ ಹಾಗೂ ನಾಲ್ವಾಡಿ ಕೃಷ್ಣರಾಜ ಒಡೆಯರ್ ಕಾರಣ. ಅವರ ಕಾಲದಲ್ಲಿ ಮೈಸೂರು ಸಂಸ್ಥಾನವಲ್ಲದೆ ಈ ನಗರವೂ ಸಹ ಕಾರ್ಖಾನೆಗಳ ಉಗಮ ಹಾಗೂ ಅಭಿವೃದ್ಧಿ ಕಾಣಲು ಸಾಧ್ಯವಾಯಿತು ಎಂದು ಹಿರಿಯ ಕಾರ್ಮಿಕ ಮುಖಂಡ ಡಿ.ಸಿ.ಮಾಯಣ್ಣ ಹೇಳಿದರು.
ನಗರಸಭೆ ಆಯೋಜಿಸಿರುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ಸೋವವಾರ ನಗರಸಭೆ ಆವರಣದಲ್ಲಿರುವ ಚಾಮುಂಂಡೇಶ್ವರಿ ದೇವಿಗೆ ಪುಷ್ಪನಮನ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಸರ್ ಎಂ.ವಿಶ್ವೇಶ್ವರಯ್ಯನವರ ಚಿಂತನೆಯಿಂದ ನಗರದಲ್ಲಿ ವಿಐಎಸ್‌ಎಲ್ ಸ್ಥಾಪನೆಗೊಂಡರೆ, ಮಿರ್ಜಾ ಇಸ್ಮಾಯಿಲ್ ಅವರಿಂದ ಎಂಪಿಎಂ ಕಾರ್ಖಾನೆ ಆರಂಭಗೊಂಡಿತು. ಸುಮಾರು 20 ಸಾವಿರ ಕುಟುಂಬಗಳು ನೆಲೆ ಕಂಡುಕೊಳ್ಳಲು ಸಾಧ್ಯವಾಯಿತು. ಮೈಸೂರು ಮಹಾರಾಜರ ಕಾಲದಲ್ಲಿ ಆರಂಭವಾದ ಕಾರ್ಖಾನೆಗಳು ನಷ್ಟದ ದಾರಿ ಹಿಡಿದು ಮುಚ್ಚಿ ಹೋಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದು ಕೋರಿದರು.
ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿ, ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳುತ್ತೇನೆ ಮುಂದಿನ ಚುನಾವಣೆಯಲ್ಲಿ ನನ್ನ ಸರ್ಕಾರ ಅಧಿಕಾರ ಹಿಡಿಯಲಿದ್ದು, ನಾನು ಸಹ ಸಚಿವನಾಗಿ ವಿಐಎಸ್‌ಎಲ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುತ್ತೇನೆ. ಇಲ್ಲವೆ ಬಂಡವಾಳ ತೊಡಗಿಸಿ ಅಭಿವೃದ್ಧಿ ಮಾಡುತ್ತೇನೆ. ಮುಚ್ಚಿರುವ ಎಂಪಿಎಂ ಕಾರ್ಖಾನೆಯನ್ನು ಪುನರ್ ಆರಂಭಿಸಿ ಇಲ್ಲಿನ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುತ್ತೇನೆ ಎಂದರು.
ಶಕ್ತಿದೇವತೆ ಚಾಮುಂಡೇಶ್ವರಿ ತಾಯಿ ಕ್ಷೇತ್ರದ ಮತದಾರರ ಮೇಲೆ ಬಿದ್ದಿರುವ ದುಷ್ಟಶಕ್ತಿ ನಿರ್ಮೂಲನೆ ಮಾಡಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅಧಿಕಾರ ಹೊಂದಿ ನಗರಸಭೆಗೆ 25 ಲಕ್ಷ ರೂ. ಅನುದಾನ ತರುವ ಮೂಲಕ ನಾಡಹಬ್ಬ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಮಕ್ಕಳಲ್ಲಿ ಆಧ್ಯಾತ್ಮಿಕ ಭಾವನೆ ಮೂಡಲಿ ಎಂದು ಆಚರಣೆಗೆ ಬಂದ ಹಬ್ಬವನ್ನು ಕ್ಷೇತ್ರದ ಸಮಸ್ತ ಜನತೆ ಯಾವುದೆ ಜಾತಿ ಬೇಧವಿಲ್ಲದೆ ಒಗ್ಗಟ್ಟಾಗಿ ಆಚರಿಸೋಣ ಎಂದರು.