ಜಿಲ್ಲೆ

ಮೈಸೂರು ಸಂಸದರ ಕಚೇರಿಗೆ ಸೆ.4 ರಂದು ರೈತರಿಂದ ಮುತ್ತಿಗೆ

ಮೈಸೂರು: ಕಾವೇರಿ ಹಾಗೂ ಮಹದಾಯಿ ನದಿ ನೀರಿನ ವಿವಾದ ಕುರಿತು ಸಂಸದರ ಮೌವನ್ನು ಖಂಡಿಸಿ ಸೆ.4 ರಂದು ರಾಜ್ಯದ ಎಲ್ಲ ಲೋಕಸಭಾ ಸದಸ್ಯರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಹೇಳಿದರು.

ಕಬಿನಿ ಹಾಗೂ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸಿ ರಾಜ್ಯದ ರೈತರ ಹಿತವನ್ನು ರಾಜ್ಯ ಸರ್ಕಾರ ಬಲಿಕೊಡುತ್ತಿದೆ. ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಿ ರೈತರ ಹಿತ ಕಾಪಾಡಬೇಕು. ಈ ವಿಚಾರದಲ್ಲಿ ರಾಜ್ಯದ ಸಂಸದರು ರಾಜ್ಯದ ಪರವಾಗಿ ಧ್ವನಿ ಎತ್ತಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

2023-24ನೇ ಸಾಲಿನ ಕಬ್ಬಿನ ದರ ಏರಿಕೆ ಮಾಡಬೇಕು, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಅಸಮರ್ಪಕ ಪೂರೈಕೆಯಾಗುತ್ತಿದ್ದು, ಸಮರ್ಪಕ ಪೂರೈಕೆಗೆ ಕ್ರಮ ವಹಿಸಬೇಕು, ರಾಜ್ಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರವನ್ನು ಕಡೆಗಣಿಸಲಾಗಿದ್ದು, ಇನ್ನು ಮುಂದಾದರೂ ಕೃಷಿಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಬೆಳೆದ ಬೆಳೆಗಳು ಮಳೆ ಇಲ್ಲದೆ ಒಣಗುತ್ತಿದೆ. ರಾಜ್ಯದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ಜನ ಹಾಗೂ ಜಾನುವಾರುಗಳ ರಕ್ಷಣೆಗೆ ರಾಜ್ಯ ಸರ್ಕಾರ ನಿರ್ಲಕ್ಷೃ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ವೀರನಗೌಡ ಪಾಟೀಲ್, ಸುರೇಶ್ ಪಾಟೀಲ್, ರಮೇಶ್ ಉಗಾರ್, ಜಿ.ವಿ. ಲಕ್ಷ್ಮೀದೇವಿ, ಎಂ.ಬಿ. ಚೇತನ್, ಸೋಮಶೇಖರ್, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ ಇದ್ದರು.