ಜಿಲ್ಲೆ

ಮೈಸೂರು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ: ಪೊಲೀಸ್ ಕಮೀಷನರ್ ಬಿ.ರಮೇಶ್ ಬಾನೋತ್ ಮಾಹಿತಿ

ವಿಜಯವಾಣಿ ವಿಶೇಷ ಮೈಸೂರು
ನಗರದ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ 250 ನೂತನ ಸಿಸಿ ಕ್ಯಾಮರಾ, 10 ಕಡೆ ಸಿಗ್ನಲ್ ಅಳವಡಿಕೆ, ಹೊಸ ಸಂಚಾರ ಠಾಣೆ ನಿರ್ಮಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.
ನಂ. 1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಮಂಗಳವಾರ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ದಿನದಿಂದ ದಿನಕ್ಕೆ ನಗರ ಬೆಳೆಯುತ್ತಿದ್ದು, ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿದೆ. ನಗರದಲ್ಲಿ 18 ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳಿವೆ. ಆದರೆ ಸಂಚಾರ ಠಾಣೆಗಳು ಕೇವಲ 5 ಇವೆ. ಸದ್ಯ ಸಿಬ್ಬಂದಿ ಕೊರತೆ ಸುಧಾರಿಸಿದೆ. ನಗರ ವಿಸ್ತಾರಗೊಳ್ಳುತ್ತಿರುವುದರಿಂದ ರಿಂಗ್‌ರೋಡ್ ಪಕ್ಕದ ಬಡಾವಣೆಗಳನ್ನು ನಗರ ಪೊಲೀಸ್ ವ್ಯಾಪ್ತಿಗೆ ಒಳಡಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೃಹತ್ ನಗರಪಾಲಿಕೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ಪೂರಕವಾಗಿ ನಗರಪಾಲಿಕೆ ಎಷ್ಟು ವ್ಯಾಪ್ತಿ ಇರುತ್ತದೆಯೋ ಅಲ್ಲಿಯವರೆಗೂ ಪೊಲೀಸ್ ಕಮೀಷನರ್ ವ್ಯಾಪ್ತಿಯನ್ನು ವಿಸ್ತರಿಸುವ ಕುರಿತು ಚಿಂತಿಸಲಾಗಿದೆ ಎಂದರು.
ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಮೇಲೆ ನಿಗಾ ಇಡಲು ಹೆಚ್ಚುವರಿಯಾಗಿ 250 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ನಿಯಮ ಉಲ್ಲಂಘಿಸಿದವರಿಗೆ ಆನ್‌ಲೈನ್‌ನಲ್ಲೇ ಪ್ರಕರಣ ದಾಖಲಿಸಿ, ಮನೆಗೆ ನೋಟಿಸ್ ಕಳುಹಿಸಲಾಗುವುದು. ದಂಡ ಕಟ್ಟದಿದ್ದರೆ ನ್ಯಾಯಾಲಯಕ್ಕೆ ಪ್ರಕರಣ ಕಳುಹಿಸಲಾಗುವುದು. ಹಲವೆಡೆ ಸಂಜೆ ಹಾಗೂ ಬೆಳಗ್ಗೆ ಸಮಯದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಇಂತಹ 10 ಸ್ಥಳಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಸಿಗ್ನಲ್ ಅಳವಡಿಸುವ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಫುಟ್‌ಪಾತ್ ಮೇಲೆ ನಿಗಾ:
ಫುಟ್‌ಪಾತ್‌ಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಕಡೆ ಕಾರ್ಯಾಚರಣೆ ನಡೆಸಲಾಗುವುದು. ಈಗಾಗಲೇ ಅಂತಹ ಪ್ರದೇಶಗಳನ್ನು ಗುರುತಿಸುವಂತೆ ನಿರ್ದೇಶನ ನೀಡಲಾಗಿದೆ. ನಗರಪಾಲಿಕೆ, ಜಿಲ್ಲಾಡಳಿತದೊಂದಿಗೆ ಕಾರ್ಯಾಚರಣೆ ನಡೆಸಿ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಚಟುವಟಿಕೆ ತೆರವುಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಪಾರ್ಕ್‌ಗಳಲ್ಲಿ ಗಾಂಜಾ, ಸಲೂಷನ್ ಸೇವನೆ ನಡೆಯುತ್ತಿರುವುದಲ್ಲದೆ, ತಡರಾತ್ರಿವರೆಗೂ ಆಟವಾಡುತ್ತ ಅಕ್ಕಪಕ್ಕದವರಿಗೆ ತೊಂದರೆ ನೀಡಲಾಗುತ್ತಿದೆ ಎನ್ನುವ ದೂರು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಉದ್ಯಾನಗಳಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಗಸ್ತು ಹೆಚ್ಚಿಸಲಾಗುವುದು ಎಂದರು.
ಶಾಲಾ, ಕಾಲೇಜಿನಲ್ಲಿ ಜಾಗೃತಿ:
ಯುವ ಜನಾಂಗದಲ್ಲಿಯೇ ಸಂಚಾರ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಪ್ರೌಢಶಾಲೆ, ಕಾಲೇಜು ಹಂತದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಮುಂದಿನ ವಾರದಿಂದ ನಗರದ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನಕ್ಕೊಂದು ಶಾಲೆ, ಕಾಲೇಜಿನಲ್ಲಿ ಸಂಚಾರ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ತರಬೇತಿ ಪಡೆದ ಸಿಬ್ಬಂದಿ ಮಾರ್ಗದರ್ಶನ ನೀಡಲಿದ್ದಾರೆ. ಪಾಲಕರು ಸಹ ಮಕ್ಕಳಿಗೆ ವಾಹನಗಳನ್ನು ಕೊಡುವಾಗ ಬಹಳ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.