ಅರ್ಧ ಶತಮಾನದಷ್ಟು ಭವ್ಯ ಇತಿಹಾಸ ಇರುವ ವಿದೇಶಿ ಭಾಷೆಗಳ ಶಾಲೆ(ಸ್ಕೂಲ್ ಆಫ್ ಫಾರಿನ್ ಲಾಂಗ್ವೇಜಸ್) ವಿದ್ಯಾರ್ಥಿಗಳ ಕೊರತೆಯಿಂದಾಗಿ ಸ್ತಬ್ಧವಾಗಿದೆ. ಇದು ಈಗಲೂ ಸಕ್ರಿಯವಾಗಿದೆ. ಆದರೆ, ಕಲಿಯುವವರೇ ಇಲ್ಲ..!
ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಆಗಿರುವ ಮಾನಸಗಂಗೋತ್ರಿಯಲ್ಲಿರುವ ಮಾನವಿಕ ಕಟ್ಟಡದಲ್ಲಿರುವ ಈ ವಿಭಾಗವು ಇದೀಗ ಖಾಲಿ ಹೊಡೆಯುತ್ತಿದೆ. ಕಳೆದ ಒಂದು ವರ್ಷದಿಂದ ಕಲಿಕಾರ್ಥಿಗಳಿಲ್ಲದೇ ಬಿಕೋ ಎನ್ನುತ್ತಿದೆ.
ವಿದೇಶಿ ಭಾಷೆಗಳ ಶಾಲೆಯು ಭಾರತದ ಅತ್ಯಂತ ಹಳೆಯ ವಿದೇಶಿ ಭಾಷಾ ವಿಭಾಗಗಳಲ್ಲಿ ಒಂದಾಗಿದೆ. ಇದು 1972ರಲ್ಲಿ ಸ್ಥಾಪನೆಗೊಂಡಿದೆ. ಬಳಿಕ ಇದು ಸ್ವಾಯತ್ತತೆ, ಸ್ವತಂತ್ರ ಸ್ಥಾನಮಾನ ಪಡೆದುಕೊಂಡಿತು.
ಭಾರತೀಯ ವಿದ್ಯಾರ್ಥಿಗಳಿಗೆ ಸರಿಹೊಂದುವಂತೆ ಅಂತಾರಾಷ್ಟ್ರೀಯ ಮಾದರಿಯ ಪ್ರಕಾರ ವಿವಿಧ ಕೋರ್ಸ್ ನೀಡುತ್ತಿತ್ತು. ಫ್ರೆಂಚ್, ಜರ್ಮನ್, ರಷಿಯನ್, ಚೀನಿ, ಇಟಲಿ, ಜಪಾನಿ ಭಾಷೆಗಳನ್ನು ಕಲಿಸಲಾಗುತ್ತಿತ್ತು. ಈ ವಿದೇಶಿ ಭಾಷೆ ಕಲಿತ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ ಕೋರ್ಸ್ ಮೈವಿವಿಯಿಂದ ನೀಡಲಾಗುತ್ತಿತ್ತು. ಇಲ್ಲಿ ಕಲಿತವರಿಗೆ ವಿದೇಶದಲ್ಲಿ ಉನ್ನತ ಅಧ್ಯಯನ ಮಾಡಲು, ಉದ್ಯೋಗ ಅವಕಾಶಕ್ಕೆ ಅನುಕೂಲವಾಗುತ್ತಿತ್ತು. ಆದರೀಗ ಈ ಅವಕಾಶವೇ ಇಲ್ಲದಂತಾಗಿದೆ.
ಇಲ್ಲಿರುವ ವಿದೇಶಿ ಭಾಷೆಗಳ ಕಲಿಕೆಗೆ ವಿದ್ಯಾರ್ಥಿಗಳಿಂದ ಸ್ಪಂದನೆ ಏನೋ ಇದೆ. ಆದರೆ, ದುಬಾರಿ ಶುಲ್ಕದಿಂದ ದಾಖಲಾತಿ ಹೆಚ್ಚಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಸ್ನಾತಕ ಪದವಿ ಶುಲ್ಕದಷ್ಟೇ ಈ ಸರ್ಟಿಫಿಕೇಟ್, ಡಿಪ್ಲೊಮಾ ಕೋರ್ಸ್‌ಗೂ ಶುಲ್ಕ ಪಾವತಿಬೇಕಿದೆ. ಇದು ವಿದ್ಯಾರ್ಥಿಗಳಿಗೆ ಹೊರೆ ಎನಿಸಿದೆ.
ಈ ಕಾರಣದಿಂದಲೇ ವಿದೇಶಿ ಭಾಷೆಗಳನ್ನು ಕಲಿಯಲು ವಿದ್ಯಾರ್ಥಿಗಳು ಬರುತ್ತಿಲ್ಲ.
ಜತೆಗೆ, ಮೈಸೂರು ವಿವಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ದೊರೆಯುತ್ತದೆ. ಆದರೆ, ಈ ಭಾಷಾ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. ಇದರೊಂದಿಗೆ ವಿವಿಧ ಸವಲತ್ತುಗಳೂ ಸಿಗುತ್ತಿಲ್ಲ. ಇದು ಸಹ ವಿದ್ಯಾರ್ಥಿಗಳ ಸಂಖ್ಯೆ ಕುಸಿಯಲು ಮತ್ತೊಂದು ಕಾರಣ.
ವಿದೇಶಿ ಭಾಷೆಗಳ ಬೋಧಿಸಲು ಉಪನ್ಯಾಸಕರೇ ಇಲ್ಲ. ಇಬ್ಬರು ಕಾಯಂ ಬೋಧಕರು ನಿವೃತ್ತಿಯಾಗಿ ವರ್ಷಗಳೇ ಉಳಿದಿವೆ. ಖಾಲಿ ಆಗಿರುವ ಈ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಇದನ್ನು ಸರಿದೂಗಿಸಲು ಅತಿಥಿ ಉಪನ್ಯಾಸಕರ ಮೂಲಕ ಪ್ರಯತ್ನ ಮಾಡಲಾಯಿತು. ಅದು ಸಹ ನಿರೀಕ್ಷಿತ ಮಟ್ಟದಲ್ಲಿ ಫಲಕೊಟ್ಟಿಲ್ಲ.
ವಿದ್ಯಾರ್ಥಿ ಅಭಾವದಿಂದ ಆರು ವಿದೇಶಿ ಭಾಷೆಗಳಿಂದ ಮೂರು ಭಾಷೆಗಳನ್ನು ಮಾತ್ರ ಕಲಿಸಲಾಗುತ್ತಿತ್ತು. ಜರ್ಮನ್ ಭಾಷೆ ಬೋಧಿಸುತ್ತಿದ್ದ ಅತಿಥಿ ಉಪನ್ಯಾಸಕರು ಬೆಂಗಳೂರಿಗೆ ಹೋದರು. 2ನೇ ಭಾಷೆಯಾಗಿ ಕಲಿಯುತ್ತಿದ್ದ ಫ್ರೆಂಚ್ ಭಾಷಾ ಬೋಧಕರು ಬಿಟ್ಟು ಹೋದರು. ಅವರ ಸ್ಥಾನಕ್ಕೆ ಯಾರೂ ಬರಲಿಲ್ಲ. ಇಟಲಿ ಭಾಷೆ ಹೇಳಿಕೊಡಲು ಯಾರೂ ಇಲ್ಲ.
ಇಟಲಿ ರಾಯಭಾರಿ ಕಚೇರಿಯಿಂದ ನಿಯೋಜನೆಗೊಂಡಿದ್ದ ಅತಿಥಿ ಉಪನ್ಯಾಸಕರಿಗೆ ಮೈವಿವಿ ಸಂಬಳ ಕೊಡುತ್ತಿಲ್ಲ. ಕೊಠಡಿ ಸೌಲಭ್ಯ ಮಾತ್ರ ಕಲ್ಪಿಸಿಕೊಡಲಾಗಿತ್ತು. ಅವರು ಇಲ್ಲಿಯಿಂದ ನಿರ್ಗಮಿಸಿದರು. ಹೀಗಾಗಿ, ಅತಿಥಿ ಉಪನ್ಯಾಸಕರೂ ಇಲ್ಲ. ವಿದ್ಯಾರ್ಥಿಗಳೂ ಇಲ್ಲ. ಬರೀ ಬೋಧಕೇತರ ಸಿಬ್ಬಂದಿ, ಸಂಚಾಲಕರು, ಪೀಠೋಪಕರಣಗಳು ಮಾತ್ರ ಇವೆ.
ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ ಕೋರ್ಸ್ ನಡೆಸಲು ಕನಿಷ್ಠ 15 ವಿದ್ಯಾರ್ಥಿಗಳು ಇರಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಜಾರಿ ಮಾಡಿರುವ ನಿಯಮ ಸಹ ತೊಡಕಾಗಿದೆ. ಕನಿಷ್ಠ 15 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಿಲ್ಲ. ಇದರಿಂದಾಗಿ ಬೋಧನಾ ಚಟುವಟಿಕೆ ಮುಂದುವರಿಸಿಕೊಂಡು ಹೋಗಲು ಅಡ್ಡಿಯಾಗಿದೆ. ಆದಾಗ್ಯೂ, ಇದನ್ನು ಮುಚ್ಚಲು ಹೋಗಿಲ್ಲ. ಬಾಗಿಲು ಸಹ ಹಾಕಿಲ್ಲ. ಯಥಾಸ್ಥಿತಿ ಕಾಯ್ದುಕೊಂಡು ಹೋಗಲಾಗುತ್ತಿದೆ. ಹೀಗಾಗಿ, ವಿದೇಶ ಭಾಷೆಗಳ ಶಾಲೆಗೆ ಜೀವವಿದ್ದರೂ ಇಲ್ಲದಂತಹ ಸ್ಥಿತಿಯಲ್ಲೇ ಹೊಯ್ದಡುತ್ತಿದೆ.
ಇಲ್ಲಿ ವಿದೇಶಿ ಭಾಷೆಗಳಲ್ಲಿ ನಾಲ್ಕು ಹಂತದ ಅರೆಕಾಲಿಕ ಕೋರ್ಸ್ ನೀಡಲಾಗುತ್ತಿತ್ತು. ಇದನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಬಹುದು. ಇದರಿಂದಾಗಿ ವಿದೇಶದಲ್ಲಿ ಉನ್ನತ ಅಧ್ಯಯನವನ್ನು ಬಯಸುವ ಮತ್ತು ವಿದೇಶಿ ಭಾಷೆಯನ್ನು ಕಲಿಯಬೇಕಾದ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಜತೆಗೆ ಭಾಷೆಯಲ್ಲಿ ಸಾಮರ್ಥ್ಯ ಪಡೆಯಲು ಅವಕಾಶ ದೊರೆಯುತ್ತಿತ್ತು. ತರಗತಿ ಸಾಮಾನ್ಯವಾಗಿ ಮಧ್ಯಾಹ್ನ 4ರಿಂದ ರಾತ್ರಿ 8.30ರವರೆಗೆ ನಡೆಸಲಾಗುತ್ತಿತ್ತು. ಅಪರೂಪದ ಸಂದರ್ಭಗಳಲ್ಲಿ ಬೆಳಗ್ಗೆ ಮತ್ತು ವಾರದ ದಿನಗಳಲ್ಲಿ ಪರಿಸ್ಥಿತಿ ಅಗತ್ಯವಿರುವಾಗ ತರಗತಿಗಳು ಕೈಗೊಳ್ಳಲಾಗುತ್ತಿತ್ತು.
ರಷ್ಯಾ-ಉಕ್ರೇನ್ ನಡುವಿನ ಕದನದ ಕಾರ್ಮೋಡದ ಪರಿಣಾಮವೂ ಬೀರಿದೆ. ಯುದ್ಧ ಪೀಡಿತ ರಷ್ಯಾಕ್ಕೆ ಇಲ್ಲಿಯ ವಿದ್ಯಾರ್ಥಿಗಳು ಹೋಗಲು ಮನಸ್ಸು ಮಾಡುತ್ತಿಲ್ಲ. ಇದರಿಂದ ರಷಿಯನ್ ಭಾಷೆ ಕಲಿಯಲು ಸ್ಥಳೀಯರು ಆಸಕ್ತಿ ತೋರುತ್ತಿಲ್ಲ. ಇದು ಈ ಭಾಷೆ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಕೆಲ ವಿದೇಶಿ ಭಾಷೆಗಳನ್ನು ಕರಗತ ಮಾಡಿಕೊಂಡರೆ ವಿದೇಶಗಳಲ್ಲಿ ಉದ್ಯೋಗ ಮಾತ್ರವಲ್ಲ, ವೇತನವನ್ನೂ ಜಾಸ್ತಿ ಪಡೆಯಬಹುದು. ಬೆಂಗಳೂರು, ಹೈದ್ರಾಬಾದ್, ಚೆನ್ನೈ, ಮುಂಬೈನಲ್ಲಿರುವ ಜರ್ಮನಿ, ಫ್ರೆಂಚ್, ಜಪಾನ್ ಸೇರಿದಂತೆ ವಿದೇಶಿ ಮೂಲದ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಾಗಿರುವುದರಿಂದ ಇಂತಹ ಕಂಪನಿಗಳಲ್ಲಿ ಆಯಾ ದೇಶದ ಭಾಷೆ ಬಲ್ಲವರಿಗೆ ಮೊದಲ ಆದ್ಯತೆ ಕೊಡುತ್ತವೆ. ಜತೆಗೆ, ವಿದೇಶಿದ ಸಂಸ್ಕೃತಿ, ಮೌಲ್ಯ, ಜ್ಞಾನ ಅರಿವು ಹೆಚ್ಚಾಗಲಿದೆ. ಜಗತ್ತನ್ನು ನೋಡುವ ದೃಷ್ಟಿಕೋನ ಬದಲಾಗಲಿದೆ. ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಸಂಪರ್ಕಿಸಲು ಸಾಧ್ಯವಾಗಲಿದೆ. ವಿದೇಶಿ ಪ್ರವಾಸಕ್ಕೆ ಹೋದಲಾಗಲೂ ಅನುಕೂಲವಾಗಲಿದೆ. ಹೀಗಾಗಿ, ವಿದೇಶಿ ಭಾಷೆಗಳ ಕಲಿಕೆಗೆ ಬೇಡಿಕೆ ಹೆಚ್ಚು.