ಜಿಲ್ಲೆ

ಮೈಸೂರು ವಿಶ್ವವಿದ್ಯಾಲಯ ದೂರ ಶಿಕ್ಷಣ ಸ್ಥಗಿತ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ದೇಶದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷೆಯ ‘ದೂರ ಶಿಕ್ಷಣ’ ವಿಭಾಗ ಬಹುತೇಕ ಸ್ಥಗಿತಗೊಂಡಿದೆ. ಆರಂಭಗೊಂಡ 5 ವರ್ಷದಲ್ಲೇ ಇದು ಕಣ್ಣುಮುಚ್ಚಿದೆ.

ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಹೊಸ ಪ್ರವೇಶಾತಿಯನ್ನು ಈಗಾಗಲೇ ನಿಲ್ಲಿಸಲಾಗಿದೆ. ಶೈಕ್ಷಣಿಕ ಚಟುವಟಿಕೆ ಪೂರ್ಣಗೊಳಿಸಲು ಹಳೆಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸ್ಥಗಿತ ಪ್ರಕ್ರಿಯೆ ಶೇ.90ರಷ್ಟು ಮುಗಿದಿದ್ದು, ಉಳಿದ ಪ್ರಕ್ರಿಯೆ 2023ರ ಒಳಗೆ ಕೊನೆಗೊಳ್ಳಲಿದೆ. ಇದರೊಂದಿಗೆ, ದೂರ ಶಿಕ್ಷಣ ವಿಭಾಗ ಶೀಘ್ರದಲ್ಲೇ ಇತಿಹಾಸದ ಪುಟ ಸೇರಿಕೊಳ್ಳಲಿದೆ.

ಮುಚ್ಚಲು ಸರ್ಕಾರದ ಸೂಚನೆ:
ದೂರ ಶಿಕ್ಷಣ ಚಟುವಟಿಕೆಯನ್ನು ಸಾಂಪ್ರದಾಯಿಕ ವಿ.ವಿ.ಗಳಿಂದ ರಾಜ್ಯ ಸರ್ಕಾರ ಕಿತ್ತುಕೊಂಡಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವನ್ನು ರಾಜ್ಯದ ದೂರ ಮತ್ತು ಮುಕ್ತ ಶಿಕ್ಷಣ ನೀಡುವ ಏಕೈಕ ವಿಶ್ವವಿದ್ಯಾಲಯ ಎಂದು ಪರಿಗಣಿಸಿ ಕಾಯ್ದೆ ರೂಪಿಸಿದೆ. ಆದ್ದರಿಂದ ರಾಜ್ಯದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ನಡೆಸುತ್ತಿದ್ದ ದೂರ ಶಿಕ್ಷಣ ವಿಭಾಗದ ಚಟುವಟಿಕೆ ಸ್ಥಗಿತಗೊಳಿಸಲು ಸರ್ಕಾರ ಸೂಚಿಸಿದೆ. ಹೀಗಾಗಿ, ತಾನು ನಡೆಸುತ್ತಿರುವ ದೂರ ಶಿಕ್ಷಣ ವಿಭಾಗವನ್ನು ಮುಚ್ಚಲು ಮೈಸೂರು ವಿವಿ ತೀರ್ಮಾನಿಸಿದೆ.

13 ವಿದ್ಯಾರ್ಥಿಗಳು ಮಾತ್ರ ಕಲಿಕೆ:
ದೂರ ಶಿಕ್ಷಣ ವಿಭಾಗದಲ್ಲಿ ಸದ್ಯ 13 ವಿದ್ಯಾರ್ಥಿಗಳು ಮಾತ್ರ ಓದುತ್ತಿದ್ದಾರೆ. ಸ್ನಾತಕ, ಸ್ನಾತಕೋತ್ತರ ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಬೆಸ ಮತ್ತು ಸಮ ಸೆಮಿಸ್ಟರ್‌ನ ಪುನರಾವರ್ತಿತ ಪರೀಕ್ಷೆ ನಡೆಸಿ ಇಡೀ ದೂರ ಶಿಕ್ಷಣ ಕಾರ್ಯಕ್ರಮವನ್ನು ಹಂತ ಹಂತವಾಗಿ ಮುಕ್ತಾಯಗೊಳಿಸಲು ಕ್ರಮ ವಹಿಸಲಾಗಿದೆ. ಅದಕ್ಕಾಗಿ 6 ತಿಂಗಳ ಬದಲಿಗೆ 3 ತಿಂಗಳಿಗೆ ಒಂದಾವರ್ತಿಯ ಅವಧಿಯಲ್ಲಿ ಪುನರಾವರ್ತಿತ ಪರೀಕ್ಷೆ ನಡೆಸಲು ವಿ.ವಿ. ಮುಂದಾಗಿದೆ.

18 ಕೋರ್ಸ್‌ಗಳು ಬಂದ್:
ದೂರ ಶಿಕ್ಷಣ ಪದ್ಧತಿಯಡಿ ಉನ್ನತ ಶಿಕ್ಷಣ ನೀಡಲು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ(ಯುಜಿಸಿ) 2018ರಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡಿತ್ತು. 2018-19ರಿಂದ 2022-23ರ ವರೆಗೆ ಮಾನ್ಯತೆಯನ್ನೂ ನೀಡಿತ್ತು. ಈ ಹಿನ್ನೆಲೆಯಲ್ಲಿ ಸ್ನಾತಕ ವಿಭಾಗದ ಬಿಎ (ಅರ್ಥಶಾಸ್ತ್ರ, ಇಂಗ್ಲಿಷ್, ಇತಿಹಾಸ, ಕನ್ನಡ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ), ಬಿಬಿಎಂ, ಬಿಕಾಂ, ಬಿಎಸ್ಸಿ, ಐಟಿ, ಸ್ನಾತಕೋತ್ತರ ವಿಭಾಗದ ಎಂಎ (ಅರ್ಥಶಾಸ್ತ್ರ, ಇಂಗ್ಲಿಷ್, ಇತಿಹಾಸ, ಕನ್ನಡ, ರಾಜ್ಯಶಾಸ್ತ್ರ), ಎಂಕಾಂ, ಎಂಎಸ್ಸಿ ಮಾಹಿತಿ ತಂತ್ರಜ್ಞಾನ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡಿತ್ತು. ಬಾಹ್ಯ ಶಿಕ್ಷಣ ಪದ್ಧತಿಯಲ್ಲಿ ಮೊದಲ ಬಾರಿಗೆ ‘ಆಯ್ಕೆ ಆಧಾರಿತ ಗುಣಾಂಕ ಪದ್ಧತಿ (ಚಾಯ್ಸಬೇಸ್ಡ್ ಕ್ರೆಡಿಟ್ ಸಿಸ್ಟಂ-ಸಿಬಿಸಿಎಸ್)’ ಅಡಿಯಲ್ಲೇ ಶಿಕ್ಷಣ ನೀಡುತ್ತಿತ್ತು. ಆದರೀಗ ಈ ಕೋರ್ಸ್‌ಗಳೆಲ್ಲ ಬಂದ್ ಆಗಿವೆ.

ಮೈಸೂರು ವಿ.ವಿ. ಮುಖ್ಯ ಕ್ಯಾಂಪಸ್ ಆಗಿರುವ ಮಾನಸಗಂಗೋತ್ರಿಯಲ್ಲಿ ದೂರ ಶಿಕ್ಷಣ ನಿರ್ದೇಶನಾಲಯವನ್ನು ಸ್ಥಾಪಿಸಿ, ಅದಕ್ಕೆ ಒಬ್ಬರು ಪೂರ್ಣಾವಧಿ ನಿರ್ದೇಶಕರನ್ನು ನಿಯೋಜಿಸಿ ಪ್ರವೇಶಾತಿ ಇನ್ನಿತರ ಕಾರ್ಯಕಲಾಪ ನಡೆಸಲಾಗುತ್ತಿತ್ತು. ಆದರೆ ಇದೀಗ ಪರೀಕ್ಷೆ, ಆಂತರಿಕ ಪರೀಕ್ಷೆ ಸೇರಿದಂತೆ ವಿವಿಧ ಚಟುವಟಿಕೆಗಳು ಮುಗಿದ ಬಳಿಕ ಈ ವಿಭಾಗಕ್ಕೆ ಬೀಗ ಬೀಳಲಿದೆ.

ಅಂದು ಆರಂಭ, ಇಂದು ಅಂತ್ಯ!
ಒಂದು ಕಾಲದಲ್ಲಿ ದೂರ ಶಿಕ್ಷಣಕ್ಕೆ ಮೈಸೂರು ವಿವಿ ಹೆಸರುವಾಸಿಯಾಗಿತ್ತು. 1980ರಲ್ಲೇ ಅಂಚೆ ತೆರಪಿನ ಶಿಕ್ಷಣವನ್ನು ವಿ.ವಿ. ಪ್ರಾರಂಭಿಸಿತ್ತು. ಅದು ಹೆಮ್ಮರವಾಗಿ ಬೆಳೆದು, ತನ್ನದೇ ಆದ ಸ್ವಂತಿಕೆಯನ್ನು ಪಡೆದು ಕರ್ನಾಟಕ ರಾಜ್ಯ ಮುಕ್ತ ವಿವಿ ಆಗಿ ಪರಿವರ್ತನೆಗೊಂಡಿತು.

1996ರ ಬಳಿಕ ಮೈಸೂರು ವಿವಿ ದೂರ ಶಿಕ್ಷಣದಿಂದ ವಿಮುಕ್ತಿಗೊಂಡಿತ್ತು. 22 ವರ್ಷಗಳ ಬಳಿ ಅಂದರೆ, 2018ರಲ್ಲಿ ಮೈಸೂರು ವಿವಿ ಮತ್ತೆ ‘ದೂರ ಶಿಕ್ಷಣ’ ಆರಂಭಿಸಿತ್ತು. ಆದರೆ, ಇದಕ್ಕೆ ವಿದ್ಯಾರ್ಥಿಗಳಿಂದ ನಿರೀಕ್ಷಿತ ಸ್ಪಂದನೆ ದೊರೆಯಲಿಲ್ಲ. ಹೆಚ್ಚಿನ ಪ್ರವೇಶಾತಿ ಇಲ್ಲದೆ ಕಳೆಗುಂದಿತ್ತು. ಅರೆಜೀವ ಹೊಂದಿದ್ದ ಈ ವಿಭಾಗ ಇದೀಗ ಮುಚ್ಚುತ್ತಿರುವುದರಿಂದ ವಿ.ವಿ.ಗೆ ಪರೋಕ್ಷವಾಗಿ ಅನುಕೂಲವಾಗಿದ್ದು, ಆರ್ಥಿಕ ಹೊರೆ ತಪ್ಪಲಿದೆ.

4 ವಿವಿಗಳ ದೂರ ಶಿಕ್ಷಣವೂ ಬಂದ್:
ಮೈಸೂರು ವಿಶ್ವವಿದ್ಯಾಲಯದೊಂದಿಗೆ ಮಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯಗಳೂ ಬಾಹ್ಯ ಶಿಕ್ಷಣ ಯೋಜನೆಯಡಿ ವಿವಿಧ ಕೋರ್ಸ್‌ಗಳ ಶೈಕ್ಷಣಿಕ ಚಟುವಟಿಕೆ ಶುರು ಮಾಡಿದ್ದವು. ಆದರೀಗ ಆ ವಿ.ವಿ.ಗಳೂ ದೂರ ಶಿಕ್ಷಣ ವಿಭಾಗವನ್ನು ಬಹುತೇಕ ಸ್ಥಗಿತಗೊಳಿಸಿವೆ. ಇದರೊಂದಿಗೆ ಮೈಸೂರು ಕೇಂದ್ರೀತ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಅನುಕೂಲವಾಗಿದೆ.

ಮೈಸೂರು ವಿಶ್ವವಿದ್ಯಾಲಯ ನಡೆಸುತ್ತಿದ್ದ ದೂರ ಶಿಕ್ಷಣವನ್ನು ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಸ್ಥಗಿತಗೊಳಿಸಲಾಗಿದೆ. ಹೊಸ ಪ್ರವೇಶಾತಿ ನಡೆಯುತ್ತಿಲ್ಲ. ಹಳೇ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. 2023 ಮತ್ತು 2024ರ ಒಳಗೆ ಕೋರ್ಸ್ ಮುಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕಾಲಾವಕಾಶ ನೀಡಲಾಗಿದೆ. ಕೇವಲ 13 ವಿದ್ಯಾರ್ಥಿಗಳಿದ್ದರೂ ಎಲ್ಲ ಪ್ರಕ್ರಿಯೆಯನ್ನೂ ಪೂರೈಸಬೇಕಾಗಿದೆ.
ಪ್ರೊ.ಡಿ.ಆನಂದ್, ನಿರ್ದೇಶಕ, ಮೈಸೂರು ವಿವಿ ದೂರ ಶಿಕ್ಷಣ ನಿರ್ದೇಶನಾಲಯ