ಮೈಸೂರು ವಿವಿ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ (ಸಿಸ್ಟ್) 2022- 23ನೇ ಸಾಲಿನ ಪ್ರಥಮ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಬೇಕೆಂದು ಒತ್ತಾಯಿಸಿ ವಿಭಾಗದ ವಿದ್ಯಾರ್ಥಿಗಳು ಕ್ರಾರ್ಡ್ ಹಾಲ್ ಮುಂಭಾಗ ಮಂಗಳವಾರ ಪ್ರತಿಭಟಿಸಿದರು.
ಕಡಿಮೆ ಹಾಜರಾತಿ ಇದೆ ಎಂದು ಶೇ.95 ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶಾತಿ ಪತ್ರ ನೀಡಿಲ್ಲ. ಪ್ರವೇಶಾತಿ ಇತರ ವಿಭಾಗಗಳಿಗಿಂತ 1 ತಿಂಗಳು ತಡವಾಗಿ ನಡೆದಿದೆ. ಈಗ 1 ತಿಂಗಳು ಮುಂಚಿತವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ಬಸ್ ಪಾಸ್ ಒದಗಿಸಲು ತಡವಾಗಿದ್ದರಿಂದ 25-30 ದಿನ ಕಾಲಾಹರಣವಾಗಿ ಹಾಜರಾತಿ ಕಡಿಮೆ ಆಗಿದೆ. ಇದಕ್ಕೆ ಸಿಸ್ಟ್ ಪ್ರಭಾರ ನಿರ್ದೇಶಕರು ಮತ್ತು ಸಿಬ್ಬಂದಿಯೇ ಕಾರಣ ಎಂದು ಪ್ರತಿಭಟನಾಕಾರರು ದೂರಿದರು.
ಕಳೆದ ಸಾಲಿನಲ್ಲೂ ಅನೇಕ ವಿದ್ಯಾರ್ಥಿಗಳು ಪ್ರವೇಶಾತಿಯನ್ನು ಪಡೆದಿದ್ದು, ಶೇ.90 ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆಯಿಂದಾಗಿ ಪರೀಕ್ಷಾ ಪ್ರವೇಶಾತಿ ಪತ್ರ ನೀಡಿಲ್ಲ. ಕೇಂದ್ರದ ಪ್ರಭಾರ ನಿರ್ದೇಶಕರು ಮತ್ತು ಸಿಬ್ಬಂದಿಯ ನಿರ್ಲಕ್ಷೃ ಹೀಗೆ ಮುಂದುವರಿದಲ್ಲಿ ಸಿಸ್ಟ್ ಮುಂದಿನ ದಿನಗಳಲ್ಲಿ ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಸ್ಟ್ ಪರೀಕ್ಷೆಯನ್ನು ಒಂದು ತಿಂಗಳ ಕಾಲ ಮುಂದೂಡಿ, ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಲು ಸಹಕರಿಸಬೇಕು ಎಂದು ಆಗ್ರಹಿಸಿದರು.