ಮೈಸೂರು: ಪಿಎಚ್‌ಡಿ ನಿಯಮಾವಳಿ ತಿದ್ದುಪಡಿಗೆ ಮೈಸೂರು ವಿಶ್ವವಿದ್ಯಾಲಯ ಅನುಮೋದನೆ ನೀಡಿದ್ದು, ಪ್ರವೇಶ ಪರೀಕ್ಷೆಯಲ್ಲಿ ಬದಲಾವಣೆ, ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ವಿದೇಶಿಯರು, ಅಂಗವಿಕಲರು ಮತ್ತು ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳಿಗೂ ಆದ್ಯತೆ ನೀಡಲಾಗಿದೆ.
ಮಾನಸ ಗಂಗೋತ್ರಿ ಲಲಿತಕಲಾ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಮೈವಿವಿ ಶೈಕ್ಷಣಿಕ ಮಂಡಳಿ ಸಭೆ ನಡೆಯಿತು.
2017ರ ಪಿಎಚ್‌ಡಿ ನಿಯಮಾವಳಿ ಚಾಲ್ತಿಯಲ್ಲಿತ್ತು. ಇದರಲ್ಲಿ ಬದಲಾವಣೆ ತರಲು ಪ್ರೊ.ಡಿ.ಆನಂದ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು ಒಂದು ವರ್ಷ ಹಲವು ಸಭೆ ನಡೆಸಿ ಕೂಲಂಕಷವಾಗಿ ಪರಿಶೀಲಿಸಿ ಅಂತಿಮ ವರದಿಯನ್ನು ಸಲ್ಲಿಸಿತ್ತು. ಅದಕ್ಕೆ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಹೊಸ ನಿಯಮಾವಳಿ ಪ್ರಸ್ತಕ 2022-23ನೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಬರಲಿದೆ.
ಡಾಕ್ಟರೇಟ್ ಪದವಿ ಪೂರ್ಣಗೊಳಿಸುವ ನಿಗದಿತ ಅವಧಿ 5 + 2 ವರ್ಷ ಇತ್ತು. ಅದನ್ನು ಈಗ 6 + 1 ವರ್ಷ ಮಾಡಲಾಗಿದೆ. 5 ವರ್ಷದ ಬದಲಿಗೆ 6 ವರ್ಷದ ಬಳಿಕ ವಿಸ್ತರಣಾ ಶುಲ್ಕ ಪಾವತಿಸಬೇಕಾಗಿದೆ. ಇದರಿಂದ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಒಂದು ವರ್ಷ ಹೆಚ್ಚುವರಿ ಸಮಯ ದೊರೆಯಲಿದೆ.
ಪಿಎಚ್‌ಡಿ ಸಂಶೋಧನಾ ಮಾರ್ಗದರ್ಶಕರಿಗೆ ಹೆಚ್ಚುವರಿ ಸೀಟ್ ನೀಡಲಾಗಿದೆ. ಈಗಿರುವಂತೆ ಪ್ರಾಧ್ಯಾಪಕರಿಗೆ 8, ಸಹ ಪ್ರಾಧ್ಯಾಪಕರಿಗೆ 6, ಸಹಾಯಕ ಪ್ರಾಧ್ಯಾಪಕರಿಗೆ 4 ಜನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಅವಕಾಶ ನೀಡಿದ್ದು, ಇದರೊಂದಿಗೆ 2 ವಿದೇಶಿ ವಿದ್ಯಾರ್ಥಿಗಳು, ತಲಾ ಒಬ್ಬ ಅಂಗವಿಕಲರು ಮತ್ತು ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬಹುದು. ನಿಗದಿತ ಕೋಟಾವನ್ನು ಅನ್ಯ ವಿದ್ಯಾರ್ಥಿಗಳಿಗೆ ವರ್ಗಾವಣೆ ಮಾಡಲು ಬರುವುದಿಲ್ಲ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಜ್ಞಾನ ಪ್ರಕಾಶ್ ತಿಳಿಸಿದರು.
ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲೂ ಬದಲಾವಣೆ ತಂದಿದ್ದು, ಉತ್ತರ ಬರೆಯುವ ಪ್ರಶ್ನೆಗಳನ್ನು ಕೈಬಿಟ್ಟು, ಪೂರ್ಣ 100 ಅಂಕಕ್ಕೂ ಬರೀ ಐಚ್ಛಿಕ ಪ್ರಶ್ನೆಗಳು ಇನ್ಮುಂದೆ ಇರಲಿವೆ. ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಹಾಕಲಾಗಿದೆ. ಸಾಮಾನ್ಯ ವರ್ಗಕ್ಕೆ 50, ಒಬಿಸಿಗೆ 45, ಎಸ್ಸಿ-ಎಸ್ಟಿಯವರಿಗೆ 40 ಅಂಕ ಕನಿಷ್ಠಗೊಳಿಸಲಾಗಿದೆ. ಕೋರ್ಸ್ ವರ್ಕ್ ಸಲ್ಲಿಸುವ ಅವಧಿಯನ್ನು 20 ವಾರದಿಂದ 16 ವಾರಕ್ಕೆ ಇಳಿಕೆ ಮಾಡಲಾಗಿದೆ.
ಪ್ರತಿಯೊಬ್ಬ ಸಂಶೋಧನಾ ವಿದ್ಯಾರ್ಥಿಯ ಪ್ರಗತಿ ವರದಿಯನ್ನು ವಿವಿಗೆ 15 ದಿನಕ್ಕೊಮ್ಮೆ ಮಾರ್ಗದರ್ಶಕರು ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಮಾರ್ಗದರ್ಶಕರಿಂದ ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಅನಗತ್ಯ ವಿಳಂಬವನ್ನು ತಡೆಯಲಾಗಿದೆ. ಮಾರ್ಗದರ್ಶಕರು ನಿಧನರಾದರೆ, ಸಮಿತಿ ರಚಿಸಿ ಅವರ ಸಂಶೋಧನಾ ವಿದ್ಯಾರ್ಥಿಗಳನ್ನು ಇತರ ಪ್ರಾಧ್ಯಾಪಕರಿಗೆ ಹಂಚಿಕೆ ಮಾಡಲು ನಿಯಮ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಯೋಜನೆ ವಾಪಸ್:
ಮೈವಿವಿಯಿಂದ ಸಂಯೋಜನೆ ಪಡೆದ ಸಂಶೋಧನಾ ಕೇಂದ್ರಗಳು ಸಮರ್ಪಕವಾಗಿ ಸಂಶೋಧನಾ ಚಟುವಟಿಕೆ ನಿರ್ವಹಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್, ಅಂತಹ ಕೇಂದ್ರಗಳ ಸಂಯೋಜನೆಯನ್ನು ವಾಪಸ್ ಪಡೆದುಕೊಳ್ಳಲಾಗುವುದು. ಗುಣಮಟ್ಟಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ವಿವಿಗೆ ಹೊರೆ ಆಗಲ್ಲ:
ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ 20 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಬೋಧಕ-ಬೋಧಕೇತರ ಸಿಬ್ಬಂದಿ ಕಾಯಂಗೊಳಿಸುವ ಸಂಬಂಧ ಕರಡು ಪರಿನಿಯಮಗಳಿಗೆ ಒಪ್ಪಿಗೆ ನೀಡಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲು ನಿರ್ಧರಿಸಲಾಯಿತು. ‘ಈ ಸಿಬ್ಬಂದಿಗೆ ಈಗಾಗಲೇ ಮತ್ತು ಮುಂದೆಯೂ ಯುಜಿಸಿಯೇ ಸಂಬಳ ನೀಡುತ್ತಿದ್ದು, ಇದರಿಂದ ವಿವಿಗೆ ಹೊರೆಯಾಗಲ್ಲ’ ಎಂದು ಕುಲಪತಿ ತಿಳಿಸಿದರು.
ಸೆಮಿಸ್ಟರ್ ಪಠ್ಯಕ್ರಮ ಒಪ್ಪಿಗೆ:
ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)-2020ರ ಅನ್ವಯ ಕಲಾ, ವಾಣಿಜ್ಯ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಅಡಿ ಬರುವ ಸ್ನಾತಕ ಪದವಿಯ 3ನೇ ಮತ್ತು 4ನೇ ಸೆಮಿಸ್ಟರ್ ಪಠ್ಯಕ್ರಮಕ್ಕೆ ಅನುಮೋದನೆ ನೀಡಲಾಯಿತು. ಸ್ಕೂಲ್ ಆಫ್ ಇಂಜಿನಿಯರ್ 2ನೇ ವರ್ಷದ ಪಠ್ಯಕ್ರಮಕ್ಕೂ ಅನುಮೋದನೆ ದೊರೆಯಿತು.
ಡಿಸೆಂಬರ್‌ನಲ್ಲಿ ಕೆ-ಸೆಟ್ ಪರೀಕ್ಷೆ:
ಮುಂದಿನ ಕೆ-ಸೆಟ್ ಪರೀಕ್ಷೆ ಡಿಸೆಂಬರ್‌ನಲ್ಲಿ ನಡೆಯಲಿದ್ದು, ಮಾರ್ಚ್‌ನಲ್ಲಿ ಫಲಿತಾಂಶ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಕುಲಪತಿ ತಿಳಿಸಿದರು.
ಹೊಸ ಕೋರ್ಸ್ ಆರಂಭಕ್ಕೆ ಸೂಚನೆ:
ನೆರೆ ಜಿಲ್ಲೆಗಳಲ್ಲಿ ಹೊಸ ಕಾಲೇಜು ಸ್ಥಾಪನೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಲಿದೆ. ಆದ್ದರಿಂದ ಹೊಸ ಕೋರ್ಸ್‌ಗಳ ಪ್ರಾರಂಭ, ಕ್ಲಾಸ್‌ಗಳ ಸಕ್ಷನ್ ಹೆಚ್ಚಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
2018-19ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯಲ್ಲಿರುವ ಆಕ್ಷೇಪಣೆಗಳಿಗೆ ಸಲ್ಲಿಸಬೇಕಿರುವ ಅನುಪಾಲನಾ ವರದಿಗೆ ಒಪ್ಪಿಗೆ ದೊರೆಯಲಿಲ್ಲ. ಈ ವರದಿಯನ್ನು ತರಾತುರಿಯಲ್ಲಿ ಮಂಡಿಸಿದ್ದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ, ಈ ವಿಷಯವನ್ನು ಮುಂದಿನ ಸಭೆಗೆ ಮುಂದೂಡಲಾಯಿತು. ಎಂಎಸ್ಸಿ ಮೈಕ್ರೋಬಯಾಲಜಿ ವಿಭಾಗದಲ್ಲಿ ಪ್ರೊ.ಎನ್.ಲಕ್ಷ್ಮೀದೇವಿ ಚಿನ್ನದ ಪದಕ ದತ್ತಿ ಸ್ಥಾಪನೆಗೆ ಒಪ್ಪಿಗೆ ನೀಡಲಾಯಿತು.
ಪತ್ರಿಕೋದ್ಯಮ ವಿಭಾಗದ ಅವಾಂತರ
ಪತ್ರಿಕೋದ್ಯಮ ವಿಭಾಗದ 9 ವಿದ್ಯಾರ್ಥಿಗಳ ಹಾಜರಾತಿ ಕೊರತೆ ವಿಷಯ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.
ವಿಭಾಗದ 9 ವಿದ್ಯಾರ್ಥಿಗಳ ಹಾಜರಾತಿಯು ಶೇ.75ಕ್ಕಿಂತ ಕಡಿಮೆ ಇದ್ದರೂ ಪರೀಕ್ಷೆಗೆ ಅವಕಾಶ ನೀಡುವಂತೆ ಕೋರಿರುವ ಆ ವಿಭಾಗದ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಮಂಡಳಿ ಸದಸ್ಯರೊಬ್ಬರು ಒತ್ತಾಯಿಸಿದರು.
ಈ ವಿಷಯದಲ್ಲಿ ವಿಭಾಗದವರ ಲೋಪ ಎದ್ದು ಕಾಣುತ್ತಿದೆ. ಗೈರಾದವರಿಗೆ ಅವಕಾಶ ನೀಡಿದರೆ ಗುಣಮಟ್ಟ ಏನಾಗಬಹುದು? ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪಟ್ಟುಹಿಡಿದರು. ಇಲ್ಲದಿದ್ದರೆ ಎಲ್ಲ ವಿಭಾಗದವರೂ ಕೊನೆ ಕ್ಷಣದಲ್ಲಿ ತಮಗೆ ಬೇಕಾದವರಿಗೆ ಪರೀಕ್ಷೆಗೆ ಅವಕಾಶ ಕೊಡಿಸುತ್ತಾರೆ ಎಂದರು.
ಹಾಜರಾತಿ ವಿಷಯದಲ್ಲಿ ಪತ್ರಿಕೋದ್ಯಮ ವಿಭಾಗದಿಂದಲೇ ಲೋಪ ಆಗಿದೆ ಎಂಬುದನ್ನು ಒಪ್ಪಿಕೊಂಡ ಕುಲಪತಿ, ಈ ಕುರಿತು ಸಮಿತಿ ರಚಿಸಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಈ ಲೋಪ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವಂತೆ ಎಲ್ಲ ವಿಭಾಗಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.