ಮೈಸೂರು: ಕುಲಪತಿ ಸ್ಥಾನ ತೆರವಾಗಿರುವ ಕಾರಣಕ್ಕೆ ಕುಲಸಚಿವೆ ವಿ.ಆರ್.ಶೈಲಜಾ ಮತ್ತು ಹಣಕಾಸು ಅಧಿಕಾರಿ ಡಾ.ಸಂಗೀತಾ ಗಜಾನನ್ ಭಟ್ ಅವರಿಗೆ ಹೆಚ್ಚಿನ ಅಧಿಕಾರ ಕಲ್ಪಿಸಿಕೊಡಲಾಗಿದೆ. ವಿವಿ ಕುಲಾಧಿಪತಿಯೂ ಆದ ರಾಜ್ಯಪಾಲರು ಈ ಕುರಿತು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಪ್ರೊ.ಎನ್.ಕೆ.ಲೋಕನಾಥ್ ನೇಮಕಾತಿ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಇದರಿಂದಾಗಿ ಕುಲಪತಿ ಸ್ಥಾನ ಖಾಲಿ ಆಗಿದೆ. ಈ ಹಿನ್ನೆಲೆಯಲ್ಲಿ ನಿತ್ಯದ ಅಗತ್ಯ ಕಾರ್ಯ ಚಟುವಟಿಕೆ ನಿರ್ವಹಿಸಬೇಕು. ಬೋಧಕ, ಬೋಧಕೇತರ ಸಿಬ್ಬಂದಿಗೆ ಸಂಬಳ, ನಿವೃತ್ತ ನೌಕರರಿಗೆ ಪಿಂಚಣಿ ಪಾವತಿಗೆ ಕ್ರಮ ವಹಿಸಲು ಸೂಚಿಸಲಾಗಿತ್ತು. ಜತೆಗೆ, ಇನ್ನಿತರ ಚಟುವಟಿಕೆಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಬೇಕೆಂದು ಈ ಹಿಂದೆ ಸೂಚಿಸಲಾಗಿತ್ತು. ಇದರೊಂದಿಗೆ ಇನ್ನಷ್ಟು ಅಧಿಕಾರವನ್ನು ಉಭಯ ಅಧಿಕಾರಿಗಳಿಗೆ ಇದೀಗ ನೀಡಲಾಗಿದೆ.
ಅಗತ್ಯವಾದ ಶೈಕ್ಷಣಿಕ, ಸಂಶೋಧನಾ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆದುಕೊಂಡು ಹೋಗಬೇಕಿದೆ. ಅದಕ್ಕಾಗಿ ಶೈಕ್ಷಣಿಕ ಸಾಲಿನ ಮತ್ತು ಸೆಮಿಸ್ಟರ್ ಆರಂಭಿಸಬೇಕು. ಇದಕ್ಕೆ ಸಂಬಂಧಿಸಿದ ವಿವಿಯೊಂದಿಗೆ ಸಂಯೋಜನೆ ಹೊಂದಿರುವ ಕಾಲೇಜುಗಳು ಆರಂಭಿಸಲು ಉದ್ದೇಶಿಸಿರುವ ಕೋರ್ಸ್‌ಗಳಿಗೆ ಅನುಮೋದನೆ ನೀಡಬಹುದು ಎಂದು ರಾಜ್ಯಪಾಲರ ಕಾರ್ಯದರ್ಶಿ ಎನ್.ಶಿವಕುಮಾರ್ ತಿಳಿಸಿದ್ದಾರೆ.
ಇದರೊಂದಿಗೆ ವಿದ್ಯಾರ್ಥಿಗಳಿಗೆ ಅಂಕಪಟ್ಟಿ, ಘಟಿಕೋತ್ಸವ ಪ್ರಮಾಣಪತ್ರವನ್ನೂ ವಿತರಣೆ ಮಾಡಬಹುದು. ಆದರೆ, ಮಹತ್ವದ ತೀರ್ಮಾನ ಮತ್ತು ನೀತಿಗಳ ಕುರಿತು ನಿರ್ಣಯ ತೆಗೆದುಕೊಳ್ಳಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.
ಆಡಳಿತ ವ್ಯವಸ್ಥೆ ಮೇಲೆ ಪರಿಣಾಮ
ಮೈಸೂರು ವಿವಿ ಕುಲಪತಿ ಸ್ಥಾನಕ್ಕೆ ಪ್ರೊ.ಎನ್.ಕೆ.ಲೋಕನಾಥ್ ಅವರನ್ನು ನೇಮಕ ಮಾಡಲಾಗಿತ್ತು. ನೇಮಕಾತಿ ನಿಯಮ ಉಲ್ಲಂಘನೆ ಆರೋಪದಡಿ ಪ್ರೊ.ಲೋಕನಾಥ್ ನೇಮಕಕ್ಕೆ ಜೂನ್ 21ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದರಿಂದಾಗಿ ಕಳೆದ 2 ತಿಂಗಳಿಂದ ಮೈವಿವಿಗೆ ಕುಲಪತಿಯೇ ಇಲ್ಲ. ಜತೆಗೆ, ಇಡೀ ಪ್ರಕರಣ ಗೋಜಲುಮಯವಾಗಿದೆ. ಇದು ಆಡಳಿತ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ.
ಇದೀಗ ನಿತ್ಯ ಕಾರ್ಯ ಚಟುವಟಿಕೆಗಳನ್ನು ನಿರ್ವಹಣೆ ಮಾಡಿಕೊಂಡು ಹೋಗಲು ಕುಲಸಚಿವೆ, ಹಣಕಾಸು ಅಧಿಕಾರಿಗೆ ಸೂಚನೆ ನೀಡಿರುವುದು ಕೊಂಚ ಮಟ್ಟಿಗೆ ಸಮಸ್ಯೆ ಬಗೆಹರಿದಿದೆ. ಆದರೆ, ಸಂಪೂರ್ಣವಾಗಿ ಪರಿಹಾರ ಸಿಕ್ಕಿಲ್ಲ.
ಆ.22ರಂದು ವಿಜಯವಾಣಿ ಪತ್ರಿಕೆಯಲ್ಲಿ ‘ಬಿಕ್ಕಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾಲಯ !’ ಶೀರ್ಷಿಕೆಯಡಿ ಲೌಡ್‌ಸ್ಪೀಕರ್ ಅಂಕಣದಲ್ಲಿ ಈ ವಿಷಯವಾಗಿ ಸಾರ್ವಜನಿಕರು, ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಿ ಸಮಗ್ರ ವರದಿ ಪ್ರಕಟಿಸಲಾಗಿತ್ತು. ಇದು ಪ್ರಕಟಣೆಗೊಂಡ ಒಂದು ದಿನದಲ್ಲೇ ಈ ಆದೇಶ ಹೊರಬಿದ್ದಿದೆ.