ಜಿಲ್ಲೆ

ಮೈಸೂರು ವಿವಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

ಮೈಸೂರು: ವೇತನ ಪರಿಷ್ಕರಣೆಗೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರು ನಗರದಲ್ಲಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು.

ವಿವಿ ಸ್ನಾತಕೋತ್ತರ ಮತ್ತು ಘಟಕ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರು ಮೈವಿವಿ ಕಾರ್ಯಸೌಧ ಕ್ರಾಫರ್ಡ್ ಹಾಲ್ ಎದುರು ಜಮಾವಣೆಗೊಂಡು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅತಿಥಿ ಉಪನ್ಯಾಸಕರ ವೇತನ ಹೆಚ್ಚಳವಾಗಿಲ್ಲ. ಈ ಕುರಿತು ಹಲವು ವರ್ಷಗಳಿಂದ ಮುಖ್ಯಮಂತ್ರಿ ಮತ್ತು ಕುಲಪತಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸ್ಪಂದಿಸಿ ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ಚರ್ಚಿಸಿ ವೇತನ ಏರಿಕೆಗೆ ನಿರ್ಣಯ ಕೈಗೊಂಡು ಆದೇಶ ವನ್ನೂ ಸಹ ಹೊರಡಿಸಲಾಗಿದೆ. ಆದರೀಗ ಈ ಆದೇಶವನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಕಿಡಿಕಾರಿದರು.

ಪರಿಷ್ಕೃತ ವೇತನವನ್ನು ಹಿಂಪಡೆದು ಹಳೆಯ ವೇತನವನ್ನು ಮರು ಜಾರಿಗೊಳಿಸಲಾಗುವುದು ಎಂದು ಕುಲಪತಿ ಹೇಳುತ್ತಿದ್ದಾರೆ. ಇದು ಸರಿಯಲ್ಲ. ಇದರಿಂದ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಕೂಡಲೇ ಪರಿಷ್ಕೃತ ವೇತನ ಜಾರಿಗೊಳಿಸಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಅತಿಥಿ ಉಪನ್ಯಾಸಕರಾದ ಡಾ.ರಾಘು, ಡಾ.ಚೈತ್ರಾ, ಡಾ.ಸೌಜನ್ಯ, ಡಾ.ಹರ್ಷ, ಡಾ.ಗೌತಮ್ ದೇವನೂರು, ಡಾ.ಅನಿಲ್ ಇನ್ನಿತರರು ಇದ್ದರು.