ಜಿಲ್ಲೆ

ಮೈಸೂರು ವಿವಿ ಅಂತರ ಕಾಲೇಜು ಗುಡ್ಡಗಾಡು ಓಟದ ಸ್ಪರ್ಧೆ :ಬಿ.ಸೋಮಾನಿ, ತಿ.ನರಸೀಪುರ ಸರ್ಕಾರಿ ಕಾಲೇಜು ತಂಡಕ್ಕೆ ಟೀಂ ಚಾಂಪಿಯನ್‌ಶಿಪ್

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಗುಡ್ಡಗಾಡು(10 ಕಿ.ಮೀ.) ಓಟದ ಸ್ಪರ್ಧೆಯಲ್ಲಿ ಬಿ.ಸೋಮಾನಿ ಕಾಲೇಜು(16 ಅಂಕ) ಹಾಗೂ ತಿ.ನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು(38 ಅಂಕ) ತಂಡಗಳು ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ‘ಟೀಂ ಚಾಂಪಿಯನ್‌ಶಿಪ್’ ಪ್ರಶಸ್ತಿ ಪಡೆದವು.

ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗ ಶನಿವಾರ ನಗರದಲ್ಲಿ ಆಯೋಜಿಸಿದ್ದ ಸ್ಪರ್ಧೆಯ ಪುರುಷರ ವಿಭಾಗದಲ್ಲಿ 55 ಅಂಕ ಪಡೆದ ಮಹಾರಾಜ ಕಾಲೇಜು ದ್ವಿತೀಯ ಹಾಗೂ 64 ಅಂಕ ಪಡೆದ ಪಿ.ಜಿ.ಸ್ಪೋರ್ಟ್ಸ್ ಕೌನ್ಸಿಲ್ ಮಾನಸ ಗಂಗೋತ್ರಿ ತೃತೀಯ ಸ್ಥಾನ ಪಡೆದವು.

ಮಹಿಳಾ ವಿಭಾಗದಲ್ಲಿ 51 ಅಂಕ ಗಳಿಸಿದ ಪಿ.ಜಿ.ಸ್ಪೋರ್ಟ್ಸ್ ಕೌನ್ಸಿಲ್ ಮಾನಸ ಗಂಗೋತ್ರಿ ದ್ವಿತೀಯ ಹಾಗೂ 53 ಅಂಕಗಳಿಸಿದ ಟೆರೇಷಿಯನ್ ಕಾಲೇಜು ತಂಡ ತೃತೀಯ ಸ್ಥಾನ ಪಡೆದವು.

10 ಕಿ.ಮೀ.ದೂರವನ್ನು ಮಿಂಚಿನಂತೆ ಓಡುವಲ್ಲಿ ಯಶಸ್ವಿಯಾದ ಬಿ.ಸೋಮಾನಿ ಕಾಲೇಜಿನ ಸಿ.ರಘುವರನ್(33.20 ನಿಮಿಷ) ಹಾಗೂ ತಿ.ನರಸೀಪುರದ ವಿದ್ಯೋದಯ ಕಾಲೇಜಿನ ಕೆ.ಆರ್.ತೇಜಸ್ವಿನಿ(42.14 ನಿ.) ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

ಪುರುಷರ ವಿಭಾಗದಲ್ಲಿ ಮಹಾರಾಜ ಕಾಲೇಜಿನ ಆರ್.ಪುರುಷೋತ್ತಮ್(33.22 ನಿ.), ಎಸ್‌ಬಿಆರ್‌ಆರ್ ಮಹಾಜನ ಕಾಲೇಜಿನ ಧೀರಜ್(33.53 ನಿ.), ಬಿ.ಸೋಮಾನಿ ಕಾಲೇಜಿನ ಸಿ.ಎಸ್.ಲಕ್ಷ್ಮೀಶ(33.59 ನಿ.), ಪಿ.ಮಣಿಕಂಠ(34.52 ನಿ.) ಕ್ರಮವಾಗಿ ನಂತರದ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ತಿ.ನರಸೀಪುರದ ಪಿಆರ್‌ಎಂ ವಿಜಯ ಕಾಲೇಜಿನ ಬಿ.ಚೈತ್ರಾ(42.14 ನಿ.), ತಿ.ನರಸೀಪುರದ ಸರ್ಕಾರ ಪ್ರಥಮ ದರ್ಜೆ ಕಾಲೇಜಿನ ಆರ್.ತುಳಸಿ(42.28 ನಿ.), ಪಿಜಿಎಸ್‌ಇಯ ಎಸ್.ಅಶ್ವಿನಿ(42.47 ನಿ.), ವಿದ್ಯೋದಯ ಕಾಲೇಜಿನ ಆರ್.ಅರ್ಪಿತಾ(44.18 ನಿ.) ಕ್ರಮವಾಗಿ ನಂತರದ ಸ್ಥಾನ ಪಡೆದರು.

ಸ್ಪರ್ಧೆಗೆ ಕುಲಸಚಿವ ಪ್ರೊ.ಆರ್.ಶಿವಪ್ಪ ಚಾಲನೆ ನೀಡಿದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಇದ್ದರು.

ಸ್ಪರ್ಧೆಯಲ್ಲಿ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರದ ವಿವಿಧ ಕಾಲೇಜುಗಳಿಂದ 114 ಪುರುಷರು ಹಾಗೂ 70 ಮಹಿಳಾ ಕ್ರೀಡಾಪಟಗಳು ಭಾಗವಹಿಸಿದ್ದರು.