ಜಿಲ್ಲೆ

ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಕ್ರಮ

ಮೈಸೂರು: ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂಸತ್ ಕಲಾಪದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಅನುಕೂಲವಾಗುವಂತೆ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ-766 ತಿರುವು ಯೋಜನೆ ಸಂಬಂಧ ಕರ್ನಾಟಕ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಈ ಹೆದ್ದಾರಿ ತಿರುವು ಯೋಜನೆಯಿಂದ ಮೈಸೂರು-ನೀಲಗಿರಿ ಕಾರಿಡಾರ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೆದ್ದಾರಿ ಸಚಿವಾಲಯ ಸ್ಪಷ್ಟಪಡಿಸಿದೆ.

ಅತಿ ಶೀಘ್ರದಲ್ಲಿ ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಇನ್ನಷ್ಟು ಚುರುಕು ಪಡೆದುಕೊಳ್ಳಲಿದೆ ಎಂದು ಸಂಸದ ಯದುವೀರ್ ತಿಳಿಸಿದ್ದಾರೆ.