ಚಾಮರಾಜನಗರ : ಜಿಲ್ಲಾ ಮಟ್ಟದ ಫುಟ್‌ಬಾಲ್‌ನಲ್ಲಿ ಭಾಗವಹಿಸಿ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಟೀ ಶರ್ಟ್ ವಿತರಿಸಿದರು.
ನಗರದ ರಾಮಸಮುದ್ರ ದೀನಬಂಧು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿಭಾಗದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಎಲ್ಲಾ ಕ್ರೀಡಾಪಟುಗಳಿಗೆ ಎ.ಆರ್. ಕೃಷ್ಣಮುರ್ತಿ ಅಭಿಮಾನಿ ಬಳಗದಿಂದ ಟೀ ಶರ್ಟ್ ನೀಡಿ ಶುಭ ಕೋರಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಫುಟ್‌ಬಾಲ್ ಕ್ರೀಡಾಕೂಟದಲ್ಲಿ ಧೀನಬಂಧು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ, ಪ್ರಥಮ ಸ್ಥಾನ ಪಡೆದುಕೊಳ್ಳುವ ಜತೆಗೆ ನೆರೆದಿದ್ದ ಕ್ರೀಡಾ ಪ್ರೇಮಿಗಳ ಮನಸ್ಸು ಗೆದ್ದಿದ್ದರು. ಕೊಡಗಿನಲ್ಲಿ ನಡೆಯುವ ವಿಭಾಗೀಯ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಜಿಲ್ಲೆಯನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳಿಗೆ ಒಂದೇ ಮಾದರಿಯ ಟೀ ಶರ್ಟ್ ಗಳನ್ನು ಎ.ಆರ್.ಕೃಷ್ಣಮೂರ್ತಿ ಅಭಿಮಾನಿಗಳ ಬಳಗ ಅಧ್ಯಕ್ಷ ಕಂದಹಳ್ಳಿ ನಂಜುಂಡಸ್ವಾಮಿ ಅವರು ವಿತರಣೆ ಮಾಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಧೀನಬಂಧು ಶಾಲೆಯ ಮಕ್ಕಳು ಉತ್ತಮ ಪ್ರದರ್ಶನ ನೀಡಿ, ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮ ತಂದಿದೆ. ರಾಜ್ಯ ಮಟ್ಟಕ್ಕೂ ನಮ್ಮ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಬೇಕು. ಕಠಿಣ ಪರಿಶ್ರಮ ಹಾಗೂ ಉತ್ತಮ ತರಬೇತಿ ಪಡೆದು ವಿಭಾಗೀಯ ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಿಜಯ ಪತಾಕೆಯನ್ನು ಹಾರಿಸಲಿ ಎಂದು ಆಶಿಸಿದರು.
ಎಆರ್‌ಕೆ ಅವರ ಅಭಿಮಾನಿಗಳ ಬಳಗದಿಂದ ಪ್ರತಿ ವರ್ಷ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು. ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಬಾರಿ ದೀನಬಂಧು ಶಾಲೆಯ ಮಕ್ಕಳಿಗೆ ಟೀ ಶರ್ಟ್ ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಭಿಮಾನಿಗಳ ಬಳಗದ ಯಳಂದೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಭು ಪ್ರಸಾದ್, ಹೊನ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷ ರೂಪೇಶ್, ದುಗ್ಗಹಟ್ಟಿ ಗ್ರಾ.ಪಂ. ಮಾಜಿ ಸದಸ್ಯ ಜಿ.ಮಾದೇಶ್, ಯಳಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಮಸಣಾಪುರ ವಿಜಯ್, ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್, ದೈಹಿಕ ಶಿಕ್ಷಣ ಶಿಕ್ಷಕ ಗುರುಸಿದ್ದಯ್ಯ ಇತರರು ಹಾಜರಿದ್ದರು.