ಮೈಸೂರು: 2022-23ನೇ ಸಾಲಿನ ಮೈಸೂರು ವಿಭಾಗ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಚಿತ್ರಕಲಾ ಶಿಕ್ಷಕರಿಗಾಗಿ ನಗರದಲ್ಲಿ ಗುರುವಾರ ಆಯೋಜಿಸಲಾಗಿತ್ತು. 24 ವಿದ್ಯಾರ್ಥಿಗಳು ಮತ್ತು 8 ಶಿಕ್ಷಕರು ರಾಜ್ಯಮಟ್ಟಕ್ಕೆ ಆಯ್ಕೆಯಾದರು.
ಅವಿಲಾ ಕಾನ್ವೆಂಟ್‌ನಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮೈಸೂರು ವಿಭಾಗದ ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಹಾಸನ, ಮಂಡ್ಯ ಶೈಕ್ಷಣಿಕ ಜಿಲ್ಲೆಗಳಿಂದ 72 ವಿದ್ಯಾರ್ಥಿಗಳು ಮತ್ತು 16 ಚಿತ್ರಕಲಾ ಶಿಕ್ಷಕರು ಪಾಲ್ಗೊಂಡಿದ್ದರು. 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕ್ರಮವಾಗಿ ಕಾಡನ್ನು ಬೆಳೆಸೋಣ-ನಾಡನ್ನು ಉಳಿಸೋಣ, ವಿಜ್ಞಾನ ವಸ್ತುಪ್ರದರ್ಶನ ಮತ್ತು ಕರ್ನಾಟಕದ ಜಾನಪದ ನೃತ್ಯ ಎಂಬ ವಿಷಯಗಳನ್ನು ನೀಡಲಾಗಿತ್ತು. ಎರಡೂವರೆ ಗಂಟೆ ಕಾಲ ಸ್ಪರ್ಧೆ ನಡೆಯಿತು. ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ಜರುಗಲಿದೆ.
ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಭಾರತಿ ಕಾರ್ಯಕ್ರಮ ಉದ್ಘಾಟಿಸಿದರು. ಡಿಡಿಪಿಐ ರಾಮಚಂದ್ರರಾಜೇ ಅರಸ್, ನೋಡಲ್ ಅಧಿಕಾರಿ ಪುಷ್ಪಲತಾ, ಡಯಟ್ ಪ್ರಾಂಶುಪಾಲ ಸಿ.ಆರ್.ನಾಗರಾಜಯ್ಯ, ಬಿಇಒಗಳಾದ ಮಲ್ಲೇಶ್ವರಿ, ರಾಮಾರಾದ್ಯ, ಕೃಷ್ಣ ಇತರರು ಹಾಜರಿದ್ದರು.