ಮೈಸೂರು: ಬೇರೆ ಬೇರೆ ರಾಜರ ಇತಿಹಾಸ ಬರೆಯುವವರು ಮೈಸೂರು ರಾಜರು ನೀಡಿದ ಕೊಡುಗೆಗಳ ಕುರಿತ ಇತಿಹಾಸ ಬರೆಯಲು ಮುಂದಾಗುತ್ತಿಲ್ಲ ಎಂದು ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಬೇಸರ ವ್ಯಕ್ತಪಡಿಸಿದರು.
ಮೈಸೂರು ಬುಕ್ ಕ್ಲಬ್‌ನಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಡಾ.ದೀಪ್ತಿ ನವರತ್ನ ಅವರು ರಚಿಸಿರುವ ಮೇವರಿಕ್ ಮಹಾರಾಜ (ಜಯಚಾಮರಾಜೇಂದ್ರ ಒಡೆಯರ್ ಆತ್ಮಕತೆ) ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅರಸು ಮನೆತನದೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ ಅವರು, ಜ್ಞಾನದ ವಿಸ್ತರಣೆಗಾಗಿ ಕಾಲೇಜುಗಳನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಲು ಕಾರಣೀಭೂತರಾಗಿದ್ದಾರೆ. ನಾನೂ ಮಹಾರಾಜ ಕಾಲೇಜಿನಲ್ಲಿದ್ದು ಕಲಿತ ದಿನಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ನೆನಪುಗಳನ್ನು ಹಂಚಿಕೊಂಡರು.
ಜಯಚಾಮರಾಜೇಂದ್ರ ಒಡೆಯರ್ ಅವರು ಕಲೆ, ಸಂಗೀತ, ಸಾಹಿತ್ಯ ಪೋಷಣೆಯಿಂದಾಗಿ ಜಗತ್ತಿನಲ್ಲಿಯೇ ಪ್ರಸಿದ್ಧರಾಗಿದ್ದಾರೆ. ಮೇವರಿಕ್ ಮಹಾರಾಜ ಅನನ್ಯ ಕೃತಿಯಾಗಿದೆ ಎಂದರು.
ದೀಪ್ತಿ ನವರತ್ನ ಬರೆದಿರುವ ಮೇವರಿಕ್ ಮಹಾರಾಜ ಗಂಭೀರವಾದ ಪುಸ್ತಕ. ಈವರೆಗೂ ಪ್ರಕಟವಾಗದ ಜಯಚಾಮರಾಜೇಂದ್ರ ಒಡೆಯರ್ ಅವರ ಜೀವನ ಮತ್ತು ಸಾಧನೆ ಕುರಿತು ಸತ್ಯಸಂಗತಿಗಳಿಂದ ಕೂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂವಾದದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಲೇಖಕಿ ಡಾ.ದೀಪ್ತಿ ನವರತ್ನ ಅವರು, ವಾಸುದೇವಾಚಾರ್ಯ ಅವರು ಒಡೆಯರ್ ಕುರಿತು ಬರೆದಿರುವ ಶ್ರೀಮದ್ ಯದುಕುಲ ವಾರಿಧಿ, ರಾಕಚಂದ್ರಮ್ಮ ಸುಶೀಲ ಗುಣಸಾಂದ್ರಂ, ಜಯಚಾಮರಾಜ ಭೂಪಂ ರಕ್ಷತು ಸತತಂ… ತ್ರುಪಾನಿಧಿ ಕೃಷ್ಣಃ… ಗೀತೆಯನ್ನು ಹಾಡುವ ಮೂಲಕ ಒಡೆಯರ್ ಸಾಧನೆಯನ್ನು ಪರಿಚಯಿಸಿದರು. ಇದು ನನಗೆ ಕೃತಿ ಬರೆಯಲು ಪ್ರೇರಣೆಯಾಯಿತು ಎಂದರು.
ಸಂಗೀತ, ಕಲೆ ಮತ್ತು ಸಾಹಿತ್ಯಕ್ಕೆ ಹಿಂದಿನ ಯಾವ ಸಂಸ್ಥಾನಗಳೂ ನೀಡದಷ್ಟು ಪ್ರೋತ್ಸಾಹವನ್ನು ಮೈಸೂರು ರಾಜ್ಯವನ್ನಾಳಿದ ರಾಜರು ನೀಡಿದ್ದಾರೆ. ಒಡೆಯರ್ ಅವರ ಬಗ್ಗೆ ತಿಳಿಯಲು ತುಂಬ ಕಷ್ಟಪಟ್ಟಿರುವೆ. ಒಡೆಯರ್ ಅವರ ಎಲ್ಲ ಸಂಗೀತ ಕೃತಿಗಳಲ್ಲಿ ಹಿಂದಿನ ಮೈಸೂರು ಅರಸರ ಜೀವನವನ್ನು ಪ್ರತಿಬಿಂಬಿಸಿದ್ದಾರೆ ಎಂದರು.
1940 ಮತ್ತು 1950ರ ಕಾಲಘಟ್ಟ ಜಯಚಾಮರಾಜೇಂದ್ರ ಒಡೆಯರ್ ಅವರ ಮಹತ್ವದ ದಶಕವಾಗಿದ್ದು, ಈ ವೇಳೆಗೆ ಎರಡನೇ ಮಹಾಯುದ್ಧ, ದೇಶದ ಸ್ವಾತಂತ್ರೃ ಹೋರಾಟ, ಮದ್ರಾಸ್ ರಾಜ್ಯದ ರಾಜ್ಯಪಾಲರಾಗಿದ್ದಾಗ ಹೊಸ ಸಂವಿಧಾನ ಅಂಗೀಕಾರ, ದಸರಾ ಗದ್ದಲ ಸೇರಿದಂತೆ ಪ್ರಜಾಪ್ರಭುತ್ವದ ಘಟನೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದು ಹೇಳಿದರು.
ಸಾಹಿತಿ ಪ್ರೊ.ಸಿ. ನಾಗಣ್ಣ ಮಾತನಾಡಿ, ದೀಪ್ತಿ ನವರತ್ನ ಬರೆದಿರುವ ಮೇವರಿಕ್ ಪುಸಕ್ತದಲ್ಲಿ 15 ಅಧ್ಯಾಯಗಳಿದ್ದು, 300 ಪುಟಗಳಿವೆ. ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ವಿಜ್ಞಾನಿ ಸಿ.ಎನ್.ಆರ್. ರಾವ್, ಸಂಸದ ತೇಜಸ್ವಿ ಸೂರ್ಯ, ರಾಜವಂಶಸ್ಥೆ ಇಂದ್ರಾಕ್ಷಿ ಒಡೆಯರ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ಎಂದರು.
ಸುಪ್ರೀಂಕೋರ್ಟ್ ವಕೀಲರಾದ ಲೇಖಕ ಜೆ. ಸಾಯಿ ದೀಪಕ್ ಮೇವರಿಕ್ ಮಹಾರಾಜ ಕೃತಿಯನ್ನು ಸ್ವೀಕರಿಸಿದರು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಮೈಸೂರು ಬುಕ್ ಕ್ಲಬ್ 2015 ಅಧ್ಯಕ್ಷೆ ಶುಭಾ ಸಂಜಯ್ ಅರಸ್ ಇತರರು ಇದ್ದರು.