‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ದಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳ ಟಿಕೆಟ್ ಮಾರಾಟಕ್ಕೆ ರಂಗಕರ್ಮಿ ನಾಗಚಂದ್ರ ಚಾಲನೆ ನೀಡಿದರು. ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಇತರರಿದ್ದರು. 
ಜಿಲ್ಲೆ

ಮೈಸೂರು ರಂಗಾಯಣದಲ್ಲಿ 19ರಿಂದ ರಂಗ ಸಂಗೀತೋತ್ಸವ

ಮೈಸೂರು: ರಂಗಾಯಣವು ಭಾರತೀಯ ರಂಗ ಸಂಗೀತೋತ್ಸವ ಕಾರ್ಯಕ್ರಮವನ್ನು ಸೆ. 19ರಿಂದ 23ರವರೆಗೆ ಆಯೋಜಿಸಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.


ರಂಗಭೂಮಿಯಲ್ಲಿ ರಂಗಸಂಗೀತಕ್ಕೆ ಹೊಸ ಭಾಷ್ಯ ಬರೆದವರು ಬಿ.ವಿ. ಕಾರಂತರು. ಭಾರತದ ರಂಗಸಂಗೀತಕ್ಕೆ ಕಾರಂತರು ನೀಡಿದ ಕೊಡುಗೆ ಅನನ್ಯ. ಸೆ.19 ಅವರ ಹುಟ್ಟಿದ ದಿನ. ಮೈಸೂರು ರಂಗಾಯಣ ಈ ದಿನವನ್ನು ಎರಡು ವರ್ಷಗಳಿಂದ ‘ಭಾರತೀಯ ರಂಗಸಂಗೀತ ದಿನ’ ಎಂದು ಘೋಷಿಸಿ ಆಚರಿಸಿಕೊಂಡು ಬರುತ್ತಿದೆ. 2022ರ ಈ ವರ್ಷ ಕಾರಂತರ ನೆನಪಿನಲ್ಲಿ ಭಾರತೀಯ ರಂಗ ಸಂಗೀತೋತ್ಸವವನ್ನು ಆಚರಿಸುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಸೆ. 19ರಂದು ಸಂಜೆ 6 ಗಂಟೆಗೆ ಭೂಮಿಗೀತ ರಂಗಮಂದಿರದಲ್ಲಿ ಮುಂಬೈನ ಖ್ಯಾತ ರಂಗಸಂಗೀತ ನಿರ್ದೇಶಕ ಅಮೋದ್ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಅರುಣ್‌ಸಾಗರ್ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ‘ಬಿ.ವಿ. ಕಾರಂತ’ ಸಾಕ್ಷ್ಯಚಿತ್ರ ಬಿಡುಗಡೆಗೊಳ್ಳಲಿದೆ ಎಂದರು.


ಭಾರತೀಯ ರಂಗ ಸಂಗೀತೋತ್ಸವದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ಭೂಮಿಗೀತ ರಂಗವೇದಿಕೆಯಲ್ಲಿ ರಂಗಸಂಗೀತ, ರಂಗಗೀತೆಗಳು ಮತ್ತು ನಾಟಕ ನಡೆಯಲಿವೆ.
19ರಂದು ಮುಂಬೈನ ಸಂಗೀತ ನಿರ್ದೇಶಕ ಅಮೋದ್ ಭಟ್ ಕಾರ್ಯಕ್ರಮ ನೀಡಲಿದ್ದಾರೆ. 20ರಂದು ಸಂಗೀತ ನಿರ್ದೇಶಕ ಶ್ರೀನಿವಾಸಭಟ್, 21ರಂದು ವೃತ್ತಿ ರಂಗಭೂಮಿಯ ವೈ.ಎಂ. ಪುಟ್ಟಣ್ಣಯ್ಯ, 22ರಂದು ಕೇರಳದ ಸಂಗೀತ ನಿರ್ದೇಶಕಿ ಕಲ್ಯಾಣಿ, 23ರಂದು ಬೆಂಗಳೂರಿನ ಆರ್.ಶ್ರೀನಾಥ್ ಕಾರ್ಯಕ್ರಮ ನೀಡಲಿದ್ದಾರೆ. 24ರಂದು ಬಿ.ವಿ.ಕಾರಂತ ಸಂಗೀತ ನಿರ್ದೇಶನದ ‘ಮೂಕನ ಮಕ್ಕಳು’ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.


ವಿಚಾರಸಂಕಿರಣ:
23ರಂದು ಮಧ್ಯಾಹ್ನ 3.30ಕ್ಕೆ ಭೂಮಿಗೀತ ವೇದಿಕೆಯಲ್ಲಿ ಕಾರಂತರ ನೆನಪಿನಲ್ಲಿ ವಿಚಾರಸಂಕಿರಣ ಆಯೋಜಿಸಲಾಗಿದೆ. ರಂಗಚಿಂತಕ ನಾರಾಯಣ ರಾಯಚೂರ್ ‘ರಂಗಭೂಮಿಯ ಆಸ್ತಿ: ಬಿ.ವಿ.ಕಾರಂತ’ ವಿಷಯ ಕುರಿತು ಮಾತನಾಡಲಿದ್ದಾರೆ. ನಟ ಕಾಸರಗೋಡು ಚಿನ್ನಾ ‘ಗಡಿಯಾಚೆ ಕಾರಂತ: ರಂಗಚಳವಳಿ’ ಕುರಿತು ಮಾತನಾಡಲಿದ್ದಾರೆ. ಹಿರಿಯ ರಂಗ ನಿರ್ದೇಶಕ ಗುರುರಾಜ ಮಾರ್ಪಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ ಇದ್ದರು.