ಜಿಲ್ಲೆ

ಮೈಸೂರು ರಂಗಾಯಣ ನಿರ್ದೇಶಕರಾಗಿ ನಿರ್ದೇಶಕ ಸತೀಶ್ ತಿಪಟೂರು ಅಧಿಕಾರ ಸ್ವೀಕಾರ

ಮೈಸೂರು: ರಂಗಾಯಣದ ಶಕ್ತಿಯೇ ಕಲಾವಿದರು, ಹೀಗಾಗಿ ರಂಗಾಯಣದಲ್ಲಿ ಖಾಲಿ ಇರುವ ಕಲಾವಿದರ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ನೂತನ ನಿರ್ದೇಶಕ ಸತೀಶ್ ತಿಪಟೂರು ಹೇಳಿದರು.

ರಂಗಾಯಣ ಕಚೇರಿಯಲ್ಲಿ ಮಂಗಳವಾರ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತ ನಾಡಿದ ಅವರು, ರಂಗಾಯಣದಲ್ಲಿ ಬಹುತೇಕ ಹಿರಿಯ ಕಲಾವಿದರು ನಿವೃತ್ತರಾಗಿದ್ದಾರೆ. ಅವರು ಇದ್ದಿದ್ದರೆ ರಂಗಾಯಣಕ್ಕೆ ದೊಡ್ಡ ಆನೆ ಬಲ ಇರುತಿತ್ತು. ಆದರೆ, ನಿವೃತ್ತರಾದ ಕಲಾವಿದರ ಸ್ಥಾನವನ್ನು ಭರ್ತಿ ಮಾಡುವುದು ಹಾಗೂ ಹಿರಿಯ ಕಲಾವಿದರ ಆ ಚೈತನ್ಯವನ್ನು ಮತ್ತೆ ಹೇಗೆ ತುಂಬಿಕೊಳ್ಳುವುದು ಎಂಬುದು ನಮ್ಮ ಮುಂದಿರುವ ಸವಲಾಗಿದೆ. ಅದೇ ರೀತಿ ರಂಗಾಯಣದ ರಂಗ ಚಟುವಟಿಕೆಗೆ ಕಾಲಕ್ಕೆ ಅನುಗುಣವಾಗಿ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು ಎಂದರು.

ಈ ವಿಚಾರಕ್ಕೆ ಪೂರಕವಾಗಿ ಮಾತನಾಡಿದ ರಂಗ ಸಮಾಜದ ಸದಸ್ಯ ಸುರೇಶ್ ಬಾಬು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ರಂಗಾಯಣಗಳಿಗೆ ಕಲಾವಿದರ ನೇಮಕಾತಿಗೆ ಸಂಬಂಧಿಸಿದಂತೆ ರಂಗ ಸಮಾಜದಲ್ಲಿ ಚರ್ಚೆ ನಡೆದಿದೆ. ಪ್ರತಿ ರಂಗಾಯಣಕ್ಕೆ 20 ಕಲಾವಿದರನ್ನು ನೇಮಕ ಮಾಡಿಕೊಳ್ಳಲು ಚರ್ಚೆಯಾಗಿದೆ ಎಂದರು.

ನೂತನ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ರಂಗಾಯಣವನ್ನು ಕಟ್ಟಿಬೆಳೆಸಿದ ಎಲ್ಲ ನಿರ್ದೇಶಕರು ಹಾಗೂ ಕಲಾವಿದರನ್ನು ನಾನು ಈ ಸಂದರ್ಭದಲ್ಲಿ ನೆನೆಸಿಕೊಳ್ಳುತ್ತೇನೆ. ಇದು ನನಗೆ ದೊರೆತ್ತಿರುವ ಬಹಳ ದೊಡ್ಡ ಜವಾಬ್ದಾರಿಯಾಗಿದೆ. ಮೈಸೂರು ರಂಗಾಯಣಕ್ಕೆ ದೊಡ್ಡ ಪರಂಪರೆ ಇದೆ. ಮೂರೂವರೆ ದಶಕಗಳಿಂದ ರಂಗಾಯಣ ನಡೆದು ಬಂದ ಹಾದಿಯನ್ನು ನಾನು ಗಮನಿಸುತ್ತಾ ಬಂದಿ ದ್ದೇನೆ. 2005-06ರಲ್ಲಿ ನಾನು ಈ ರಂಗಾಯಣದಲ್ಲಿ ಕೆಲಸ ಮಾಡಿದ್ದೆ. ಆ ಸಂದರ್ಭ ಮಕ್ಕಳ ರಂಗಭೂಮಿ ಯೋಜನೆಯ ಮುಖ್ಯಸ್ಥನಾಗಿ ಕೆಲಸ ಮಾಡಿದ್ದೆ. ಆ ನಂತರ ಬಹುರೂಪಿ, ಚಿಣ್ಣರ ಮೇಳವನ್ನು ನಿರಂತರವಾಗಿ ಗಮನಿಸಿಕೊಂಡು ಬರುತ್ತಿದ್ದೇನೆ ಎಂದು ಹೇಳಿದರು.

ಈ ಕಾಲಕ್ಕೆ ಅನುಗುಣವಾಗಿ ರಂಗಾಯಣವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನನ್ನ ಹಾಗೂ ಎಲ್ಲರ ಮೇಲಿದೆ. ಏಕೆಂದರೆ ಇದು ವ್ಯಕ್ತಿ ಕೇಂದ್ರಿಕೃತ ವ್ಯವಸ್ಥೆಯಲ್ಲ. ಸಮಷ್ಟಿ ದೃಷ್ಟಿಕೋನದಲ್ಲಿ ನಾವೆಲ್ಲರು ರಂಗಭೂಮಿಯನ್ನು ಮುನ್ನಡೆಸಿಕೊಂಡು ಹೋಗಬೇಕಾಗಿದೆ. ರಂಗಾಯಣದ ವಿಚಾರವಾಗಿ ತುಂಬಾ ಜವಾಬ್ದಾರಿಗಳು ಇವೆ. ಈ ಜವಾಬ್ದಾರಿ ನನ್ನೊಬ್ಬನ ಮೇಲೆ ಮಾತ್ರ ಅಲ್ಲ, ಇಲ್ಲಿ ಕೆಲಸ ಮಾಡುವ ಎಲ್ಲರ ಮೇಲೂ ಇದೆ ಎಂದರು.

ರಂಗಾಯಣದ ಬೇರನ್ನು ಮತ್ತಷ್ಟು ಭದ್ರಪಡಿಸಿ ಮರು ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಆ ಮೂಲಕ ಮುಂದಿನ ತಲೆಮಾರಿಗೆ ರಂಗಾಯಣವನ್ನು ಕೊಟ್ಟು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮೈಸೂರಿನಲ್ಲಿ ಹವ್ಯಾಸಿ ರಂಗಭೂಮಿ ದೊಡ್ಡ ಮಟ್ಟದಲ್ಲಿ ನಿರಂತವಾಗಿ ಕೆಲಸ ಮಾಡುತ್ತಾ ಬರುತ್ತಿದ್ದು, ಅವರೆಲ್ಲರೂ ರಂಗಾಯಣದ ಜತೆಗೆ ಕೈ ಜೋಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿರ್ದೇಶಕರ ನೇಮಕಾತಿ ವಿಚಾರವಾಗಿ ಕೇಳಿ ಬಂದಿರುವ ಟೀಕೆ ಟಿಪ್ಪಣಿಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನು ಸ್ವೀಕರಿಸುತ್ತೇನೆ. ರಂಗಭೂಮಿ ಎಲ್ಲರನ್ನು ಒಳಗೊಳ್ಳುವ ಒಂದು ವ್ಯವಸ್ಥೆಯಾಗಿದ್ದು, ಇಲ್ಲಿ ಟೀಕೆ ಟಿಪ್ಪಣಿಗಳು ಸಹಜ. ರಂಗಭೂಮಿಗೇ ಅಂಥದೊಂದು ಗುಣ ಇದೆ. ರಂಗಭೂಮಿ ಒಳಗಡೆ ಸಂಘರ್ಷ ಇರುತ್ತದೆ, ಸಂಘರ್ಷ ನಂತರ ಎಲ್ಲರೂ ಅರ್ಥಮಾಡಿಕೊಂಡು ಮುನ್ನಡೆಯುತ್ತಾರೆ. ಹಾಗಾಗಿ ನಿರ್ದೇಶಕರ ನೇಮಕಾತಿ ವಿಚಾರವಾಗಿ ಕೇಳಿ ಬಂದ ಟೀಕೆಯನ್ನು ನಾನು ಅಸಹಜ ಎಂದು ಭಾವಿಸುವುದಿಲ್ಲ. ಆದರೆ, ಎಲ್ಲರನ್ನು ನಾನು ವಿಶ್ವಾಸಕ್ಕೆ ತೆಗೆದುಕೊಂಡು ರಂಗಾಯಣ ಮುನ್ನಡೆಸುವ ವಿಶ್ವಾಸವಿದೆ ಎಂದರು.

ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಹಿರಿಯ ರಂಗಭೂಮಿ ಕಲಾವಿದೆ ಗೀತಾ ಮೋಂಟಡ್ಕ ಹಾಗೂ ಇತರರು ಇದ್ದರು.