ಜಿಲ್ಲೆ

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಖಾಸಗಿ ಬಸ್ ದರ ಶೇ.5ರಷ್ಟು ಹೆಚ್ಚಳ

ಮಂಜುನಾಥ ತಿಮ್ಮಯ್ಯ

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಬಸ್ ದರ ಪರಿಷ್ಕರಣೆಗೊಂಡಿದ್ದು, ಶೇ.5ರಷ್ಟು ದರ ಹೆಚ್ಚಳವಾಗಲಿದೆ. ಫೆ.20ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಕರೊನಾ ನಂತರದಲ್ಲಿ ಅರ್ಧದಷ್ಟು ಬಸ್‌ಗಳು ಸೇವೆಯನ್ನೇ ಬಂದ್ ಮಾಡಿವೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿಕೊಡುವ ಶಕ್ತಿ ಯೋಜನೆಯ ನಂತರ ಮಹಿಳಾ ಪ್ರಯಾಣಿಕರು ಬಸ್‌ಗಳಿಂದ ವಿಮುಖವಾಗಿದ್ದು, ಬಹುತೇಕ ಬಸ್ ಮಾಲೀಕರು ನಷ್ಟದ ಹಾದಿಯಲ್ಲಿದ್ದಾರೆ.

ನಾಲ್ಕೈದು ವರ್ಷಗಳ ಹಿಂದೆ ಈ ಮಾರ್ಗಗಳಲ್ಲಿ 110-120 ಖಾಸಗಿ ಬಸ್‌ಗಳು ನಿತ್ಯ ಸಂಚರಿಸುತ್ತಿದ್ದವು. ಈಗ ಇವುಗಳ ಸಂಖ್ಯೆ 50-60ಕ್ಕೆ ಇಳಿದಿದೆ. ಏಳೆಂಟು ಬಸ್ ಹೊಂದಿದ್ದವರು ಮೂರ್ನಾಲ್ಕು ವಾಹನ ಓಡಿಸುತ್ತಿದ್ದಾರೆ. ಒಂದು-ಎರಡು ಬಸ್ ಇದ್ದವರು ಸೇವೆಯನ್ನು ಬಂದ್ ಮಾಡಿ ಬೇರೆ ಉದ್ಯಮದತ್ತ ಮುಖ ಮಾಡುತ್ತಿದ್ದಾರೆ ಎಂದು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಶಿವಲಿಂಗು ತಿಳಿಸಿದ್ದಾರೆ.

ಈಗಾಗಲೇ ಸರ್ಕಾರಿ ಬಸ್‌ಗಳು ಪ್ರಯಾಣದ ದರ ಹೆಚ್ಚಿಸಿವೆ. ಆದರೆ, ನಾವು ಇಲ್ಲಿಯವರೆಗೂ ದರ ಪರಿಷ್ಕರಣೆ ಮಾಡಿರಲಿಲ್ಲ. ಹೀಗಾಗಿ ನಷ್ಟ ಸರಿದೂಗಿಸುವ ಸಲುವಾಗಿ 2022ರಲ್ಲೇ ಪ್ರಯಾಣ ದರ ಏರಿಕೆಗೆ ತೀರ್ಮಾನಿಸಲಾಗಿತ್ತು. ಆದರೆ, ಜಾರಿಯಾಗಿರಲಿಲ್ಲ ಎಂದು ಹೇಳಿದ್ದಾರೆ.