ಗುಂಡ್ಲುಪೇಟೆ: ಸಾರಿಗೆ ಸಂಸ್ಥೆಯು ಪಟ್ಟಣದಿಂದ ಮೈಸೂರಿಗೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಸಾವಿರಾರು ಪ್ರಯಾಣಿಕರು ನಿಲ್ದಾಣದಲ್ಲಿ ಪರದಾಡುವಂತಾಗಿದೆ.
ದಸರೆ ಆರಂಭವಾಗಿದ್ದರಿಂದ ತಾಲೂಕಿನಿಂದ ಸಾವಿರಾರು ಜನರು ಮೈಸೂರಿನತ್ತ ಹೋಗುತ್ತಿದ್ದಾರೆ. ಆದರೂ ಸಾರಿಗೆ ಸಂಸ್ಥೆಯು ಮೈಸೂರಿಗೆ ಹೆಚ್ಚಿನ ಬಸ್‌ಗಳನ್ನು ನಿಯೋಜಿಸದ ಪರಿಣಾಮ ಪ್ರಯಾಣಿಕರು ನಿಲ್ದಾಣದಲ್ಲಿ ಬಸ್‌ಗಾಗಿ ತಾಸುಗಟ್ಟಲೆ ಕಾದು ನಿಲ್ಲುವ ಪರಿಸ್ಥಿತಿ ಎದುರಾಗಿದೆ.
ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಪ್ರತಿದಿನವೂ ಸಾವಿರಾರು ಸಂಖ್ಯೆಯ ಮಹಿಳೆಯರು ಮೈಸೂರು, ನಂಜನಗೂಡು ಮುಂತಾದ ಕಡೆಗಳಿಗೆ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ದಸರೆಗೆ ಹೋಗುವ ಪ್ರಯಾಣಿಕರೂ ಹೆಚ್ಚಾಗಿರುವುದರಿಂದ ಮೈಸೂರಿನತ್ತ ಹೋಗುವ ಎಲ್ಲ ಬಸ್‌ಗಳು ಪ್ರಯಾಣಿಕರಿಂದ ಕಿಕ್ಕಿರಿಯುತ್ತಿದ್ದು, ವೃದ್ಧರು, ಮಕ್ಕಳು ಕಾಲಿಡಲು ಸಾಧ್ಯವಾಗದಂತಾಗಿದೆ. ಆದರೆ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳನ್ನು ನಿಯೋಜಿಸುತ್ತಿಲ್ಲ. ಹೆಚ್ಚಿನ ಬಸ್ಸುಗಳನ್ನು ಬೇರೆ ಬೇರೆ ಕಡೆಗಳಿಗೆ ಕಳಿಸುತ್ತಿದ್ದಾರೆ. ಇದರಿಂದ ನಾವು ಪರದಾಡುವಂತಾಗಿದೆ ಎಂದು ಪ್ರಯಾಣಿಕರು ಅಲವತ್ತುಕೊಂಡರು.
ನಿಲ್ದಾಣದೊಳಗೆ ಯಾವ ಬಸ್ಸು ಬಂದರೂ ಅತ್ತ ಓಡಿಹೋಗಿ ಬಸ್ ಹತ್ತಲು ಪ್ರಯತ್ನಿಸುವುದರಿಂದ ನೂಕುನುಗ್ಗಲು ಉಂಟಾಗುತ್ತಿದೆ. ಆದ್ದರಿಂದ ಇನ್ನಾದರೂ ಸಾರಿಗೆ ಅಧಿಕಾರಿಗಳು ದಸರೆ ಮುಗಿಯುವವರೆಗೆ ಮೈಸೂರಿಗೆ ಹೆಚ್ಚು ಬಸ್‌ಗಳು ಸಂಚರಿಸುವಂತೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.