ಮೈಸೂರು: ಜ.7ರಂದು ಕೆರೆ ನೀಡಿರುವ ‘ಮೈಸೂರು ಬಂದ್’ಗೆ ಹೋಟೆಲ್ ಮಾಲೀಕರ ಸಂಘ ನೈತಿಕ ಬೆಂಬಲ ನೀಡಿದೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಹೇಳಿಕೆ ನೀಡಿರುವ ಗೃಹ ಸಚಿವ ಅಮಿತ್ ಷಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಜ.7ರಂದು ಮೈಸೂರು ಬಂದ್‌ಗೆ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಕರೆಕೊಟ್ಟಿವೆ.
ಬಂದ್‌ಗೆ ವಾಣಿಜ್ಯೋದ್ಯಮಿಗಳು, ಪ್ರಗತಿಪರರು, ಹೋಟೆಲ್ ಮಾಲೀಕರು, ಕಾರ್ಮಿಕ ಸಂಘಟನೆಗಳು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಬೆಂಬಲ ನೀಡಬೇಕು ಎಂದು ಕೋರಲಾಗಿದೆ.
ಈ ಹಿನ್ನೆಲೆಯಲ್ಲಿ ಸಂಘದ ಎಲ್ಲ ಸದಸ್ಯರ ಭಾನುವಾರ ತುರ್ತು ಸಭೆ ನಡೆಸಿ ಒಮ್ಮತ ತೀರ್ಮಾನಕ್ಕೆ ಬಂದಿದೆ. ಹೋಟೆಲ್, ರೆಸ್ಟೋರೆಂಟ್, ಬೇಕರಿ, ಸ್ವೀಟ್‌ಶಾಪ್, ಫಾಸ್ಟ್‌ಫುಡ್, ಟಿಫಾನೀಸ್, ಟೀ, ಕಾಫಿ ಅಂಗಡಿಗಳು, ಚಾಟ್ಸ್ ಅಂಗಡಿಗಳು ಮತ್ತು ಐಷಾರಾಮಿ ಹೋಟೆಲ್‌ಗಳು ಸೇರಿದಂತೆ ಎಲ್ಲ ರೀತಿಯ ಆತಿಥ್ಯ ನೀಡುವ ಎಲ್ಲ ವ್ಯಾಪಾರಿಗಳು ಬಂದ್ ದಿನದಂದು ಕಪ್ಪುಪಟ್ಟಿಗಳನ್ನು ಧರಿಸಿ ಎಂದಿನಂತೆ ವ್ಯಾಪಾರ, ವಹಿವಾಟು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಲಾಗಿದೆ.
ಅದೇ ದಿನ ಬೆಳಗ್ಗೆ 10ಕ್ಕೆ ಪ್ರತಿಭಟನೆಯಲ್ಲೂ ಪಾಲ್ಗೊಳ್ಳಲು ತೀರ್ಮಾನಿಸಲಾಯಿತು ಎಂದು ಸಂಘದ ಗೌರವ ಕಾರ್ಯದರ್ಶಿ ಎ.ಆರ್.ರವೀಂದ್ರ ಭಟ್ ತಿಳಿಸಿದ್ದಾರೆ.