ಜಿಲ್ಲೆ

ಮೈಸೂರು ಪೊಲೀಸ್ ಠಾಣೆಗಳಲ್ಲಿ ‘ಲೋಕಸ್ಪಂದನಾ’ ಜಾರಿ

ಆರ್.ಕೃಷ್ಣ ಮೈಸೂರು
ನಗರ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿಸಲು ‘ನಿಮ್ಮ ನುಡಿ ನಮ್ಮ ನಡೆ’ ಘೋಷವಾಕ್ಯದೊಂದಿಗೆ ಎಲ್ಲ ಠಾಣೆಗಳಲ್ಲೂ ‘ಲೋಕ ಸ್ಪಂದನಾ’ ಜಾರಿಗೊಳಿಸಲಾಗಿದೆ.
ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದ ವೇಳೆ ಅಲ್ಲಿನ ಸಿಬ್ಬಂದಿ ಯಾವ ರೀತಿ ನಡೆದುಕೊಂಡರು? ದೂರು ಪಡೆಯಲು ಏನಾದರೂ ತರಕಾರು ಮಾಡಿದರೆ ಅಥವಾ ಇಲ್ಲವೇ? ಸಿಬ್ಬಂದಿ ವರ್ತನೆ ಹೇಗಿತ್ತು ಎನ್ನುವುದು ಸೇರಿದಂತೆ ಇನ್ನಿತರ ವಿವರವನ್ನು ದಾಖಲಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ.
ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ, ವರ್ತನೆ ಸರಿ ಇಲ್ಲ, ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವುದಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮೀಷನರ್ ಬಿ.ರಮೇಶ್ ಅವರು ಈ ನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಸಾಕಷ್ಟು ಜನರು ಪೊಲೀಸರ ಎದುರೇ ಅಭಿಪ್ರಾಯ ದಾಖಲಿಸಲು ಹಿಂಜರಿಯುತ್ತಾರೆ. ಜತೆಗೆ, ಯಾರಿಗೆ ದೂರು ನೀಡಬೇಕು ಎನ್ನುವುದು ಸಹ ಸರಿಯಾಗಿ ತಿಳಿದಿರುವುದಿಲ್ಲ. ಹಾಗಾಗಿ, ‘ಲೋಕ ಸ್ಪಂದನಾ’ ಹೆಸರಿನಲ್ಲಿ ಠಾಣೆಗಳ ಹೊರಗೆ ಇರುವ ‘ಕ್ಯೂ ಆರ್ ಕೋಡ್’ ಸ್ಕಾೃನ್ ಮಾಡಿದರೆ ಅಲ್ಲಿ ಮಾಹಿತಿ ತೆಗೆದುಕೊಳ್ಳುತ್ತದೆ. ಅದನ್ನು ಭರ್ತಿ ಮಾಡಿ ಸೆಂಡ್ ಮಾಡಿದರೆ, ಅದು ನೇರವಾಗಿ ಕಮೀಷನರ್ ಕಚೇರಿ ತಲುಪುತ್ತದೆ. ಅಲ್ಲಿ ದೂರು ಅಥವಾ ಅಭಿಪ್ರಾಯ ಮೊದಲು ಡಿಸಿಪಿಗಳ ಗಮನಕ್ಕೆ ಹೋಗಲಿದ್ದು, ಬಳಿಕ ಪೊಲೀಸ್ ಕಮೀಷನರ್ ಪರಿಶೀಲನೆ ಮಾಡಿ ಮುಂದಿನ ಕ್ರಮಕೈಗೊಳ್ಳಲಿದ್ದಾರೆ.
ಠಾಣೆಯಲ್ಲಿ ನಡೆಯುವ ವಿದ್ಯಮಾನಗಳನ್ನು ಸಾರ್ವಜನಿಕರು ನೇರವಾಗಿ ಮೇಲಧಿಕಾರಿಗಳ ಗಮನಕ್ಕೆ ತರುವ ವ್ಯವಸ್ಥೆ ಇದಾಗಿದೆ. ಇದರಿಂದ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲಿದ್ದಾರೆ. ಜತೆಗೆ, ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ ಎನ್ನುವ ಲೆಕ್ಕಾಚಾರ ಈ ವಿನೂತನ ಪ್ರಯೋಗದ ಹಿಂದಿದೆ.
ನಗರದ ಎಲ್ಲ ಠಾಣೆಗಳಲ್ಲಿ ‘ಕ್ಯೂಆರ್ ಕೋಡ್’ ಅಳವಡಿಸಲಾಗಿದ್ದು, ಇದನ್ನು ಸ್ಕಾೃನ್ ಮಾಡುವ ಮೂಲಕ ಸಾರ್ವಜನಿಕರು ತಮಗೆ ಆದ ಅನುಭವನವನ್ನು ದಾಖಲಿಸಿ ರೇಟಿಂಗ್ ನೀಡಲು ಅವಕಾಶ ನೀಡಲಾಗಿದೆ. ‘ಕ್ಯೂ ಆರ್ ಕೋಡ್’ ಅಲ್ಲದೆ, ಆನ್‌ಲೈನ್ ಮೂಲಕವೂ ತಮ್ಮ ಅಭಿಪ್ರಾಯಗಳನ್ನು ದಾಖಲಿಸುವ ಅವಕಾಶ ಕಲ್ಪಿಸಲಾಗಿದೆ.
ಈ ವಿನೂತನ ವ್ಯವಸ್ಥೆಯನ್ನು ಮೈಸೂರು ನಗರದ ಎಲ್ಲ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗುತ್ತಿದೆ. ಸಾಮಾನ್ಯವಾಗಿ ದೂರು ಅಥವಾ ಏನಾದರೂ ಸಮಸ್ಯೆ ಹೇಳಿಕೊಂಡು ಠಾಣೆಗೆ ಬರುವ ಸಾರ್ವಜನಿಕರಿಗೆ ಠಾಣೆಯಿಂದ ಹೊರ ಬರುವ ವೇಳೆ ತಮ್ಮ ಅನಿಸಿಕೆ ದಾಖಲಿಸಲು ಪ್ರವೇಶ ದ್ವಾರದಲ್ಲಿ ಪುಸ್ತಕವನ್ನು ಇಡಲಾಗಿದೆ.
ದೂರು ನೀಡಲು ಆಗಮಿಸುವ ಸಾರ್ವಜನಿಕರು, ಠಾಣೆಯ ವ್ಯವಸ್ಥೆಯ ಬಗ್ಗೆ ಸ್ಕ್ಯಾನ್ ಮಾಡಿ ತಮ್ಮ ಅಭಿಪ್ರಾಯ ದಾಖಲಿಸಬಹುದಾಗಿದೆ. ಠಾಣೆಯಲ್ಲಿ ಪೊಲೀಸರ ವರ್ತನೆ ಹೇಗಿತ್ತು? ದೂರಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಯೇ? ದೂರು ದಾಖಲಿಸಲಾಗಿದೆಯೇ ಎನ್ನುವುದು ಸೇರಿದಂತೆ 10 ಪ್ರಶ್ನೆಗಳಿಗೆ ಸಾರ್ವಜನಿಕರು ಉತ್ತರ ನೀಡಬಹುದು.
ಅಲ್ಲದೆ, ಠಾಣೆಯ ವ್ಯವಸ್ಥೆ, ಕಾರ್ಯವೈಖರಿ ಸುಧಾರಣೆಗೆ ಏನು ಕ್ರಮ ಕೈಗೊಳ್ಳಬಹುದು ಎನ್ನುವ ಕುರಿತು ತಮ್ಮ ಅಭಿಪ್ರಾಯವನ್ನು ಯಾವುದೇ ಹಿಂಜರಿಕೆ ಇಲ್ಲದೆ ದಾಖಲಿಸಬಹುದು. ಕೊನೆಯಲ್ಲಿ ಪೊಲೀಸರ ಕಾರ್ಯವೈಖರಿ ಬಗ್ಗೆ ಅಭಿಪ್ರಾಯ ದಾಖಲಿಸಿ ಪೊಲೀಸ್ ಸೇವೆ ಬಗ್ಗೆ ರೇಟಿಂಗ್ ಕೂಡ ನೀಡಬಹುದಾಗಿದೆ.
ದೂರು ದಾಖಲಾದ ಬಳಿಕ ದೂರು ಸ್ವೀಕಾರ ಕೇಂದ್ರದಿಂದ ಸಾರ್ವಜನಿಕರಿಗೆ ಕರೆ ಮಾಡಿ, ತಮ್ಮ ಸಮಸ್ಯೆಗೆ ಪೊಲೀಸರಿಂದ ಸ್ಪಂದನೆ ಸಿಕ್ಕಿದೆಯೇ? ಪೊಲೀಸರ ಸೇವೆ ತೃಪ್ತಿ ಹಾಗೂ ಸಮಾಧಾನ ತಂದಿದೆಯೇ? ಕಾನೂನು ರೀತಿ ನಿಮ್ಮ ದೂರಿಗೆ ಕ್ರಮ ಕೈಗೊಳ್ಳಲಾಗಿದೆಯೇ? ಎನ್ನುವುದು ಸೇರಿದಂತೆ ಇನ್ನಿತರ ಪೂರಕ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ. ಸೇವೆಯಲ್ಲಿ ವ್ಯತ್ಯಾಸವಾದರೆ ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಇದರಿಂದ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಣೆ ಮಾಡಲು ಅವಕಾಶವಾಗುತ್ತದೆ.

ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿಸಲು ‘ಕ್ಯೂಆರ್ ಕೋಡ್’ ಒಳಗೊಂಡಿರುವ ‘ಲೋಕ ಸ್ಪಂದನಾ’ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಇಲ್ಲಿ ದೂರು ಹಾಗೂ ತಮ್ಮ ಅಭಿಪ್ರಾಯ ದಾಖಲಿಸಲು ಅವಕಾಶ ಇರುವುದರಿಂದ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಹಕಾರಿಯಾಗುತ್ತದೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸುವುದರಿಂದ ಠಾಣೆ ಹಂತದಲ್ಲಿ ಸುಧಾರಣೆ ಕಾಣುವ ವಿಶ್ವಾಸವಿದೆ. ದೂರು ನೀಡಿದವರಿಗೆ ನಾನು ಸೇರಿದಂತೆ ಹಿರಿಯ ಅಧಿಕಾರಿಗಳು ಕರೆ ಮಾಡಿ ಅಭಿಪ್ರಾಯ ಪಡೆಯುವುದರಿಂದ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಲಿದ್ದಾರೆ.
ರಮೇಶ್ ಬಾನೋತ್
ಪೊಲೀಸ್ ಕಮೀಷನರ್