ಮೈಸೂರು: ಮೈಸೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಬಿ.ರಮೇಶ್ ಮಂಗಳವಾರ ಅಧಿಕಾರ ಸ್ವೀಕರಿಸಿದರು.
ಸಿಐಡಿ ಎಸ್ಪಿಯಾಗಿದ್ದ ಬಿ.ರಮೇಶ್ ಅವರನ್ನು ಸೋಮವಾರ ಸಂಜೆಯಷ್ಟೇ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ ಅವರು, ಆಯುಕ್ತರ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅಧಿಕಾರ ಹಸ್ತಾಂತರ ಮಾಡಿ ಹೂಗುಚ್ಛ ನೀಡಿ ಶುಭಕೋರಿದರು.
ಬಳಿಕ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿ ಎಲ್ಲ ಅಧಿಕಾರಿಗಳ ಪರಿಚಯ ಮಾಡಿಕೊಂಡರು.
ಬಿ.ರಮೇಶ್ ಅವರು ಆಂಧ್ರಪ್ರದೇಶದ ಮೂಲದವರು. ಬಿ.ಟೆಕ್ ಪದವೀಧರರು. 2009ರಲ್ಲಿ ನೇರವಾಗಿ ಬೆಂಗಳೂರು ನಗರದ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದ ಇವರು, ನಂತರ ಸಿಐಡಿ ವಿಭಾಗದಲ್ಲಿ 2ಎಕ್ಸ್-ಕೇಡರ್ ಹುದ್ದೆಗೆ ನೇಮಕವಾಗಿದ್ದರು. ಇವರು ರಾಮನಗರ, ಬೆಂಗಳೂರು ನಗರದಲ್ಲಿ ಸೇವೆ ಸಲ್ಲಿಸಿ ಅನೇಕ ಉನ್ನತ ಕಾರ್ಯಗಳನ್ನು ನಿರ್ವಹಿಸಿದ್ದಾರೆ.