ಜಿಲ್ಲೆ

ಮೈಸೂರು ನಗರಪಾಲಿಕೆಯಿಂದ ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಅಭಿಯಾನ

ಮೈಸೂರು: ಹಳೆಯ ವಸ್ತುಗಳನ್ನು ಮರು ಬಳಕೆ ಮಾಡುವ ಉದ್ದೇಶದಿಂದ ಮೈಸೂರು ನಗರಪಾಲಿಕೆ ಆರಂಭಿಸಿರುವ ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಎಂಬ ವಿಶೇಷ ಅಭಿಯಾನಕ್ಕೆ ಸ್ಪಂದಿಸಿರುವ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನಿಂದ ಭಾನುವಾರ ಅನುಪಯುಕ್ತ ವಸ್ತುಗಳನ್ನು ಹಸ್ತಾಂತರಿಸಲಾಯಿತು.
ನಗರಪಾಲಿಕೆ ಮೇ 20 ರಿಂದ ಜೂನ್ 5ರ ವರೆಗೆ ಈ ವಿಶೇಷ ಅಭಿಯಾನ ನಡೆಸುತ್ತಿದ್ದು, ನಗರದಲ್ಲಿ ಅನುಪಯುಕ್ತ ವಸ್ತು ಸಂಗ್ರಹಕ್ಕೆ ಮುಂದಾಗಿದೆ. ಹಳೆಯ ವಸ್ತು ಸಂಗ್ರಹದೊಂದಿಗೆ ನಗರ ಸ್ವಚ್ಛತೆ ಕಾಪಾಡುವುದು ಅಭಿಯಾನದ ಉದ್ದೇಶವಾಗಿದೆ.
ಟ್ರಸ್ಟ್ ನೀಡಿದ ಹಳೆಯ ಬಟ್ಟೆ , ನ್ಯೂಸ್ ಪೇಪರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಸ್ವೀಕರಿಸಿ ಮಾತನಾಡಿದ ನಗರಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜು ಅವರು, ನಗರದಾದ್ಯಂತ ಪಾಲಿಕೆ 9 ವಲಯಗಳಲ್ಲಿ ಒಟ್ಟು 27 ಕಡೆಗಳಲಿ ್ಲ ವಸ್ತುಗಳನ್ನು ಸಂಗ್ರಹಿಸುವ ಕೇಂದ್ರಗಳನ್ನು ತೆರೆದಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ ಎಂದರು.
ಸಾರ್ವಜನಿಕರು ಹಳೆಯ ಬಟ್ಟೆ, ಬೇಡವಾದ ಪುಸ್ತಕಗಳು, ಹಳೆಯ ಆಟಿಕೆಗಳು, ಹಳೆಯ ಬೈಸಿಕಲ್, ಹಳೆಯ ನ್ಯೂಸ್ ಪೇಪರ್‌ಗಳನ್ನು ನೀಡಿದರೆ ಅದನ್ನು ಪಾಲಿಕೆ ಸ್ವೀಕರಿಸುತ್ತದೆ. ಇಲ್ಲವೇ ನಿತ್ಯವೂ ಬೆಳಗಿನ ವೇಳೆ ಕಸ ಸಂಗ್ರಹಣೆಗೆ ಬರುವ ವಾಹನಗಳಿಗೂ ಈ ವಸ್ತುಗಳನ್ನು ನೀಡಬಹುದಾಗಿದೆ. ನಾಗರಿಕರು ಈ ಉಪಯುಕ್ತ ಯೋಜನೆಯನ್ನು ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ನಮ್ಮ ಸಂಸ್ಥೆಯಿಂದ ನಮ್ಮ ಒಡನಾಡಿಗಳೆಲ್ಲರೂ ನೀಡಿದ ಹಳೆಯ ಬಟ್ಟೆಗಳು ಹಾಗೂ ಪುಸ್ತಕಗಳನ್ನು ಮೈಸೂರಿನ ಉತ್ತರಾದಿ ಮಠದ ಪಕ್ಕದಲ್ಲಿರುವ ಅನುಪಯುಕ್ತ ವಸ್ತುಗಳ ಸಂಗ್ರಹ ಕೇಂದ್ರಕ್ಕೆ ನೀಡಿದ್ದೇವೆ. ಇದರಿಂದ ಸಾಕಷ್ಟು ಜನಕ್ಕೆ ಅನುಕೂಲವಾಗಲಿದೆ ಪುಸ್ತಕಗಳು ಅಗತ್ಯವಿರುವವರಿಗೆ ಬಳಕೆಯಾಗುತ್ತದೆ. ಹೀಗಾಗಿ ಪಾಲಿಕೆಯು ಜನರ ಸಂಕಷ್ಟಕ್ಕೆ ಸ್ಪಂದಿಸುವ ಪರಿಸರ ಸ್ನೇಹಿಯಾದ ವಿಶೇಷ ಅಭಿಯಾನಕ್ಕೆ ಕೈಜೋಡಿಸಿರುವುದು ನಮಗೆ ಅತ್ಯಂತ ತೃಪ್ತಿ ನೀಡಿದೆ ಎಂದರು.
ಈ ಅಭಿಯಾನದಿಂದ ನಗರದಲ್ಲಿ ಸಂಗ್ರಹವಾಗುವ ಕಸದ ಪ್ರಮಾಣ ಕಡಿಮೆಯಾಗುವುದಲ್ಲದೆ. ಒಂದು ಮನೆಯಲ್ಲಿ ಬಳಕೆಯಾಗದೆ ಮೂಲೆಯಲ್ಲಿ ಇರಿಸಿರುವ ವಸ್ತುಗಳು ಬೇರೊಬ್ಬರಿಗೆ ಬಳಕೆಗೆ ಬರುತ್ತವೆ. ಅಂತಹ ವಸ್ತುಗಳನ್ನು ಪಾಲಿಕೆಗೆ ಹಸ್ತಾಂತರಿಸಿದರೆ ಅವುಗಳನ್ನು ಮರು ಬಳಕೆ ಮಾಡಬಹುದಾಗಿದೆ ಎಂದರು.
ವಲಯ ಕಚೇರಿಯ ಆರೋಗ್ಯ ನಿರೀಕ್ಷಕಿ ಪ್ರೀತಿ, ಸಂಚಾಲಕರಾದ ಎಸ್.ಎನ್.ರಾಜೇಶ್, ಭೈರತಿ ಲಿಂಗರಾಜು, ಮಂಜುನಾಥ್, ರವಿಚಂದ್ರ ಇತರರು ಇದ್ದರು.