ಮೈಸೂರು: ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಮಾರಾಟ ಸೋಮವಾರ ಶುರುವಾಗಿದ್ದು, ಮಾರಾಟ, ಬಳಕೆಗೆ ಹಸಿರು ಪಟಾಕಿಯನ್ನು ಕಡ್ಡಾಯಗೊಳಿಸಲಾಗಿದೆ. 6 ದಿನ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಸಾಯನಿಕ ಪಟಾಕಿ ಮಾರಾಟ ಹಾಗೂ ಬಳಕೆ ನಿಷಿದ್ಧ. ಹಸಿರು ಪಟಾಕಿ ಹೊರತಾಗಿ ಬೇರೆ ಹಾನಿಕಾರಕ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಹಾಗೆ ಮಾರಾಟ ಮಾಡುತ್ತಿದ್ದರೆ ಅಥವಾ ಸೂಕ್ತವಲ್ಲದ ಸ್ಥಳದಲ್ಲಿ ನಿಯಮ ಬಾಹಿರವಾಗಿ ದಾಸ್ತಾನು ಮಾಡಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲೂ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.
ಸಾರ್ವಜನಿಕರು ಸಹ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಹಚ್ಚಬಹುದು. ರಾತ್ರಿ 10 ಗಂಟೆ ಮೇಲೆ ಪಟಾಕಿ ಮಾರಾಟ ಹಾಗೂ ಬಳಕೆ ನಿರ್ಬಂಧಿಸಲಾಗಿದೆ.
ಈ ನಡುವೆಯೇ ಬೆಳಕಿನ ಹಬ್ಬ ದೀಪಾವಳಿಗೆ ಹಸಿರು ಪಟಾಕಿ ಮಾರಾಟಕ್ಕೆ ಮಳಿಗೆಗಳು ಸಿದ್ಧಗೊಂಡಿದ್ದು, ವಿವಿಧ ಇಲಾಖೆಗಳಿಂದ ಅನುಮತಿ ಪಡೆದು ಪಟಾಕಿ ಮಾರಾಟಗಾರರು ವಿವಿಧ ಬಗೆಯ ಪಟಾಕಿ ಮಾರಾಟಕ್ಕೆ ಮುಂದಾಗಿದ್ದಾರೆ.
ಪ್ರತಿ ವರ್ಷದಂತೆ ಈ ಸಲವೂ ಮೈಸೂರು ಮಹಾನಗರ ಪಾಲಿಕೆ, ಪೊಲೀಸ್, ಅಗ್ನಿಶಾಮಕ, ಸೆಸ್ಕ್ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದು, ಕೆಲ ನಿಬಂಧನೆಯೊಂದಿಗೆ ಮಳಿಗೆಗಳನ್ನು ಪಟಾಕಿ ಮಾರಾಟಗಾರರು ಸಜ್ಜುಗೊಳಿಸಿಕೊಂಡಿದ್ದಾರೆ.
ದೀಪಾವಳಿ ಎಂದರೆ ಸಾಕು ಅಲ್ಲಿ ಪಟಾಕಿ ಸದ್ದು ಮಾಡಲೇ ಬೇಕು. ಅದಕ್ಕಾಗಿ ಸಾರ್ವಜನಿಕರಿಗೆ ಇವುಗಳನ್ನು ಪೂರೈಕೆ ಮಾಡಲು ಜೆ.ಕೆ.ಮೈದಾನದಲ್ಲಿ 15, ಜೆಎಲ್‌ಬಿ ರಸ್ತೆಯಲ್ಲಿ 16, ಲಲಿತಮಹಲ್ ರಸ್ತೆಯಲ್ಲಿ 3, ಭೂತಾಳೆ ಪಿಚ್‌ನಲ್ಲಿ 1, ಕುವೆಂಪುನಗರದಲ್ಲಿ, ಹೆಬ್ಬಾಳು ಕೈಗಾರಿಕಾ ಬಡಾವಣೆಯಲ್ಲಿ ಸೇರಿದಂತೆ ನಗರದ ವಿವಿಧೆಡೆ ಮಳಿಗೆ ತೆರೆಯಲಾಗಿದೆ. ಅನುಮತಿ ಪಡೆದಿರುವ ವ್ಯಾಪಾರಸ್ಥರು ಇವುಗಳ ಮಾರಾಟಕ್ಕೆ ತಯಾರಿ ಮಾಡಿಕೊಂಡಿದ್ದಾರೆ.
ಈ ಸಲ ಪಟಾಕಿ ಮಾರಾಟಕ್ಕೆ 6 ದಿನಗಳ ಮಾತ್ರ ಅವಕಾಶ ನೀಡಲಾಗಿದೆ. ಅ.28ರಿಂದ ನ.2ರವರೆಗೆ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ರಸ್ತೆ ಬದಿ ತೆರೆದಿರುವ ತಾತ್ಕಾಲಿಕ ತಗಡಿನ ಅಂಗಡಿಗಳು ಸೋಮವಾರ ಸಂಜೆ ಹೊತ್ತಿಗೆ ನಿರ್ಮಾಣವಾಗಿದ್ದವು. ಕೆಲ ಇನ್ನೂ ನಿರ್ಮಾಣ ಹಂತದಲ್ಲಿದ್ದವು. ಮಂಗಳವಾರದಿಂದ ಪಟಾಕಿ ಮಾರಾಟ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಪಟಾಕಿ ಮಾರಾಟಗಾರರೊಬ್ಬರು ತಿಳಿಸಿದರು.
ಪ್ರತಿ ಮಳಿಗೆಯೂ 10*10 ಅಡಿ ವಿಸ್ತೀರ್ಣ ಮೀರದಂತೆ, ಎತ್ತರ 3 ಮೀಟರ್‌ಗಿಂತ ಇರದಂತೆ ಹಾಗೂ ಮಳಿಗೆಯಿಂದ ಮಳಿಗೆಗೆ 6 ಮೀಟರ್ ಅಂತರವಿರುವಂತೆ ನಿರ್ದೇಶಿಸಲಾಗಿದೆ. ಪಟಾಕಿ ಶೆಡ್‌ನಲ್ಲಿ ಅಡುಗೆ, ಧೂಮಪಾನ ಮಾಡುವುದು, ಮಲಗುವುದನ್ನು ನಿರ್ಬಂಧಿಸಲಾಗಿದೆ. ಹಸಿರು ಪಟಾಕಿ ಹೊರತುಪಡಿಸಿ, ಪರಿಸರಕ್ಕೆ ಹಾನಿಯುಂಟು ಮಾಡುವ ಪಟಾಕಿ ಮಾರಾಟ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಹಸಿರು ಪಟಾಕಿಗಳ ಬಾಕ್ಸ್ ಮೇಲೆ ಕಡ್ಡಾಯವಾಗಿ ಬಾರ್‌ಕೋಡ್ ಇರಬೇಕು. ಅದನ್ನು ಸ್ಕ್ಯಾನ್ ಮಾಡಿದಾಗ ಹಸಿರು ಪಟಾಕಿ ಎಂದು ಖಚಿತವಾಗದಿದ್ದರೆ, ಸ್ಥಳದಲ್ಲೇ ಲೈಸೆನ್ಸ್ ರದ್ದು ಮಾಡಲಾಗುತ್ತದೆ ಎಂಬ ಸೂಚನೆಯನ್ನು ಪಟಾಕಿ ಮಾರಾಟಗಾರರಿಗೆ ಸೂಚಿಸಲಾಗಿದೆ.
ಪ್ಲಾಸ್ಟಿಕ್ ಬಳಕೆಯನ್ನೂ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪಟಾಕಿ ಮಳಿಗೆಗೆ ಗಾಳಿ, ಬೆಳಕು ಉತ್ತಮವಾಗಿರಬೇಕು. ಅಗ್ನಿ ನಂದಿಸಲು 400 ಲೀಟರ್ ಸಾಮರ್ಥ್ಯದ ಎರಡು ಡ್ರಮ್‌ಗಳಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಂಡಿರಬೇಕು. ವಾಟರ್ ಪ್ರೆಷರ್‌ಗಳನ್ನು ಕಡ್ಡಾಯವಾಗಿಟ್ಟುಕೊಂಡಿರಲು ಸೂಚನೆ ನೀಡಲಾಗಿದೆ.