ಜಿಲ್ಲೆ

ಮೈಸೂರು ದಸರೆಗೆ ಬರಲಿದ್ದಾಳೆ ಕುಂತಿ

ಮೈಸೂರು: ಮದದ ಕಾರಣಕ್ಕೆ ಪಟ್ಟದ ಆನೆ ವಿಕ್ರಮನನ್ನು ಕೈಬಿಡಲಾಗಿದೆ. ಇದರಿಂದ 36 ವರ್ಷದ ಕುಂತಿ ಹೆಣ್ಣಾನೆಗೆ ದಸರಾ ಗಜಪಡೆ ಸೇರಿಕೊಳ್ಳುವ ಅದೃಷ್ಟ ಖುಲಾಯಿಸಿದೆ.

ದಸರಾ ಮಹೋತ್ಸವದಲ್ಲಿ ಅನೇಕ ವರ್ಷಗಳಿಂದ ಪಟ್ಟದ ಆನೆಯ ಪಟ್ಟ ಕಟ್ಟಿಕೊಂಡು ಅರಮನೆಯಲ್ಲಿ ರಾಜಮನೆತನದವರಿಂದ ನಡೆಯುವ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುತ್ತಿದ್ದ ವಿಕ್ರಮ ಸತತ 2ನೇ ಬಾರಿಯೂ ದಸರಾದಿಂದ ದೂರ ಉಳಿದಿದ್ದಾನೆ.

ಸ್ವಭಾವ, ದಂತ, ಸೊಂಡಿಲು ಹಾಗೂ ಮುಖದ ಲಕ್ಷಣದಿಂದಾಗಿ ರಾಜಮನೆತನದವರ ಒಪ್ಪಿಗೆ ಮೇರೆಗೆ ವಿಕ್ರಮ ಆನೆ ಕಳೆದ ಹಲವು ವರ್ಷಗಳಿಂದ ಪಟ್ಟದ ಆನೆಯಾಗಿ ಕರ್ತವ್ಯ ನಿರ್ವಹಿಸಿದೆ. ದುಬಾರೆ ಆನೆ ಕ್ಯಾಂಪ್‌ನಲ್ಲಿ 59 ವರ್ಷದ ವಿಕ್ರಮ ರಾಜಮನೆತನದವರು ಮಾತ್ರವಲ್ಲದೆ, ಅರಣ್ಯ ಇಲಾಖೆಯ ಸಿಬ್ಬಂದಿ ಮನಸ್ಸನ್ನು ಗೆದ್ದಿದೆ. ಇತರ ಆನೆಗಳಿಗೆ 2-3 ತಿಂಗಳಲ್ಲೇ ಮದ ಇಳಿದರೂ ವಿಕ್ರಮನಿಗೆ ಮಾತ್ರ ದೀರ್ಘಕಾಲದವರೆಗೆ ಮದದ ಅಂಶ ಕಂಡು ಬಂದಿದೆ.

ಕಳೆದ ದಸರಾದಲ್ಲಿ ಮದವಿದ್ದರೂ ಮೈಸೂರಿಗೆ ಆಗಮಿಸಿದ್ದ ವಿಕ್ರಮ ಆನೆಯನ್ನು ಶಾಂತಗೊಳಿಸಲು ಮಾಡಿದ್ದ ಪ್ರಯತ್ನವೆಲ್ಲ ವಿಫಲವಾಗಿತ್ತು. ನವರಾತ್ರಿ ಆರಂಭದವರೆಗೂ ವಿಕ್ರಮನ ಮೇಲೆ ವಿಶ್ವಾಸವಿಟ್ಟು ಆಹಾರದ ಮೂಲಕವೇ ಮದವನ್ನು ನಿಯಂತ್ರಿಸಲು ಪ್ರಯತ್ನ ಮಾಡಲಾಗಿತ್ತು. ಆದರೂ ನಿಯಂತ್ರಣಕ್ಕೆ ಬಾರದ ಕಾರಣ ಅರಮನೆ ಆವರಣದ ಕ್ಯಾಂಪ್‌ನಲ್ಲೇ ವಿಕ್ರಮವನ್ನು ಕಟ್ಟಿಹಾಕಲಾಗಿತ್ತು. ಈ ಸಲವೂ ಈತನಿಗೆ ಮದದ ಸಮಸ್ಯೆ ಪುನರಾವರ್ತನೆಯಾಗಿದೆ.
‘ಪ್ರಸಕ್ತ ದಸರಾ ಗಜಪಡೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ವಿಕ್ರಮನಿಗೆ ಮದ ಏರಿದ್ದರಿಂದ 2ನೇ ತಂಡದಲ್ಲಿ ಕರೆತರಲು ನಿರ್ಧರಿಸಲಾಗಿತ್ತು. ಆದರೆ, ವಿಕ್ರಮನ ಮದದ ಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ, ಮೈಸೂರಿಗೆ ಕರೆ ತರುವುದನ್ನು ಕೈಬಿಡಲಾಗಿದೆ’ ಎಂದು ಡಿಸಿಎಫ್ ಡಾ.ವಿ. ಕರಿಕಾಳನ್ ತಿಳಿಸಿದ್ದಾರೆ.

ಹಾಗಾಗಿ, ಹೆಚ್ಚುವರಿ ಆಗಿ ಗುರುತಿಸಿದ್ದ ಬಂಡೀಪುರದ ರಾಂಪುರನ ಕುಂತಿ(36) ಹೆಣ್ಣಾನೆಯನ್ನು ಕರೆತರಲಾಗುತ್ತಿದೆ. ಸೆ.7ರಂದು 2ನೇ ತಂಡದಲ್ಲಿ 4 ಆನೆ ಆಗಮಿಸಲಿದ್ದು, ಅದರಲ್ಲಿ ಕುಂತಿ ಆನೆಯೂ ಬರಲಿದೆ. ಮಹೇಂದ್ರ, ಪಾರ್ಥಸಾರಥಿ ಹಾಗೂ ಕುಂತಿಗೆ ಇದು ಮೊದಲ ದಸರಾ ಆಗಿದೆ.


ತಾಲೀಮಿಗೆ ಸ್ಪಂದನೆ:
ಅರಮನೆಯಲ್ಲಿ ಬೀಡುಬಿಟ್ಟಿರುವ 9 ಆನೆಗಳು ಆರೋಗ್ಯವಾಗಿದ್ದು, ತಾಲೀಮಿಗೆ ನಿರೀಕ್ಷೆಗೂ ಮೀರಿ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿವೆ. ಮೊದಲ ತಂಡದಲ್ಲಿ ಬಂದ 9 ಆನೆಗಳಲ್ಲಿ 6 ಆನೆಗಳಲ್ಲಿ ಅರ್ಜುನ ಹೊರತುಪಡಿಸಿ, ಉಳಿದ 5 ಗಂಡಾನೆಗಳಿಗೂ ಭಾರ ಹೊರೆಸುವ ತರಬೇತಿ ನೀಡಲಾಗಿದೆ. ಅದರಲ್ಲೂ ಹೊಸ ಆನೆಗಳಾದ ಮಹೇಂದ್ರ, ಭೀಮಾ ಆನೆಗೂ ಭಾರ ಹೊರೆಸುವ ತಾಲೀಮು ನಡೆಸಲಾಗಿದೆ.

ಸೆ.5ರಿಂದ ಮರದ ಅಂಬಾರಿ ತಾಲೀಮು
ಆನೆಗಳಿಗೆ ಭಾರ ಹೊರುವ ತಾಲೀಮು ಸೆ.4ರಂದು ಪೂರ್ಣಗೊಳ್ಳಲಿದ್ದು, ಸೆ.5ರಿಂದ ಮರದ ಅಂಬಾರಿ ಹೊರಿಸಿ ಅಭ್ಯಾಸ ಮಾಡಲಾಗುತ್ತದೆ. ಮೊದಲ ತಂಡದಲ್ಲಿ ಆಗಮಿಸಿರುವ ಗಂಡಾನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ, ಧನಂಜಯ, ಭೀಮ ಹಾಗೂ ಮಹೇಂದ್ರ ಆನೆಗಳಿಗೂ ಮರದ ಅಂಬಾರಿ ಹೊರಿಸುವ ತಾಲೀಮು ನಡೆಸಲಾಗುತ್ತದೆ.

ಸೆ.7ಕ್ಕೆ 2ನೇ ತಂಡ ಆಗಮನ:
ಸೆ.7ರಂದು ಗಜಪಡೆಯ 2ನೇ ತಂಡ ಬರಲಿದೆ. ಎರಡನೇ ಹಂತದಲ್ಲಿ ದುಬಾರೆ ಕ್ಯಾಂಪ್‌ನಿಂದ ಗೋಪಿ (41), ಶ್ರೀರಾಮ (40) ವಿಜಯ (63) ಮತ್ತು ರಾಂಪುರ ಕ್ಯಾಂಪ್‌ನಿಂದ ಪಾರ್ಥಸಾರಥಿ(18), ಕುಂತಿ (36)ಯನ್ನು ಕರೆತರಲಾಗುತ್ತಿದೆ.
ಸೆ.8ರಂದು ಮೊದಲ ತಂಡದ ಆನೆಗಳೂ ಸೇರಿದಂತೆ ಎಲ್ಲ 14 ಆನೆಗಳಿಗೂ ದೇಹತೂಕ ಮಾಡಿಸಲಾಗುತ್ತದೆ. ಮೊದಲ ತಂಡದ ಆನೆಗಳು ಅರಮನೆಗೆ ಬಂದು 28 ದಿನ ಪೂರ್ಣಗೊಂಡಿದೆ. ಪೌಷ್ಟಿಕ ಆಹಾರ ನೀಡಿರುವುದರಿಂದ ಈಗಾಗಲೇ ಒಂದೊಂದು ಆನೆಯೂ 200 ಕೆಜಿಯಷ್ಟು ತೂಕ ಹೆಚ್ಚಿಸಿಕೊಂಡಿವೆ. ಸೆ.8ರಿಂದ ತಾಲೀಮಿನಲ್ಲಿ ಎಲ್ಲ 14 ಆನೆಗಳು ಪಾಲ್ಗೊಳ್ಳಲಿವೆ. ಜಂಬೂಸವಾರಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.