ಜಿಲ್ಲೆ

ಮೈಸೂರು ದಸರಾದಲ್ಲಿ 900 ಟನ್ ಕಸ ಸಂಗ್ರಹ..!

ಮೈಸೂರು: ನಗರದಲ್ಲಿ 11 ದಿನಗಳ ಕಾಲ ನಡೆದ ದಸರಾ ಸಂದರ್ಭದಲ್ಲಿ ಬರೋಬ್ಬರಿ ಸುಮಾರು 850 ರಿಂದ 900 ಟನ್ ಕಸ ಸಂಗ್ರಹವಾಗಿದೆ.

ಅರಮನೆ ಸೇರಿದಂತೆ ವಿವಿಧ ವೇದಿಕೆಗಳಿಂದ ನಿತ್ಯ 90 ಟನ್ ಹಾಗೂ ಆಹಾರ ಮೇಳದಲ್ಲಿ 10 ಟನ್ ಸೇರಿದಂತೆ 11 ದಿನಗಳಲ್ಲಿ 850 ರಿಂದ 900 ಟನ್ ಕಸ ವಿಲೇವಾರಿಯಾಗಿದೆ. ಅಲ್ಲದೆ, ಆಹಾರ ಮೇಳದಲ್ಲಿ 1093 ಕೆ.ಜಿ. ಒಣ ತ್ಯಾಜ್ಯವನ್ನು ಸಂಗ್ರಹ ಮಾಡಲಾಗಿದೆ. ಕಳೆದ ದಸರಾದಲ್ಲಿ 600 ಟನ್ ಕಸ ಸಂಗ್ರಹವಾಗಿತ್ತು.

ಪಾಲಿಕೆಯ 1,765 ಕಾಯಂ ಪೌರ ಕಾರ್ಮಿಕರು ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿರುವ 500 ಸ್ವಚ್ಛತಾ ಕಾರ್ಮಿಕರು ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಿ, ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ.

ಬೆಳಗ್ಗೆ 6ರಿಂದ ಮಧ್ಯಾಹ್ನ 2, 2ರಿಂದ ರಾತ್ರಿ 10 ಹಾಗೂ ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಮೂರು ಪಾಳಿಯಲ್ಲಿ ಸ್ವಚ್ಛತಾ ಕಾರ್ಮಿಕರು ಕಾರ್ಯ ನಿರ್ವಹಿಸಿ ಕಸ ಸಂಗ್ರಹಿಸಿದ್ದಾರೆ.

ಜಂಬೂ ಸವಾರಿ ದಿನವಾದ ಗುರುವಾರ ಬರೋಬ್ಬರಿ 146 ಟನ್ ಕಸವನ್ನು ಸಂಗ್ರಹಿಸಲಾಗಿದೆ. ರಾತ್ರಿ 10ರಿಂದ 4 ಮತ್ತು ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಎರಡು ಪಾಳಿಯಲ್ಲಿ ಕೆಲಸ ಮಾಡಿ ಅರಮನೆ ಆವರಣ, ಜಂಬೂ ಸವಾರಿ ಮಾರ್ಗ ಮತ್ತು ಪಂಜಿನ ಕವಾಯತು ಮೈದಾನದಲ್ಲಿ ಕಸ ಸಂಗ್ರಹಿಸಲಾಗಿದೆ. ಇದರೊಂದಿಗೆ ಆಹಾರ ಮೇಳ ಹಾಗೂ ರಸ್ತೆಬದಿಯ ಕಸ ಸಂಗ್ರಹಿಸಿ ವಿಲೇವಾರಿ ಮಾಡಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ಅರಮನೆ ಆವರಣ, ಫಲಪುಷ್ಪ ಪ್ರದರ್ಶನದ ಕುಪ್ಪಣ್ಣ ಪಾರ್ಕ್, ಆಹಾರ ಮೇಳದ ಮಹಾರಾಜ ಕಾಲೇಜು ಮೈದಾನ, ಪುಸ್ತಕ ಪ್ರದರ್ಶನದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನ, ಯುವ ದಸರಾ ನಡೆದ ಉತ್ತನಹಳ್ಳಿ ಬಯಲು ಪ್ರದೇಶದಲ್ಲಿ 200 ಕಾರ್ಮಿಕರನ್ನು ಎರಡು ಪಾಳಿಯಲ್ಲಿ ನಿಯೋಜನೆ ಮಾಡಲಾಗಿತ್ತು. ಸ್ವಯಂ ಸೇವಕರು ದಸರಾ ಕಾರ್ಯಕ್ರಮ ನಡೆಯುವ ಎಲ್ಲ ಕಡೆ ಪ್ಲಾಸಿಕ್ ಬಾಟಲ್‌ಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿದ್ದಾರೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ಎನ್.ಪಿ.ವೆಂಕಟೇಶ್ ತಿಳಿಸಿದ್ದಾರೆ.