ಜಿಲ್ಲೆ

ಮೈಸೂರು ದಸರಾಕ್ಕೆ ಮೂರು ಹೊಸ ಆನೆಗಳು

ಮೈಸೂರು: ಎರಡು ಹೆಣ್ಣಾನೆ ಸೇರಿದಂತೆ ಮೂರು ಹೊಸ ಆನೆಗಳೊಂದಿಗೆ ಗಜಪಡೆಯ 2ನೇ ತಂಡ ಆ.25ರಂದು ನಗರಕ್ಕೆ ಆಗಮಿಸಲಿದೆ.

ಶ್ರೀಕಂಠ, ರೂಪಾ ಮತ್ತು ಹೇಮಾವತಿ ಮೊದಲ ಬಾರಿಗೆ ದಸರಾಕ್ಕೆ ಬರುವ ಹೊಸ ಆನೆಗಳು. ನಾಡಹಬ್ಬಕ್ಕಾಗಿ ಕಾಡಿನಿಂದ ನಾಡಿಗೆ ಬರುತ್ತಿವೆ.

2ನೇ ತಂಡದಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದಿಂದ ಶ್ರೀಕಂಠ(56), ಭೀಮನಕಟ್ಟೆ ಆನೆ ಶಿಬಿರದಿಂದ ರೂಪಾ(44), ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದಿಂದ ಗೋಪಿ(42), ಸುಗ್ರೀವ್(43), ಹೇಮಾವತಿ(11) ಆನೆಗಳು ಇರಲಿವೆ. ಸೆ.25ರಂದು ಸಂಜೆ 4ಕ್ಕೆ ಪೂಜಾ ಕಾರ್ಯಕ್ರಮದೊಂದಿಗೆ ಮೈಸೂರು ಅರಮನೆ ಆವರಣಕ್ಕೆ ಈ ಆನೆಗಳನ್ನು ಬರಮಾಡಿಕೊಳ್ಳಲಾಗುತ್ತಿದೆ. ಇದರೊಂದಿಗೆ 1ನೇ ತಂಡದ ಸದಸ್ಯರೊಂದಿಗೆ ಸೇರಿಕೊಳ್ಳಲಿವೆ. ಇದರೊಂದಿಗೆ 14 ಆನೆಗಳು ಅರಮನೆಯಲ್ಲಿ ಬೀಡು ಬಿಡಲಿವೆ.

ಈಗಾಗಲೇ ಗಜಪಡೆಯ ಮೊದಲ ತಂಡವು ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿ ನಡೆದ ಗಜಪಯಣ ಕಾರ್ಯಕ್ರಮದ ಮೂಲಕ 9 ಆನೆಗಳು ಆಗಮಿಸಿವೆ. ಸೆ.10ರಂದು ಇವುಗಳನ್ನು ಅರಮನೆಗೆ ಅದ್ದೂರಿ ಸ್ವಾಗತ ಕೋರಲಾಗಿದೆ.

ಗಜಪಡೆ ನಾಯಕ ಅಭಿಮನ್ಯು(59) ನೇತೃತ್ವದಲ್ಲಿ ಮತ್ತಿಗೋಡು ಶಿಬಿರದ ಭೀಮ (25), ದುಬಾರೆ ಶಿಬಿರದ ಕಂಜನ್ (24), ಧನಂಜಯ (44) ಮತ್ತು ಪ್ರಶಾಂತ್ (53), ಬಳ್ಳೆ ಶಿಬಿರದ ಮಹೇಂದ್ರ (42), ದೊಡ್ಡಹರವೆ ಶಿಬಿರದ ಏಕಲವ್ಯ (40) ಸೇರಿದಂತೆ 7 ಗಂಡಾನೆ ಹಾಗೂ ದುಬಾರೆ ಶಿಬಿರದ ಕಾವೇರಿ(45), ಬಳ್ಳೆಯ ದೊಡ್ಡಹರವೆ ಲಕ್ಷ್ಮೀ(53) ಹೆಣ್ಣಾನೆಗಳು ಈಗಾಗಲೇ ಅರಮನೆಯಲ್ಲಿ ಠಿಕಾಣಿ ಹೂಡಿವೆ. ಜಂಬೂಸವಾರಿಗಾಗಿ ಸಜ್ಜುಗೊಳಿಸಲು ಇವುಗಳಿಗೆ ನಿತ್ಯ ಬೆಳಗ್ಗೆ ಮತ್ತು ಸಂಜೆ ಅರಮನೆಯಿಂದ ಬನ್ನಿಮಂಟಪದ ವರೆಗೆ ತಾಲೀಮು ನಡೆಸಲಾಗುತ್ತಿದೆ. ವಿಶೇಷ ಆರೈಕೆ ಸಹ ಮಾಡಲಾಗುತ್ತದೆ.

ಶ್ರೀಕಂಠ: ಬಲಿಷ್ಠ, ಶಾಂತ ಸ್ವಭಾವಿ

ಈ ಆನೆಯನ್ನು 2014ರಲ್ಲಿ ಹಾಸನ ವಿಭಾಗದ ಶನಿವಾರಸಂತೆ ವಲಯದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ತಂಡದ ಮೂಲಕ ಸುರಕ್ಷಿತವಾಗಿ ಸೆರೆಹಿಡಿಯಲಾಗಿತ್ತು.

ಉತ್ತಮ ಎತ್ತರ, ಬಲಿಷ್ಠ ಶರೀರ, ಶಾಂತ ಸ್ವಭಾವ ಮತ್ತು ಮನುಷ್ಯರೊಂದಿಗೆ ಸುಲಭವಾಗಿ ಹೊಂದಿಕೆಯಾಗುವ ಗುಣಗಳಿರುವ ಈ ಆನೆ ಇದೀಗ ಮೈಸೂರು ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದೆ.

ಸರ್ಕಸ್‌ನಿಂದ ಬಂದಳು ‘ರೂಪಾ’

ಈ ಆನೆಯನ್ನು 2016ರಲ್ಲಿ ಪ್ರಕೃತಿ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಒಂದು ಸರ್ಕಸ್ ಕಂಪನಿಯಿಂದ ರಕ್ಷಿಸಿ, ಅರಣ್ಯ ಇಲಾಖೆಯವರು ಆನೆ ಶಿಬಿರಕ್ಕೆ ಸ್ಥಳಾಂತರಿಸಿದರು. ಇದರಿಂದ ಆನೆಗೆ ಉತ್ತಮ ಆರೈಕೆ, ಆಹಾರ ಮತ್ತು ಆರಾಮದಾಯಕ ವಾತಾವರಣ ಲಭಿಸಿತು.

ಶಿಬಿರದಲ್ಲಿ ದೊರೆತ ತರಬೇತಿಯಿಂದ ಆನೆಯು ಶಾಂತ ಮತ್ತು ಮನುಷ್ಯರೊಂದಿಗೆ ಸಹಜವಾಗಿ ಹೊಂದಿಕೊಳ್ಳುವ ಗುಣ ಮೆರೆದಿತು. ಈ ಗುಣಾತ್ಮಕ ವೈಶಿಷ್ಟ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು, ಈ ಆನೆಗೆ ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಭಾಗವಹಿಸುವ ಅವಕಾಶ ದೊರೆತಿದೆ. ಇದು ಆನೆಗೆ ಹಾಗೂ ಶಿಬಿರದ ಸಿಬ್ಬಂದಿಗೆ ಹೆಮ್ಮೆ ತರಿಸುವ ಕ್ಷಣವಾಗಿದೆ.

ಆನೆ ಶಿಬಿರದಲ್ಲಿ ಹೇಮಾವತಿ

ಈ ಆನೆಯನ್ನು 2014ರ ನವೆಂಬರ್‌ನಲ್ಲಿ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಜನನವಾಗಿತ್ತು. ಶುರುವಿನಿಂದಲೇ ಉತ್ತಮ ಆರೈಕೆ ಹಾಗೂ ಪ್ರೀತಿಯೊಂದಿಗೆ ಬೆಳೆದು ಬಂದಿದೆ. ಶಿಬಿರದ ವಾತಾವರಣಕ್ಕೆ ಇದು ಹೊಂದಿಕೊಂಡಿದೆ.

ಮಾವುತರು ನೀಡಿದ ನಿತ್ಯದ ತರಬೇತಿಯಿಂದ ಶಿಸ್ತು, ಶಾಂತ ಸ್ವಭಾವ ಮತ್ತು ಕೌಶಲ ಮೂಲಕ ಗಮನ ಸೆಳೆದಿದೆ. ಇದೀಗ ಆನೆಯು ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದು, ಇದು ದುಬಾರೆ ಶಿಬಿರದ ಯಶಸ್ವಿ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.

ಮಾನವರೊಂದಿಗೆ ಉತ್ತಮ ಒಡನಾಡಿ ‘ಗೋಪಿ’

ಈ ಆನೆಯನ್ನು 1993ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾರೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ಬಳಿಕ ಈ ಆನೆಗೆ ದುಬಾರೆ ಶಿಬಿರದಲ್ಲಿ ಶಿಸ್ತಿನ ತರಬೇತಿ ನೀಡಲಾಗಿದ್ದು, ಅಲ್ಲಿನ ಸಫಾರಿ ಸೇವೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಪ್ರವಾಸಿಗರ ಜತೆಗೆ ನಿಯಮಿತ ಸಂವಹನ ಹೊಂದುತ್ತಿರುವ ಕಾರಣದಿಂದಾಗಿ ಈ ಆನೆಗೆ ಮಾನವ ಸಂಪರ್ಕದ ಉತ್ತಮ ಪರಿಚಯವಿದೆ. ಶಾಂತ, ನಿಯಂತ್ರಿತ ನಡವಳಿಕೆಯು ಇದರ ಪ್ರಮುಖ ಲಕ್ಷಣ.

ಈ ಆನೆ ಕಳೆದ 14 ವರ್ಷಗಳಿಂದ ನಿರಂತರವಾಗಿ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, ಪ್ರತಿ ವರ್ಷವೂ ಶಿಸ್ತುಪೂರ್ಣವಾಗಿ ಮೆರವಣಿಗೆಯಲ್ಲಿ ನಡೆಯುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. 2015ರಿಂದ ಈ ಆನೆಗೆ ಮತ್ತೊಂದು ಮಹತ್ವದ ಪಾತ್ರ ಅಂದರೆ ಪಟ್ಟದ ಆನೆಯ ಜತೆ ನಿಶಾನೆ ಆನೆಯಾಗಿ ಅರಮನೆ ಆವರಣದಲ್ಲಿ ನಡೆಯುವ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸುವ ಗೌರವ ಲಭಿಸಿದೆ.

ನಿಶಾನೆ ಆನೆಯಾಗಿ, ರಾಜದರ್ಶನ ಹಾಗೂ ಧಾರ್ಮಿಕ ವಿಧಿಗಳ ಸಂದರ್ಭಗಳಲ್ಲಿ ಇದು ಶಾಂತ ಮತ್ತು ಗಂಭೀರ ನಡವಳಿಕೆಯೊಂದಿಗೆ ಹಾಜರಿರುತ್ತದೆ. ಇದರ ಶಿಸ್ತಿನ ನಡೆ, ದೈಹಿಕ ಶಕ್ತಿಯುತ ಮತ್ತು ಅನುಭವದಿಂದ ಈ ಆನೆ ಇಂದು ದಸರಾದ ಪ್ರಮುಖ ಆನೆಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತಿದೆ. ಅರಣ್ಯವಾಸದಿಂದ ಅರಮನೆಯ ಪೂಜಾ ವೇದಿಕೆವರೆಗೆ ಈ ಆನೆಯ ಪಯಣ ಒಂದು ಸ್ಮರಣೀಯ ಯಶೋಗಾಥೆಯಾಗಿದೆ. ಸಂಯಮ ಸಂಕೇತ ಸುಗ್ರೀವ

ಈ ಆನೆಯನ್ನು 2016ರಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ಅರಣ್ಯ ವಲಯದಲ್ಲಿ ಸೆರೆ ಹಿಡಿಯಿತು. ನಂತರ, ಈ ಆನೆಯನ್ನು ಸುಸೂತ್ರವಾಗಿ ಪಳಗಿಸಿ ತರಬೇತಿ ನೀಡಲಾಯಿತು. ಪ್ರಸ್ತುತ ಈ ಆನೆ ಸಂಪೂರ್ಣ ಆರೋಗ್ಯದಲ್ಲಿದ್ದು, ಶಾಂತ ಸ್ವಭಾವ, ಶಿಸ್ತುಪೂರ್ಣ ನಡೆ ಹಾಗೂ ಉತ್ತಮ ಆಜ್ಞಾಪಾಲನೆಯೊಂದಿಗೆ ಅರಣ್ಯ ಇಲಾಖೆಯ ನಂಬಿಗಸ್ಥ ಆನೆಯಾಗಿ ಗುರುತಿಸಲಾಗಿದೆ.

ಈ ಆನೆ ಕಳೆದ 2 ಬಾರಿ ದಸರಾ ಮಹೋತ್ಸವದಲ್ಲಿ ಯಶಸ್ವಿಯಾಗಿ ಭಾಗವಹಿಸಿ, ಮೆರವಣಿಗೆಯಲ್ಲಿ ತನ್ನ ಶಕ್ತಿಯುತ ಹಾಗೂ ಸ್ಥಿರ ನಡವಳಿಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜನಸಂದಣಿಯ ನಡುವೆಯೂ ಶಾಂತವಾಗಿ ನಡೆದು ನಿಷಿದ್ಧ ಶಬ್ದಗಳಿಗೂ ಬೆಚ್ಚದೆ ಪ್ರತಿಕ್ರಿಯಿಸುವ ಧೈರ್ಯ ಈ ಆನೆಯ ಬಲವಾಗಿದೆ.

ಈ ಬಾರಿಯ ದಸರಾ ಮಹೋತ್ಸವದಲ್ಲಿಯೂ ಈ ಆನೆ ಭಾಗವಹಿಸುತ್ತಿದ್ದು, ತನ್ನ ಅನುಭವ ಮತ್ತು ಶಿಸ್ತು ಮೂಲಕ ಜಾತ್ರೆಯ ಭವ್ಯತೆಗೆ ಮತ್ತಷ್ಟು ಮೆರುಗು ನೀಡಲಿದೆ. ಅರಣ್ಯವಾಸದಿಂದ ಅರಮನೆಯವರೆಗಿನ ಈ ಆನೆಯ ಪಯಣ ಪ್ರತಿ ಹೆಜ್ಜೆಯಲ್ಲೂ ಸಂಯಮ ಮತ್ತು ಶ್ರದ್ದೆಯ ಸಂಕೇತವಾಗಿಯೇ ಬಿಂಬಿಸುತ್ತದೆ.