ಜಿಲ್ಲೆ

ಮೈಸೂರು ದಸರಾ: ಫಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಫಿರಂಗಿಗಳಿಗೆ ಶುಕ್ರವಾರ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಇದರೊಂದಿಗೆ 21 ಕುಶಾಲುತೋಪು ಸಿಡಿಸುವ ಫಿರಂಗಿ ದಳದ ತರಬೇತಿಗೂ ಚಾಲನೆ ದೊರೆಯಿತು.

ವಿಶ್ವವಿಖ್ಯಾತ ಜಂಬೂಸವಾರಿ ಹಾಗೂ ಪಂಜಿನ ಕವಾಯತು ಸಂದರ್ಭದಲ್ಲಿ ಕುಶಾಲ ತೋಪು ಸಿಡಿಸಲು 7 ಫಿರಂಗಿಗಳನ್ನು ಬಳಸಲಾಗುತ್ತದೆ. ದಸರಾ ಸಮೀಪಿಸುತ್ತಿರುವುದರಿಂದ ಇವುಗಳನ್ನು ಸ್ವಚ್ಛಗೊಳಿಸಿ ಸಜ್ಜುಗೊಳಿಸಲಾಗಿದೆ.

ಮೈಸೂರು ಅರಮನೆ ಆನೆ ಬಾಗಿಲು ಬಳಿ ಫಿರಂಗಿಗಳ ಮುಂದೆ ಚಾಮುಂಡೇಶ್ವರಿ ದೇವಿ ಫೋಟೋ ಇಟ್ಟು ಅಲಂಕಾರ ಮಾಡಲಾಯಿತು. ನಂತರ ವಿಜಯ ಗಣಪತಿ ಪೂಜೆ, ಶೋಡಶೋಪಚಾರ ಪೂಜೆ, ಆಯುಧ(ಪಿರಂಗಿ)ಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಮೃತ್ಯುಂಜಯ ಪೂಜೆ ಮಾಡಿ, ಫಿರಂಗಿ ದಳದ ಸಿಬ್ಬಂದಿ ಸೇರಿದಂತೆ ಪೊಲೀಸ್ ಅಧಿಕಾರಿಗಳಿಂದ ಮೃತ್ಯುಂಜಯ ಜಯ ಹೇಳಿಸಲಾಯಿತು. ಬೂದುಗುಂಬಳ ಕಾಯಿ ಒಡೆದು, ಎಲ್ಲ ಫಿರಂಗಿಗಳ ಚಕ್ರಗಳಿಗೆ ನಿಂಬೆಹಣ್ಣು ಇಟ್ಟು ಚಾಮುಂಡೇಶ್ವರಿ ಹೆಸರು ಹೇಳಿಕೊಂಡು ಮುಂದಕ್ಕೆ ಎಳೆಸಲಾಯಿತು.

ಅರ್ಚಕ ಎಸ್.ವಿ.ಪ್ರಹ್ಲಾದರಾವ್ ನೇತೃತ್ವದಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಪೂಜಾ ಕಾರ್ಯ ನೆರವೇರಿಸಿದರು. ಶನಿವಾರದಿಂದಲೇ ತಾಲೀಮು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ನಗರ ಪೊಲೀಸ್ ಆಯಕ್ತೆ ಸೀಮಾ ಲಾಟ್ಕರ್ ಮಾತನಾಡಿ, ಜಂಬೂಸವಾರಿ ಮೆರವಣಿಗೆಯಲ್ಲಿ ಆನೆ, ಕುದುರೆ ಪಾಲ್ಗೊಳ್ಳಲಿದ್ದು, ಜಂಬೂಸವಾರಿ ದಿನ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಹಾಗೂ ಪಂಜಿನ ಕವಾಯತು ವೇಳೆ 21 ಬಾರಿ ಕುಶಾಲುತೋಪು ಸಿಡಿಸಲಾಗುತ್ತದೆ. ಅದರ ಶಬ್ದಕ್ಕೆ ಆನೆ, ಕುದುರೆ ಹೆದರದಂತೆ ಸಜ್ಜುಗೊಳಿಸಲು 2-3 ಬಾರಿ ತಾಲೀಮು ನಡೆಸಲಾಗುತ್ತದೆ. ಅದಕ್ಕಾಗಿ ಫಿರಂಗಿಗಳಿಗೆ ಪೂಜೆ ಸಲ್ಲಿಸಲಾಗಿದೆ. ನಗರ ಸಶಸ್ತ್ರ ಮೀಸಲು ಪಡೆಯ 35 ಸಿಬ್ಬಂದಿಯನ್ನು ಫಿರಂಗಿ ದಳಕ್ಕೆ ನಿಯೋಗಿಸಲಾಗಿದೆ ಎಂದು ತಿಳಿಸಿದರು.

ಅರಮನೆ ಆವರಣದಲ್ಲಿ ಒಣ ತಾಲೀಮು ನಡೆಸಲಾಗುತ್ತದೆ. ಗಜಪಡೆ, ಅಶ್ವಪಡೆಯ ಮುಂದೆ ಸಿಡಿಮದ್ದು ಸಿಡಿಸುವ ತಾಲೀಮಿನ ದಿನಾಂಕ ಮತ್ತು ಸ್ಥಳ ಇನ್ನೂ ನಿಧರ್ರಿಸಿಲ್ಲ. ಫಿರಂಗಿ ದಳದ ಎಲ್ಲ ಸಿಬ್ಬಂದಿಗೆ ಪ್ರತಿ ವರ್ಷದಂತೆ ಈ ಸಲವೂ ವಿಮೆ ಮಾಡಿಸಲಾಗಿದೆ ಎಂದು ತಿಳಿಸಿದರು.

ಡಿಸಿಪಿ ಆರ್.ಎನ್.ಬಿಂದುಮಣಿ, ಸಿಎಆರ್ ಡಿಸಿಪಿ ಸಿದ್ದನಗೌಡ ವೈ.ಪಾಟೀಲ್, ಮೌಂಟೆಡ್ ಕಮಾಂಡೆಂಟ್ ಎ.ಮಾರುತಿ, ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಎಸಿಪಿ ಚಂದ್ರಶೇಖರ್ ಇತರರಿದ್ದರು.