ಜಿಲ್ಲೆ

ಮೈಸೂರು ದಸರಾ ದೀಪಾಲಂಕಾರ ಆನಂದಿಸಲು ಮುಗಿಬಿದ್ದ ಜನ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್ ದೀಪಾಲಂಕಾರ ನೋಡಲು ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ.

ವಾರಾಂತ್ಯವಾಗಿರುವ ಕಾರಣ ಶನಿವಾರ ಸಂಜೆ ಹೊತ್ತಿನಲ್ಲಿ ನಗರದ ಹೃದಯ ಭಾಗದಲ್ಲಿ ಜನಜಂಗುಳಿ, ವಾಹನ ದಟ್ಟಣೆ ಕಂಡು ಬಂತು.

ಸೆ.22ರಿಂದ ಅ.2ರವರೆಗೆ ದಸರಾ ಅದ್ದೂರಿಯಾಗಿ ನೆರವೇರಿತು. ಪ್ರವಾಸಿಗರಿಗಾಗಿ ದೀಪಾಲಂಕಾರ ಅ.12ರವರೆಗೂ ಇರಲಿದೆ. ಲೈಟಿಂಗ್ಸ್ ನೋಡಲು ಜನರು ಆಗಮಿಸುತ್ತಿರುವುದರಿಂದ ಸಂಚಾರ ಸಿಕ್ಕು ಉಂಟಾಗುತ್ತಿದೆ.

ದಸರಾ ವಸ್ತುಪ್ರದರ್ಶನ, ಆಹಾರ ಮೇಳ ಇನ್ನೂ ನಡೆಯುತ್ತಿದೆ.

ಇದರೊಂದಿಗೆ ನಗರದ ಪ್ರಮುಖ ರಸ್ತೆ, ವೃತ್ತದಲ್ಲಿ ಅಳವಡಿಸಿರುವ ದೀಪಾಲಂಕಾರ ನೋಡಲು ಜನರು ಈಗಲೂ ಬರುತ್ತಿದ್ದಾರೆ.

ಮಳೆ ನಿಂತರೂ ಹನಿ ನಿಲ್ಲದು ಎಂಬಂತೆ ದಸರಾ ಮುಗಿದ ಬಳಿಕವೂ ಮೈಸೂರಿಗೆ ಬರುವ ಪ್ರವಾಸಿಗರು ಸಂಖ್ಯೆ ಕಡಿಮೆಯಾಗಿಲ್ಲ. ಶಾಲಾ-ಕಾಲೇಜಿಗಳಿಗೆ ದಸರಾ ರಜೆ ಇದೆ. ಇದರೊಂದಿಗೆ ಪಾಲಕರಿಗೆ ವಾರಾಂತ್ಯವಾಗಿರುವ ಶನಿವಾರ ಸಹ ಕುಟುಂಬ ಸಹಿತವಾಗಿ ಜನರು ಮೈಸೂರಿಗೆ ಲಗ್ಗೆ ಇಟ್ಟಿದ್ದಾರೆ.

ಹೀಗೆ ಬಂದವರು ದೀಪಾಲಂಕಾರ ನೋಡದೆ ಹೋಗುತ್ತಿಲ್ಲ. ಎಷ್ಟೋ ಜನರು ಲೈಟಿಂಗ್ಸ್ ವೀಕ್ಷಣೆಗಾಗಿ ಬೆಂಗಳೂರು ಸೇರಿದಂತೆ ಅಕ್ಕಪಕ್ಕ ಜಿಲ್ಲೆಯಿಂದ ಬರುತ್ತಿದ್ದಾರೆ. ಆದ್ದರಿಂದ ಮೈಸೂರು ಹೃದಯ ಭಾಗ ಪ್ರದೇಶ ಜನರಿಂದ ತುಂಬಿ ಹೋಗಿದೆ.

ಸಂಜೆ ಹೊತ್ತಿನಲ್ಲಿ ಅರಮನೆ ಸುತ್ತಿನ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಕಂಡು ಬರುತ್ತಿದೆ. ಸಯ್ಯಜಿರಾವ್ ರಸ್ತೆ, ಆಲ್ಬರ್ಟ್ ವಿಕ್ಟರ್ ರಸ್ತೆ, ಅಶೋಕರಸ್ತೆ, ಇರ್ವಿನ್ ರಸ್ತೆ, ಬಿಎನ್ ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್‌ಬಿ ರಸ್ತೆಯಲ್ಲಿ ಅಳವಡಿಸಿರುವ ದೀಪಾಲಂಕಾರವನ್ನು ನೋಡಲು ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಕೆ.ಆರ್. ವೃತ್ತ, ಜಯಚಾಮರಾಜ ಒಡೆಯರ್ ವೃತ್ತ, ಕೋಟೆ ಆಂಜನೇಯಸ್ವಾಮಿ ಆವರಣ, ಸಂಸ್ಕೃತ ಪಾಠಶಾಲೆ ವೃತ್ತ, ಆಯುರ್ವೇದಿಕ್ ಕಾಲೇಜಿನ ವೃತ್ತ, ರೈಲ್ವೆ ನಿಲ್ದಾಣ ಬಳಿ ವೃತ್ತದಲ್ಲಿರುವ ಲೈಟಿಂಗ್ಸ್ ನೋಡಲು ಬಹಳಷ್ಟು ಜನರು ಕಾತರರಾಗಿದ್ದಾರೆ. ಇದನ್ನು ವೀಕ್ಷಿಸಲು ಪ್ರವಾಸಿಗರ ದಂಡು ಬರುತ್ತಿರುವುದರಿಂದ ಈ ಪ್ರದೇಶದಲ್ಲಿ ಹೆಚ್ಚಿನ ವಾಹನ ಮತ್ತು ಜನ ದಟ್ಟಣೆ ಕಂಡು ಬರುತ್ತಿದೆ.

ಈ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿದೆ. ದೀಪಾಲಂಕಾರ ವೀಕ್ಷಿಸುವ ಜನರು ವಿದ್ಯುತ್ ದೀಪಗಳನ್ನು ಸ್ಪರ್ಶಿಸುವುದು, ಸೆಲ್ಫಿ ತೆಗೆದುಕೊಳ್ಳುವುದು, ಸ್ಪರ್ಶಿಸುವಂತೆ ಮಕ್ಕಳಿಗೆ ಪ್ರೇರೇಪಿಸುವುದು ಇತ್ಯಾದಿ ಅಸುರಕ್ಷಿತ ಚಟುವಟಿಕೆ ನಡೆಯುತ್ತಿವೆ. ಇದರಿಂದ ವಿದ್ಯುತ್ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸುರಕ್ಷತೆ ಕಾಪಾಡಿಕೊಳ್ಳಬೇಕಿದೆ.

ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕರು ಯಾವುದೇ ರೀತಿಯಾಗಿ ದೀಪಾಲಂಕಾರ ಸ್ಪರ್ಶಿಸುವ ಪ್ರಯತ್ನ ಮಾಡಬಾರದು. ತಮ್ಮ ಜತೆಯಲ್ಲಿರುವ ಮಕ್ಕಳನ್ನು ಯಾವುದೇ ಕಾರಣಕ್ಕೂ ವಿದ್ಯುತ್ ದೀಪ ಹಾಗೂ ತಂತಿಗಳನ್ನು ಮುಟ್ಟಲು ಪ್ರಯತ್ನಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೆಸ್ಕ್ ತಿಳಿಸಿದೆ.