ಮೈಸೂರು: ಈ ಬಾರಿ ಜಂಬೂಸವಾರಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸ್ತಬ್ಧಚಿತ್ರ ಮೆರವಣಿಗೆ ಗಮನ ಸೆಳೆಯಲಿದೆ.
ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿರುವ ಆರೋಗ್ಯಕರ ಮನಸ್ಸು-ನಶೆ ಮುಕ್ತ ಕ್ಯಾಂಪಸ್ ಅಭಿಯಾನದ ಸ್ತಬ್ಧಚಿತ್ರ ಜಾಗೃತಿ ಮೂಡಿಸಲಿದೆ. ದೇಶ-ವಿದೇಶದ ವಿವಿಧ ಭಾಗಗಳಿಂದ ಬರುವ ಪ್ರವಾಸಿಗರಲ್ಲಿ ದುಶ್ಚಟಗಳಿಂದ ಉಂಟಾಗುವ ಹಾನಿ, ಅದರಿಂದ ಹೊರಗೆ ಬಂದಾಗ ಸಿಗುವ ಗೌರವ, ಸುಸ್ಥಿರ ಬದುಕಿನ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಆರ್.ಮಧು ಮೋಹನ್ (ಇನ್ಕ್ಯೂಬ್) ವಿನ್ಯಾಸಗೊಳಿಸಿದ ಈ ಸ್ತಬ್ಧಚಿತ್ರದಲ್ಲಿ ದುಶ್ಚಟಗಳಿಗೆ ಒಳಗಾಗುವುದರಿಂದ ಹಿಡಿದು ಆ ವಿಷ ವರ್ತುಲದಿಂದ ಪಾರಾಗುವವರೆಗಿನ ಪಯಣವನ್ನು ಚಿತ್ರಿಸಲಾಗಿದೆ.
3ಡಿ ಸರಣಿ ದೃಶ್ಯಗಳ ಮೂಲಕ ಭರವಸೆ ಮತ್ತು ನಿರಾಸೆ ಎರಡು ಪರಸ್ಪರ ವಿರುದ್ಧವಾದ ಭಾವನಾತ್ಮಕ ಸಂಘರ್ಷ ತೋರಿಸಲಾಗಿದೆ. ದುಶ್ಚಟಗಳು ಆರಂಭದಲ್ಲಿ ಕೊಡುವ ಮುದ ಹಾಗೂ ಅನಂತರದಲ್ಲಿ ಉಂಟಾಗುವ ಹಾನಿಯ ಚಿತ್ರಣ, ಈ ಚಟಗಳಿಂದ ಪಾರಾದ ನಂತರದ ಭರವಸೆಯ ಗೆಲುವಿನ ಚಿತ್ರಗಳೂ ಪ್ರದರ್ಶನಗೊಳ್ಳಲಿವೆ.
ರಾಜೀವ್ ಗಾಂಧಿ ವಿವಿ ವ್ಯಾಪ್ತಿಯ ರಾಜ್ಯದ ಎಲ್ಲ ವೈದ್ಯಕೀಯ ವಿಜ್ಞಾನ ಕಾಲೇಜುಗಳಲ್ಲಿ ಮಾದಕವಸ್ತು ಮತ್ತು ತಂಬಾಕು ಮುಕ್ತ ಕ್ಯಾಂಪಸ್‌ಗಳನ್ನು ಪ್ರೋತ್ಸಾಹಿಸುವ ಧ್ಯೇಯೋದ್ದೇಶವನ್ನು ಈ ಸ್ತಬ್ಧಚಿತ್ರ ಪ್ರತಿನಿಧಿಸುತ್ತದೆ.
ನಶೆಮುಕ್ತ ಕ್ಯಾಂಪಸ್ ಅಭಿಯಾನದ ಭಾಗವಾಗಿ ವಿಶ್ವವಿದ್ಯಾಲಯವು ಸಂಬಂಧಿತ ಕಾಲೇಜುಗಳಲ್ಲಿ ಎಚ್ಚರಿಕೆ ಸಮಿತಿ ರಚಿಸಲು ಸೂಚಿಸಿದೆ. ವಿದ್ಯಾರ್ಥಿಗಳ ಮಾನಸಿಕ ಒತ್ತಡ ಕಡಿಮೆ ಮಾಡಲು ಮತ್ತು ದುಶ್ಚಟ ತಡೆಯಲು ಯೋಗದಂತಹ ಕಾರ್ಯಕ್ರಮ ಪರಿಚಯಿಸಲು ಸಹ ವಿಶ್ವವಿದ್ಯಾಲಯ ಸೂಚನೆ ನೀಡಿದೆ.
ವಿವಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಆರೋಗ್ಯ, ಭವಿಷ್ಯ ಹಾಗೂ ಸ್ವಾಸ್ಥ್ಯವನ್ನು ಉತ್ತೇಜಿಸುವ ಮತ್ತು ದುಶ್ಚಟಗಳ ವಿರುದ್ಧ ಸಮುದಾಯ ಭಾಗವಹಿಸುವಿಕೆ ಪ್ರೇರೇಪಿಸುವ 3ಡಿ ಸ್ತಬ್ಧಚಿತ್ರವನ್ನು ದಸರಾ ವೇದಿಕೆಯಲ್ಲಿ ಪ್ರದರ್ಶಿಸುತ್ತಿದ್ದು,
ವಿದ್ಯಾರ್ಥಿ ಸಮುದಾಯದಲ್ಲಿ, ಅದರಲ್ಲೂ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಸ್ವಸ್ಥ ಮನಸ್ಸು, ಸ್ವಸ್ಥ ಸಮಾಜದ ಮಹತ್ವ ಸಾರುವುದು ದೇಶದ ಬಹುದೊಡ್ಡ ಆರೋಗ್ಯ ವಿಶ್ವವಿದ್ಯಾಲಯವಾಗಿ ನಮ್ಮ ಕರ್ತವ್ಯ. ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಸ್ತಬ್ಧಚಿತ್ರ ಸಿದ್ಧವಾಗಿದೆ. ಯುವಪೀಳಿಗೆ ಸುರಕ್ಷಿತ, ಆರೋಗ್ಯಕರ ಮತ್ತು ಜಾಗೃತ ಆರೋಗ್ಯ ವೃತ್ತಿಪರರ ತಲೆಮಾರನ್ನು ಬೆಳೆಸಲು ಬದ್ಧ. ಈ ನಿಟ್ಟಿನಲ್ಲಿ ಇದು ಮಹತ್ವಪೂರ್ಣ ಹೆಜ್ಜೆಯಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ. ಭಗವಾನ್ ತಿಳಿಸಿದರು.
30 ಅಡಿ ಉದ್ದ ಹಾಗೂ 11 ಅಡಿ ಅಗಲ (ಒಟ್ಟು ಎತ್ತರ: ಸುಮಾರು 11 ಅಡಿ) 3ಡಿ ಕಲಾತ್ಮಕ ಚಿತ್ರ ವಿನ್ಯಾಸಗೊಳಿಸಲಾಗಿದೆ. ಇದು ನಶೆಯಿಂದ ಪುನರುಜ್ಜೀವನದ ಪಯಣವನ್ನು ಶಕ್ತಿಶಾಲಿಯಾಗಿ ಹಾಗೂ ಕಥಾನಕವಾಗಿ ಪ್ರಸ್ತುತಪಡಿಸುತ್ತದೆ. ಕ್ಯಾನ್ಸರ್ ಉಂಟು ಮಾಡುವ ಅಭ್ಯಾಸಗಳು, ದುಶ್ಚಟ, ಅವುಗಳ ಮನೋವೈಜ್ಞಾನಿಕ, ದೈಹಿಕ ಪ್ರಭಾವಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ.
ಎರಡು ಪರಸ್ಪರ ವಿರೋಧಾಭಾಸದ ಮಾನವ ಚರ್ಯೆವನ್ನು 180 ಡಿಗ್ರಿ ಗಾತ್ರದಲ್ಲಿ ಒಂದಕ್ಕೆ ಹಿಮ್ಮುಖವಾಗಿ ಒಂದರಂತೆ ರೂಪಿಸಲಾಗಿದೆ.
ಇದು ನಶೆ, ನಿರಾಸೆ ಮತ್ತು ಅನಾರೋಗ್ಯಕರ ಜೀನವ ಪ್ರತಿನಿಧಿಸುವ ಕಳೆಗುಂದಿದ ಮುಖ, ಅದೇ ರೀತಿ ನಶೆಮುಕ್ತ, ಆರೋಗ್ಯಕರ, ಗೆಲುವಿನ ಭರವಸೆಯ ಇನ್ನೊಂದು ಮುಖ ತೋರಿಸಲಾಗುತ್ತದೆ.
ಈ ಮೂಲಕ ಇವೆರಡರ ನಡುವಿನ ಗಾಢವಾದ ವ್ಯತ್ಯಾಸ ಮನದಟ್ಟು ಮಾಡುವ ಉದ್ದೇಶ ಹೊಂದಿದೆ. ಈ ಎರಡೂ ಚರ್ಯೆಗಳ ಮೇಲೆ ಏರಿರುವುದು ಸ್ಟೆಥಾಸ್ಕೋಪ್‌ಗಳ ಮರ, ಇದು ವೈದ್ಯಕೀಯ ಮಧ್ಯಸ್ಥಿಕೆ, ಚಿಕಿತ್ಸೆ, ಮಾರ್ಗದರ್ಶನ, ಜೀವನೋತ್ಸಾಹ ಪ್ರತಿನಿಧಿಸುವ ದೃಶ್ಯಾತ್ಮಕ ಸಂಕೇತವಾಗಿದೆ.