ಜಿಲ್ಲೆ

ಮೈಸೂರು ದಸರಾ: 112 ಚಿತ್ರಗಳ ಪ್ರದರ್ಶನ, ಪುನೀತ್ ರಾಜಕುಮಾರ್ ಸ್ಮರಣೆ

ಮೈಸೂರು: ದಸರಾ ಚಲನಚಿತ್ರೋತ್ಸವದಲ್ಲಿ ಈ ಬಾರಿ ಒಟ್ಟು 112 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಸೆ. 27ರಿಂದ ಅ.3ರವರೆಗೆ ಸಿನಿಮಾ ಉತ್ಸವ ಜರುಗಲಿದ್ದು, 56 ಕನ್ನಡ, 28 ಪನೋರಮಾ, 28 ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ನಗರದ ಬಹುಪರದೆ ಚಿತ್ರಮಂದಿರಗಳಾದ ‘ಮಾಲ್ ಆಫ್ ಮೈಸೂರು’ನಲ್ಲಿರುವ ಐನಾಕ್ಸ್ ಮತ್ತು ಜಯಲಕ್ಷ್ಮೀಪುರಂನ ಬಿಎಂ ಹ್ಯಾಬಿಟೆಟ್ ಮಾಲ್‌ನಲ್ಲಿರುವ ಡಿಆರ್‌ಸಿಯಲ್ಲಿ ಮಾತ್ರ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಈ ಸಲ ಏಕಪರದೆ ಚಿತ್ರಮಂದಿರದಲ್ಲಿ ಪ್ರದರ್ಶನ ಇರುವುದಿಲ್ಲ.

ದಸರಾ ಮಹೋತ್ಸವದಲ್ಲಿ ಚಲನಚಿತ್ರೋತ್ಸವ ಪ್ರಮುಖ ಆಕರ್ಷಣೆಯಾಗಿದ್ದು, ಕಲಾಮಂದಿರದಲ್ಲಿ ಸೆ. 26ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ನಟ ಡಾ.ಶಿವರಾಜ್‌ಕುಮಾರ್ ಉದ್ಘಾಟಿಸಲಿದ್ದಾರೆ. ನಟರಾದ ಅಮೃತ ಅಯ್ಯಂಗಾರ್, ಕಾವ್ಯಾ ಶೆಟ್ಟಿ, ಸುಧಾರಾಣಿ, ಅನು ಪ್ರಭಾಕರ್ ಸೇರಿದಂತೆ ಅನೇಕ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ದಸರಾ ಚಲನಚಿತ್ರೋತ್ಸವ ಉಪ ಸಮಿತಿಯ ವಿಶೇಷಾಧಿಕಾರಿ ಆರ್.ಶೇಷು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪುನೀತ್‌ರಾಜ್‌ಕುಮಾರ್ ನಟಿಸಿರುವ ಬೆಟ್ಟದ ಹೂ, ಅಂಜನಿಪುತ್ರ, ರಾಜಕುಮಾರ, ಮೈತ್ರಿ, ಪೃಥ್ವಿ ಹಾಗೂ ಯುವರತ್ನ ಸಿನಿಮಾ ಹಾಗೂ ಸಂಚಾರಿ ವಿಜಯ್ ನಟಿಸಿರುವ ತಲೆದಂಡ, ಪುಕ್ಸಟ್ಟೆ ಲೈಫು, ಆ್ಯಕ್ಟ್ 1978 ಸಿನಿಮಾಗಳನ್ನೂ ಸಾರ್ವಜನಿಕರು ನೋಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಪುನೀತ್‌ರಾಜ್‌ಕುಮಾರ್ ಅವರು ಬಾಲನಟರಾಗಿ ನಟಿಸಿರುವ ಬೆಟ್ಟದ ಹೂ ಚಿತ್ರವನ್ನು ಸೆ. 27ರಂದು ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅವರು ಶಕ್ತಿಧಾಮದ ಮಕ್ಕಳೊಂದಿಗೆ ವೀಕ್ಷಿಸಲಿದ್ದಾರೆ ಎಂದು ತಿಳಿಸಿದರು.

3 ದಿನದ ಕಾರ್ಯಾಗಾರ:
ಸಿನಿಮಾ ಕಾರ್ಯಾಗಾರ ಸೆ.22, 23 ಮತ್ತು 24ರಂದು ಕಲಾಮಂದಿರದಲ್ಲಿ ನಡೆಯಲಿದ್ದು, ಚಲನಚಿತ್ರ ನಿರ್ಮಾಣದ ಪೂರ್ವ ತಯಾರಿ ಕುರಿತು ಸಿನಿಮಾ ಪ್ರಿಯರಿಗೆ ಮಾಹಿತಿ ನೀಡಲಾಗುತ್ತದೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಾರ್ಯಾಗಾರ ಉದ್ಘಾಟಿಸುವರು. ಚಂಪಾ ಶೆಟ್ಟಿ, ಪ್ರಶಾಂತ್ ಪಂಡಿತ್, ಪ್ರವೀಣ್ ಕೃಪಾಕರ್, ಪವನ್‌ಕುಮಾರ್, ಶಂಕರ್ ಎನ್.ಸಂಡೂರು, ಪನ್ನಗಾಭರಣ, ಮಂಸೊರೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರನ್ನು ಆಹ್ವಾನಿಸಲಾಗಿದ್ದು, ಪ್ರವೇಶಕ್ಕೆ 300 ರೂ. ಶುಲ್ಕ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.
ಸಮಿತಿಯ ಕಾರ್ಯದರ್ಶಿಯೂ ಆದ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ಇದ್ದರು.

ದಿನದ ಟಿಕೆಟ್‌ಗೆ 100 ರೂ.:
ಒಂದು ದಿನದ ಟಿಕೆಟ್ ದರ 100 ರೂ. ನಿಗದಿಪಡಿಸಲಾಗಿದೆ. ಇದನ್ನು ಖರೀದಿಸಿ ಯಾವ ಸಿನಿಮಾವನ್ನೂ ದಿನವಿಡೀ ನೋಡಬಹುದು. ವಾರದ ಟಿಕೆಟ್‌ಗೆ ವಿದ್ಯಾರ್ಥಿಗಳಿಗೆ 300 ರೂ. ಮತ್ತು ಸಾಮಾನ್ಯರಿಗೆ 500 ರೂ. ದರ ನಿಗದಿಪಡಿಸಲಾಗಿದೆ.

ಕನ್ನಡ ಚಿತ್ರಗಳು:
100, 777 ಚಾರ್ಲಿ, ಶ್ರೀ ಸುತ್ತೂರು ಮಠ ಗುರುಪರಂಪರೆ (ಸಾಕ್ಷ್ಯ ಚಿತ್ರ), ಆದ್ಯಾ, ಅವನೇ ಶ್ರೀಮನ್ನಾರಾಯಣ, ಅವತಾರ ಪುರುಷ, ಬಡವ ರಾಸ್ಕಲ್, ಭಜರಂಗಿ-2, ಭರಾಟೆ, ದಿಯಾ, ದೃಶ್ಯ 2, ಗಾಳಿಪಟ-2, ಗರುಡ ಗಮನ ವೃಷಭ ವಾಹನ, ಜಂಟಲ್ ಮನ್, ಗಿಫ್ಟ್ ಬಾಕ್ಸ್, ಹರಿಕಥೆ ಅಲ್ಲ ಗಿರಿಕಥೆ, ಹೀರೋ, ಇಂಡಿಯಾ ವರ್ಸಸ್ ಇಂಗ್ಲೆಂಡ್, ಇನ್ಸ್‌ಪೆಕ್ಟರ್ ವಿಕ್ರಂ, ಕವಚ, ಕವಲುದಾರಿ, ಕೆಜಿಎಫ್-1, ಕೆಜಿಎಫ್-2, ಲವ್ ಮಾಕ್ಟೈಲ್-1, ಲವ್ ಮಾಕ್ಟೈಲ್-2, ಮದಗಜ, ಮುಗಿಲ್‌ಪೇಟೆ, ನಿನ್ನ ಸನಿಹಕೆ, ಒಂಬತ್ತನೇ ದಿಕ್ಕು, ಪೈಲ್ವಾನ್, ರೈಡರ್, ರಾಬರ್ಟ್, ಸಖತ್, ಸಲಗ, ಸೀತಾರಾಮ ಕಲ್ಯಾಣ, ಶಿವಾಜಿ ಸೂರತ್ಕಲ್, ವಿಕ್ರಾಂತ್ ರೋಣ, ವಿಂಡೋ ಸೀಟ್.

ಭಾರತೀಯ ಚಿತ್ರಗಳು
ಎ ಡಾಗ್ ಆ್ಯಂಡ್ ಹಿಸ್ ಮ್ಯಾನ್, ಹರಿವ ನದಿಗೆ ಮೈಯೆಲ್ಲಾ ಕಾಲು, ಅಡಿಯು ಗೊಡಾರ್ಡ್, ಅಗ್ನಿವರ್ಷ, ಐಸೇ ಹೀ, ಬಾಘ್, ಬೂಂಬಾ ರೈಡ್, ಘೋಡೇ ಕೋ ಜಲೇಬಿ ಖಿಲಾನೆ ಲೇ ಜಾ ರಿಯಾ ಹೂಂ, ಹಾರುವ ಹಂಸಗಳು, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಇಂಟು ದಿ ಮಿಸ್ಟ್, ಮನುಸಂಗಡ, ಮಿಂಚುಹುಳು, ಮೂಕಜ್ಜಿಯ ಕನಸುಗಳು, ನೀಲಿ ಹಕ್ಕಿ, ನೋಯ್, ಪದಕ, ಸಾರಾ ವಜ್ರ, ವಿಡೋ ಅಫ್ ಸೈಲೆನ್ಸ್.