Elephant family, Bandipur 
ಜಿಲ್ಲೆ

ಮೈಸೂರು ತಾಲೂಕಿನಲ್ಲಿ ಕಾಡಾನೆಗಳ ಹಾವಳಿಯಿಂದ ಬೆಳೆ ಹಾನಿ

ಮೈಸೂರು: ತಾಲೂಕಿನ ಹಲವು ಗ್ರಾಮಗಳ ಜಮೀನುಗಳಲ್ಲಿ ಎರಡು ಕಾಡಾನೆಗಳ ಉಪಟಳದಿಂದ ಬೆಳೆ ನಷ್ಟವಾಗಿದೆ.

ಜಯಪುರ ಹೋಬಳಿ ಹಾಗೂ ಸರಗೂರು ತಾಲೂಕಿನ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಳೆದ 10 ದಿನಗಳಿಂದ ಎರಡು ಕಾಡಾನೆಗಳು ಓಡಾಡುತ್ತಿವೆ. ಹೊಲ ಮತ್ತು ತೋಟದಲ್ಲಿ ಬೆಳೆದಿರುವ ಬೆಳೆಗಳಿಗೆ ಹಾನಿ ಮಾಡಿವೆ. ಗಂಡಾನೆಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಮಾಡುತ್ತಿರುವ ಯತ್ನ ವಿಫಲವಾಗಿದ್ದು, ಆನೆಗಳು ರಾಜಾರೋಷವಾಗಿ ಹೊಲಗಳಲ್ಲಿ ಸಂಚಾರ ಮಾಡುತ್ತಿವೆ.

ರೈತರು ಬೆಳೆದಿರುವ ಕುಂಬಳಕಾಯಿ, ಸೌತೆಕಾಯಿ, ತೊಗರಿ, ಬಾಳೆ ಸೇರಿದಂತೆ ಇನ್ನಿತರ ಬೆಳೆ ಆನೆಗಳಿಗೆ ಆಹಾರವಾದರೆ, ಮತ್ತಷ್ಟು ಬೆಳೆಗಳು ಆನೆಗಳ ಕಾಲಿಗೆ ಸಿಕ್ಕಿ ನೆಲಕಚ್ಚಿವೆ. ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಮಾಡುತ್ತಿರುವ ಪ್ರಯತ್ನವೆಲ್ಲ ವಿಫಲವಾಗಿದ್ದು, 10 ದಿನದಿಂದಲೂ ಅರಣ್ಯ ಇಲಾಖೆ ಸಿಬ್ಬಂದಿಗೆ ಕಾಡಾನೆಗಳು ತಲೆನೋವು ತಂದಿತ್ತಿವೆ.

ಜಯಪುರ ಹೋಬಳಿ ಮಂಡನಹಳ್ಳಿ- ಗುಜ್ಜೇಗೌಡನಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಆನೆಗಳ ಸಂಚಾರದಿಂದಾಗಿ ಹಲವು ರೈತರ ಬೆಳೆ ನಷ್ಟ ಸಂಭವಿಸಿದೆ. ಎಂ.ಡಿ.ಸಿದ್ಧಲಿಂಗಸ್ವಾಮಿ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ತೊಗರಿ, ಕುಂಬಳಕಾಯಿ ಬೆಳೆಯನ್ನು ನಾಶಗೊಳಿಸಿದೆ.

ಅಲ್ಲದೆ ನೀರಿನ ಡ್ರಮ್ ತುಳಿದು, ಛಿದ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬೆಳೆ ನಷ್ಟವುಂಟಾಗಿರುವ ರೈತರಿಗೆ ತ್ವರಿತಗತಿಯಲ್ಲಿ ಪರಿಹಾರ ನೀಡಬೇಕು. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರೈತರು ಕೋರಿದ್ದಾರೆ.

ಎರಡು ಕಾಡಾನೆಗಳನ್ನು ಕಾಡಿಗೆ ಓಡಿಸಲು ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾರ್ಯಾಚರಣೆ ವೇಳೆ ಮೈಸೂರು-ಎಚ್.ಡಿ.ಕೋಟೆ ಮುಖ್ಯರಸ್ತೆ ವಾಹನ ಸಂಚಾರ ಬಂದ್ ಮಾಡಿ ಆನೆ ಓಡಿಸುವ ಪ್ರಯತ್ನ ಮಾಡಲಾಗಿತ್ತು. ಆದರೂ ಆನೆಗಳು ರಸ್ತೆ ದಾಟಲಿಲ್ಲ.

ಈ ಹಿನ್ನೆಲೆಯಲ್ಲಿ ದಸರಾ ಆನೆಗಳಾದ ಮಹೇಂದ್ರ ಮತ್ತು ಭೀಮ ಆನೆಯನ್ನು ಕರೆಸಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಅಲ್ಲದೆ ಥರ್ಮಲ್ ಡ್ರೋನ್ ಬಳಸಿ ಆನೆಗಳ ಚಲನವಲನ ಗಮನಿಸಲಾಗುತ್ತಿದೆ ಎಂದು ಡಿಸಿಎಫ್ ಡಾ.ಕೆ.ಎನ್.ಬಸವರಾಜು ತಿಳಿಸಿದ್ದಾರೆ.