ಬಾಗಲಕೋಟೆ: ನಗರದ ಬಸವೇಶ್ವರ ಪ್ರೌಢಶಾಲೆ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಕಿವುಡರ ರಾಜ್ಯಮಟ್ಟದ ೧೪ನೇ ಕ್ರೀಡಾಕೂಟದಲ್ಲಿ ೧೭೩ ಅಂಕಗಳನ್ನು ಪಡೆಯುವ ಮೂಲಕ ಮೈಸೂರು ಕ್ರೀಡಾಪಟುಗಳು ಸಮಗ್ರ ವೀರಾಗ್ರಣಿ ಪಡೆದುಕೊಂಡಿದ್ದಾರೆ.
೧೦೩ ಅಂಕಗಳನ್ನು ಗಳಿಸಿದ ಬೆಂಗಳೂರು ತಂಡ ದ್ವಿತೀಯ ಸ್ಥಾನ ಹಾಗೂ ೬೪ ಅಂಕಗಳನ್ನು ಪಡೆದ ಮಂಡ್ಯ ಜಿಲ್ಲೆ ಕ್ರೀಡಾಪಟುಗಳು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಅತಿಥೇಯ ಬಾಗಲಕೋಟೆ ತಂಡ ೨೯ ಅಂಕಗಳನ್ನು ಗಳಿಸುವ ಮೂಲಕ ೭ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ಸಹಯೋಗದಲ್ಲಿ ಬಾಗಲಕೋಟೆ ಜಿಲ್ಲಾ ಕಿವುಡರ ಸಂಘ ಸೆ.೨೭ ರಿಂದ ಮೂರು ದಿನಗಳ ಕಾಲ ಕ್ರೀಡಾಕೂಟ ಆಯೋಜಿಸಲಾಗಿತ್ತು. ೧೨ ವರ್ಷದಿಂದ ೧೮ ವರ್ಷ ಮೇಲ್ಪಟ್ಟ ೧೨೬ ವಿದ್ಯಾರ್ಥಿನಿಯರು ಸೇರಿ ಒಟ್ಟು ರಾಜ್ಯದ ೨೦ ಜಿಲ್ಲೆಗಳ ೪೬೫ ಕ್ರೀಡಾಪಟುಗಳು ಭಾಗವಹಿಸಿದ್ದರು. ಸಂಜ್ಞೆ ಭಾಷೆ ಹಾಗೂ ಧ್ವಜದ ಚಿಹ್ನೆಗಳನ್ನು ನೋಡುವ ಮೂಲಕ ಕ್ರೀಡೆಗಳಲ್ಲಿ ಸೆಣಸಾಟ ಆರಂಭಿಸುತ್ತಿದ್ದ ಕ್ರೀಡಾಪಟುಗಳು ಕೊನೆಯ ಕ್ಷಣದವರೆಗೂ ರೋಚಕವಾಗಿ ಹೋರಾಟ ನಡೆಸಿ ಗಮನ ಸೆಳೆದರು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಎಲ್ಲ ಕ್ರೀಡಾಪಟುಗಳಿಗೂ ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದ ವತಿಯಿಂದ ಊಟ ಹಾಗೂ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.