ಜಿಲ್ಲೆ

ಮೈಸೂರು ಜಿಲ್ಲೆಯಲ್ಲಿ ಬಾಲ್ಯ ವಿವಾಹಕ್ಕಿಲ್ಲ ಅಂಕುಶ!

ಮಂಜುನಾಥ ತಿಮ್ಮಯ್ಯ ಮೈಸೂರು

ಸಾಮಾಜಿಕ ಪಿಡುಗಾಗಿರುವ ಬಾಲ್ಯ ವಿವಾಹ ಅಪರಾಧ ಎಂಬುದು ಬಹುತೇಕರಿಗೆ ಗೊತ್ತಿದೆ. ಆದಾಗ್ಯೂ, ಈ ಕುರಿತು ತಿಳಿದು ಸಹ ಅಪ್ರಾಪ್ತರನ್ನು ಮದುವೆ ಮಾಡಲಾಗುತ್ತಿದೆ. ಇದು ನಾಗರಿಕ ಸಮಾಜವನ್ನು ಚಿಂತೆಗೀಡು ಮಾಡಿದೆ.

‘ಹಗಲು ಕಂಡ ಬಾವಿಗೆ ಇರುಳು ಬಿದ್ದಂತೆ’ ಎಂಬ ಗಾದೆ ಮಾತಿನಂತೇ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಎಷ್ಟೋ ಪ್ರಕರಣಗಳು ದಾಖಲು ಸಹ ಆಗುತ್ತಿಲ್ಲ.

ಬಾಲ್ಯ ವಿವಾಹ ತಡೆ ಕಾಯ್ದೆ 1929ರಲ್ಲಿ ಮೊದಲ ಬಾರಿಗೆ ಜಾರಿ ಬಂದಿದೆ. ಕಾಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಿ ಕಾಯ್ದೆಯನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ. ಪೊಲೀಸ್, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳು, ಮಕ್ಕಳ ರಕ್ಷಣಾ ಸಮಿತಿ ಸಹ ಕಣ್ಗಾವಲು ಇಟ್ಟಿವೆ. ಈ ಕುರಿತು ಅರಿವು ಮೂಡಿಸಲಾಗುತ್ತಿದೆ.

ಆದರೆ, ಕೆಲ ಪಾಲಕರು ಇದಕ್ಕೆ ಕಿವಿಗೊಡುತ್ತಿಲ್ಲ. ಇದು ಅಪರಾಧ ಎಂದು ತಿಳಿದಿದ್ದರೂ 18 ವರ್ಷದೊಳಗಿನ ಅಪ್ರಾಪ್ತೆಯರನ್ನು ಸಂಸಾರ ಬಂಧನಕ್ಕೆ ಬಲವಂತವಾಗಿ ಸಿಲುಕಿಸುತ್ತಿದ್ದು, ಅವರ ಬಾಲ್ಯವನ್ನು ನಾಶ ಮಾಡಿ ಭವಿಷ್ಯವನ್ನೂ ಚಿವುಟಿ ಹಾಕಲಾಗುತ್ತಿದೆ.

ಕದ್ದುಮುಚ್ಚಿ ನಡೆಯುವ ಬಾಲ್ಯ ವಿವಾಹಗಳಿಗೆ ಅಂಕುಶ ಬೀಳುತ್ತಿಲ್ಲ. ಜತೆಗೆ, ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಹಾಗೇ ಅವುಗಳನ್ನು ಮುಚ್ಚಿಹಾಕಲಾಗುತ್ತಿದೆ. ಇವುಗಳು ಲೆಕ್ಕಕ್ಕೂ ಸಿಗುತ್ತಿಲ್ಲ. ಜತೆಗೆ, ಪತ್ತೆ ಹಚ್ಚುವುದೇ ಕಷ್ಟಕರವಾಗಿದೆ. ಜಿಲ್ಲೆಯಲ್ಲಿ ಹೆಚ್ಚಿರುವ ಬುಡಕಟ್ಟು ಸಮುದಾಯದಲ್ಲಿ ನಡೆಯುವ ಇಂತಹ ವಿವಾಹಗಳು ವರದಿಯೇ ಆಗುತ್ತಿಲ್ಲ.

ಈ ನಡುವೆ, ಇತ್ತೀಚಿಗೆ ಬಾಲಕಿಯರಲ್ಲಿ ಅರಿವಿನ ಜ್ಯೋತಿ ಮೂಡಿದೆ. ಬಾಲ ವಿವಾಹಕ್ಕೆ ತಡೆವೊಡ್ಡುತ್ತಿದ್ದಾರೆ. ಜತೆಗೆ, ಬಹಿರಂಗವಾಗಿ ಧ್ವನಿಯೆತ್ತಿದ್ದಾರೆ. ಸಂಬಂಧಪಟ್ಟವರಿಗೆ ದೂರು ಸಹ ನೀಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಹೆಣ್ಣು ಮಕ್ಕಳು ಸ್ಟ್ರಾಂಗ್ ಆಗಿದ್ದಾರೆ. ಹೀಗಾಗಿ, ಪ್ರಸ್ತಕ ಸಾಲಿನಲ್ಲಿ ಜನವರಿಯಿಂದ ಮೇ ವರೆಗೆ ಅಂದಾಜು 120 ದೂರುಗಳು ದಾಖಲಾಗಿವೆ. ಇದರಿಂದ ಬಾಲ್ಯ ವಿವಾಹ ತಡೆಯಲು ಸಾಧ್ಯವಾಗಿದೆ.

2024-25ನೇ ಸಾಲಿನಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 284 ದೂರುಗಳು ಜಿಲ್ಲೆಯಲ್ಲಿ ದಾಖಲಾಗಿವೆ. ಮೈಸೂರು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ದೂರುಗಳು ಸ್ವೀಕೃತವಾಗಿವೆ. ಇಲ್ಲಿ 69 ದೂರುಗಳನ್ನು ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳಲಾಗಿದೆ. ಮೈಸೂರು ನಗರ ಪ್ರದೇಶದಲ್ಲಿ 48 ದೂರುಗಳು ವರದಿಯಾಗಿವೆ. ಹುಣಸೂರು, ಎಚ್.ಡಿ.ಕೋಟೆ ತಾಲೂಕಿನಿಂದಲೂ ಹೆಚ್ಚಿನ ದೂರುಗಳು ಬಂದಿವೆ.

224 ಬಾಲ್ಯ ವಿವಾಹಗಳಿಗೆ ತಡೆ

ದೂರು ಬಂದ ತಕ್ಷಣ ಮಕ್ಕಳ ರಕ್ಷಣಾ ಸಮಿತಿ, ಪೊಲೀಸ್, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳು ಕಾರ್ಯಪ್ರವೃತ್ತವಾಗಿವೆ. ಇದರ ಫಲವಾಗಿ 2024-25ರಲ್ಲಿ ಬರೋಬ್ಬರಿ 224 ಬಾಲ್ಯ ವಿವಾಹವನ್ನು ತಡೆಯಲಾಗಿದೆ.

ಮೈಸೂರು ಗ್ರಾಮಾಂತರ ಪ್ರದೇಶದಲ್ಲೇ 64 ಬಾಲಕಿಯರನ್ನು ಲಗ್ನ ಮಾಡಿ ಸಂಸಾರದ ಸಂಕೋಲೆಗೆ ಸಿಲುಕಿಸುವುದನ್ನು ತಪ್ಪಿಸಲಾಗಿದೆ. ಮೈಸೂರು, ಹುಣಸೂರು ತಾಲೂಕಿನಲ್ಲಿ ಕ್ರಮವಾಗಿ 31, 32 ಬಾಲ್ಯ ವಿವಾಹವನ್ನು ನಿಲ್ಲಿಸಲಾಗಿದೆ. ಅಂತೆಯೇ ಪಿರಿಯಾಪಟ್ಟಣ ತಾಲೂಕಿನಲ್ಲಿ 24, ಕೆ.ಆರ್.ನಗರದಲ್ಲಿ 26, ಎಚ್.ಡಿ.ಕೋಟೆಯಲ್ಲಿ 29, ತಿ.ನರಸೀಪುರದಲ್ಲಿ 16 ಬಾಲಕಿಯರ ಮದುವೆಯನ್ನು ಸ್ಥಗಿತಗೊಳಿಸಲಾಗಿದೆ. ವಿವಾಹ ಬಂಧನದಲ್ಲಿ 60 ಅಪ್ರಾಪ್ತೆಯರು

ಈ ನಡುವೆ, 2024ರಲ್ಲಿ 60 ಬಾಲಕಿಯರ ಬಾಲ್ಯ ವಿವಾಹವಾಗಿ ಹೋಗಿದೆ. ಮೈಸೂರು ನಗರದಲ್ಲೇ ಇದು ಹೆಚ್ಚಿದೆ. ಇಲ್ಲಿ 17 ಬಾಲ್ಯ ವಿವಾಹಗಳಾಗಿವೆ. ನಂಜನಗೂಡು ತಾಲೂಕಿನಲ್ಲಿ 11 ಬಾಲಕಿಯರನ್ನು ಮದುವೆ ಬಂಧನಕ್ಕೆ ನೂಕಲಾಗಿದೆ. ಉಳಿದ ತಾಲೂಕುಗಳಲ್ಲಿ ಎರಡಂಕಿ ದಾಟಿಲ್ಲ. ಕೆ.ಆರ್.ನಗರ ತಾಲೂಕಿನಲ್ಲಿ ಅತಿ ಕಡಿಮೆ ಎಂದರೆ 1 ಪ್ರಕರಣ ದಾಖಲಾಗಿದೆ. ತಪ್ಪಿತಸ್ಥರ ವಿರುದ್ಧ 60 ಕೇಸ್ ದಾಖಲು

ಕಾನೂನು ಉಲ್ಲಂಘಿಸಿ ಬಾಲಕಿಯನ್ನು ವಿವಾಹವಾದ ಯುವಕ, ಅವರ ಪಾಲಕರು, ಮದುವೆ ಮಾಡಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ 60 ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಮೈಸೂರು ನಗರದಲ್ಲಿ 17, ನಂಜನಗೂಡು ತಾಲೂಕಿನಲ್ಲಿ 11 ಎಫ್‌ಐಆರ್ ದಾಖಲಾಗಿದೆ. ಉಳಿದಂತೆ ಮೈಸೂರು ಗ್ರಾಮಾಂತರದಲ್ಲಿ 5, ಹುಣಸೂರಿನಲ್ಲಿ 7, ಪಿರಿಯಾಪಟ್ಟಣದಲ್ಲಿ 7, ಕೆ.ಆರ್.ನಗರದಲ್ಲಿ 1, ಎಚ್.ಡಿ.ಕೋಟೆಯಲ್ಲಿ 9, ತಿ.ನರಸೀಪುರದಲ್ಲಿ 3 ಪ್ರಕರಣಗಳು ದಾಖಲಾಗಿವೆ. ಬಡತನ, ಅನಕ್ಷರತೆ ಕಾರಣ

ಬಾಲ್ಯ ವಿವಾಹ ತಡೆಗಿರುವ ಕಾನೂನಿನ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಹಾಗೂ ಅಪ್ರಾಪ್ತ ವಯಸ್ಸಿನಲ್ಲೇ ತಾಯಿಯಾಗುವುದರಿಂದ ಆಗುವ ಅನಾಹುತದ ಬಗ್ಗೆ ಮಾಹಿತಿ ನೀಡಿದರೂ ಬಾಲ್ಯವಿವಾಹ ಹೆಚ್ಚುತ್ತಿದೆ. ಬಡತನ, ಅನಕ್ಷರತೆ, ತಿಳಿವಳಿಕೆ ಕೊರತೆ, ಪ್ರೇಮವಿವಾಹ, ಹೆಣ್ಣು ಮಕ್ಕಳ ಶಿಕ್ಷಣ ಮೊಟಕುಗೊಳಿಸುವಿಕೆ... ಹೀಗೆ ಅನೇಕ ಕಾರಣಗಳಿಂದ ಬಾಲ್ಯವಿವಾಹಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ವರದಕ್ಷಿಣೆ ದೊಡ್ಡ ಸಮಸ್ಯೆಯಾಗಿದೆ. 21 ವರ್ಷ ಒಳಗಿನ ಹುಡುಗ ಹಾಗೂ 18 ವರ್ಷ ಒಳಗಿನ ಹುಡುಗಿಯರ ನಡುವೆ ಇಲ್ಲವೆ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಯನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ಇದನ್ನು ಆದಷ್ಟು ತಡೆಗಟ್ಟಿ ಬಾಲ್ಯವಿವಾಹ ಸಂಪೂರ್ಣವಾಗಿ ತೊಲಗಿಸಬೇಕಾಗಿದೆ. ಗರ್ಭಿಣಿಯಾಗಿರುವ ಬಾಲಕಿಯರು..!

ಆಟವಾಡುತ್ತಾ ಸಹಪಾಠಿಗಳೊಂದಿಗೆ ಶಾಲಾ- ಕಾಲೇಜುಗಳಲ್ಲಿ ಕಲಿಯುತ್ತಾ ನಲಿಯಬೇಕಿದ್ದ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಗರ್ಭ ಧರಿಸಿ ಮಕ್ಕಳ ಲಾಲನೆ-ಪಾಲನೆ ಮಾಡುವ ಪ್ರಕರಣಗಳೂ ಕಂಡು ಬಂದಿವೆ. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು(ಎಎನ್‌ಎಂ), ಆಶಾ ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಗರ್ಭಿಣಿಯರ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಈ ಸಂದರ್ಭದಲ್ಲಿ ವಯಸ್ಸಿನ ದೃಢೀಕರಣ ಪತ್ರ ಪಡೆಯುವಾಗ 18 ವರ್ಷದೊಳಗಿನ ಹೆಣ್ಣು ಮಕ್ಕಳು ಗರ್ಭಿಣಿಯಾಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಬಾಲಕರ ವಿವಾಹ ಪ್ರಕರಣಗಳಿಲ್ಲ

ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರ ವಿವಾಹವಾಗಿವೆ. ಆದರೆ, ಅಪ್ರಾಪ್ತ ಬಾಲಕರ ವಿವಾಹ ಆಗಿರುವುದು ವರದಿಯಾಗಿಲ್ಲ. 21 ವರ್ಷದೊಳಗಿನ ಬಾಲಕ ಮದುವೆ ಮಾಡಿದರೂ ಅದು ಸಹ ಬಾಲ್ಯ ವಿವಾಹವಾಗುತ್ತದೆ. ಈ ಕುರಿತು ಒಂದೇ ಒಂದು ದೂರು ಬಂದಿಲ್ಲ. ಯಾವುದೇ ಪ್ರಕರಣವೂ ದಾಖಲಾಗಿಲ್ಲ.

ಜಿಲ್ಲೆಯಲ್ಲಿ ಬಹಳಷ್ಟು ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ದೂರುಗಳು ಬರುತ್ತಿವೆ. ತಕ್ಷಣ ತ್ವರಿತವಾಗಿ ಕ್ರಮ ವಹಿಸಲಾಗುತ್ತಿದೆ. ಈ ಸಮಸ್ಯೆ ಕುರಿತು ವ್ಯಾಪಕವಾಗಿ ಅರಿವು ಮೂಡಿಸಲಾಗುತ್ತದೆ. ಆದಾಗ್ಯೂ, ಕೆಲ ಪ್ರಕರಣಗಳು ಬೆಳಕಿಗೆ ಬರಲ್ಲ. ಎನ್.ಟಿ.ಯೋಗೇಶ್ ಜಿಲ್ಲಾಮಕ್ಕಳ ರಕ್ಷಣಾಧಿಕಾರಿ