ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನಲ್ಲಿ ಅನೇಕ ಸರ್ಕಾರಿ ಶಾಲೆಗಳ ಕಟ್ಟಡ ಶಿಥಿಲಗೊಂಡಿದ್ದು, ಇವುಗಳ ಕೆಳಗೆ ಪಾಠ ನಡೆದಿದೆ. ಇದರಿಂದ ವಿದ್ಯಾರ್ಥಿಗಳು ಆತಂಕದಲ್ಲೇ ಕೂರುವಂತಾಗಿದೆ.
ಸುಣ್ಣ ಬಣ್ಣ ಕಾಣದೆ ಮಾಸಿರುವ ಕಟ್ಟಡ, ಬಿರುಕುಬಿಟ್ಟಿರುವ ಗೋಡೆಗಳು, ಕಾಣೆಯಾಗಿರುವ ಹೆಂಚುಗಳು, ಸೋರುವ ಮಾಳಿಗೆ, ಕಿತ್ತು ಹೋಗಿರುವ ಛಾವಣಿ, ಗೋಡೆಯಿಂದ ಉದುರುವ ಗಾರೆ.. ಹೀಗೆ ಹತ್ತಾರು ಅವ್ಯವಸ್ಥೆ ಸರ್ಕಾರಿ ಶಾಲೆಗಳಲ್ಲಿ ಕಣ್ಣಿಗೆ ರಾಚುತ್ತಿವೆ. ಹೀಗೆ ಅವ್ಯವಸ್ಥೆಯಲ್ಲಿರುವ ಶಾಲೆ ಸಮಸ್ಯೆಗಳ ಕೂಪವಾಗಿವೆ. ಇಂತಹ ದುಸ್ಥಿತಿಯಲ್ಲಿ ಮಕ್ಕಳು ಹೇಗೆ ಕಲಿಯಬೇಕು? ಎಂಬುದು ಪಾಲಕರ ಪ್ರಶ್ನೆಯಾಗಿದೆ.
ಖಾಸಗಿ ಶಾಲೆಗಳ ಶುಲ್ಕ ದುಬಾರಿಯಾಗಿರುವುದರಿಂದ ಬೇಸತ್ತಿರುವ ಪಾಲಕರು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಸರ್ಕಾರಿ ಶಾಲೆಗಳು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಕಲಿಕೆಯ ಮೂಲಕ ಮಕ್ಕಳನ್ನು ಸೆಳೆಯುತ್ತಿವೆ.
ಆದರೆ, ಮೂಲ ಸೌಕರ್ಯ ಕೊರತೆ ತೀವ್ರವಾಗಿ ಕಾಡುತ್ತಿದೆ. ಇವುಗಳು ತ್ವರಿತಗತಿಯಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಈ ಈಗಲೂ ಸಾಕಷ್ಟು ಕಡೆಗಳಲ್ಲಿ ಶಿಥಿಲ ಕಟ್ಟಡಗಳು ವಿದ್ಯಾರ್ಥಿಗಳನ್ನು ಸ್ವಾಗತ ಮಾಡುತ್ತಿದ್ದು, ಇವುಗಳ ಸ್ಥಿತಿಗತಿ ಬದಲಾಗುತ್ತಿಲ್ಲ.
ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಹೆಚ್ಚು ಶಾಲೆಗಳ ಕಟ್ಟಡ ಹಾಳಾಗಿದೆ. ಅದರಲ್ಲೂ ಕೆಲ ಶಾಲೆಗಳು ಇನ್ನೂ ಹೆಂಚಿನ ಕಟ್ಟಡದಲ್ಲೇ ನಡೆದಿವೆ. ಮಳೆಗಾಲದಲ್ಲಿ ನೀರು ಸೋರುವುದು ಮಾಮೂಲಿ ಎನಿಸಿದೆ. ಅನೇಕ ಕಟ್ಟಡಗಳಲ್ಲಿ ಛಾವಣಿಯ ಗಾರೆ ಉದುರುತ್ತಿವೆ. ಕೆಲವೆಡೆ ಶಾಲಾ ಕಟ್ಟಡಗಳ ಗೋಡೆಗಳಲ್ಲಿ ಅನೇಕ ಗಿಡಗಳು ಬೆಳೆದು ನಿಂತಿವೆ. ಸುಣ್ಣ-ಬಣ್ಣವಿಲ್ಲದೆ ಸೊರಗಿರುವ ಶಾಲೆಗಳೂ ಸಾಕಷ್ಟು ಸಂಖ್ಯೆಯಲ್ಲಿವೆ.
ಮೈಸೂರು ನಗರದ ಉತ್ತರ ವಲಯದ ಸಾಕಷ್ಟು ಶಾಲೆಗಳ ಕಟ್ಟಡಗಳು ಬಡವಾಗಿವೆ. ಕೆಲವು ಕಡೆಗಳಲ್ಲಿ ಕಟ್ಟಡ ಬಳಸಲು ಯೋಗ್ಯವಾಗಿಲ್ಲ. ಇಂತಹ ಕೃಶವಾಗಿರುವ ಕಟ್ಟಡದಲ್ಲೇ ಪಾಠ ಮಾಡುವುದು ಹೇಗೆ ಎಂದು ಶಿಕ್ಷಕರು ಸಹ ಕೇಳುತ್ತಿದ್ದಾರೆ.
ಜಿಲ್ಲೆಯಲ್ಲಿ 3,446 ಶಾಲೆಗಳಿವೆ. 2,112 ಸರ್ಕಾರಿ, 114 ಸಮಾಜ ಕಲ್ಯಾಣ ಮತ್ತು ಗಿರಿಜನ ಇಲಾಖೆ, 267 ಅನುದಾನಿತ, 927 ಖಾಸಗಿ, 16 ಕೇಂದ್ರ ಸರ್ಕಾರದ ಅಧೀನ ಶಾಲೆಗಳು (ಕೇಂದ್ರೀಯ ವಿದ್ಯಾಲಯ, ನವೋದಯ, ಟಿಬೇಟಿಯನ್ ಶಾಲೆ) ಇವೆ. ಅಂದಾಜು 4.21 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿನ 4,616 ಕೊಠಡಿಗಳ ಪೈಕಿ 1,800 ಕೊಠಡಿಗಳು ಶಿಥಿಲಗೊಂಡಿವೆ. ಇದರಲ್ಲಿ 1,008 ಕೊಠಡಿಗಳು ಸಣ್ಣಪುಟ್ಟ ದುರಸ್ತಿ ಆಗಬೇಕಿದ್ದರೆ, ಇನ್ನೂ 810 ಕೊಠಡಿಗಳು ಪೂರ್ಣ ಪ್ರಮಾಣದಲ್ಲಿ ದುರಸ್ತಿ ಮಾಡಬೇಕಾದ ತುರ್ತು ಅಗತ್ಯ ಇದೆ.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಪ್ರತಿನಿಧಿಸುವ ತಿ.ನರಸೀಪುರ ಮತ್ತು ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲೂಕಿನಲ್ಲೇ ಹೆಚ್ಚು ಕೊಠಡಿಗಳು ದುರಸ್ತಿಗೆ ಕಾಯುತ್ತಿವೆ. ನಂಜನಗೂಡು ತಾಲೂಕಿನಲ್ಲಿ 249 ಹಾಗೂ ತಿ. ನರಸೀಪುರ ತಾಲೂಕಿನಲ್ಲಿ 230 ಕೊಠಡಿಗಳು ಪೂರ್ಣ ಪ್ರಮಾಣದ ದುರಸ್ತಿಯಾಗಬೇಕಿದೆ.
ಎಚ್.ಡಿ.ಕೋಟೆಯಲ್ಲಿ 99 ಕೊಠಡಿಗಳು ಸಣ್ಣ ದುರಸ್ತಿ, 87 ಕೊಠಡಿಗಳು ಪೂರ್ಣ ದುರಸ್ತಿ ಮಾಡಬೇಕಿದೆ. ಹುಣಸೂರು ತಾಲೂಕಿನಲ್ಲಿ 264 ಮತ್ತು 61 ಕೊಠಡಿಗಳು, ಕೆ.ಆರ್. ನಗರದಲ್ಲಿ 34 ಮತ್ತು 56 ಕೊಠಡಿಗಳು ಕ್ರಮವಾಗಿ ಸಣ್ಣ ದುರಸ್ತಿ, ಪೂರ್ಣ ದುರಸ್ತಿಯಾಗಬೇಕಿದೆ.
ಮೈಸೂರು ಉತ್ತರ ವಲಯದಲ್ಲಿ 90 ಮತ್ತು 71, ಮೈಸೂರು ದಕ್ಷಿಣ ವಲಯದಲ್ಲಿ 30 ಮತ್ತು 15, ಮೈಸೂರು ಗ್ರಾಮಾಂತರ ವಲಯದಲ್ಲಿ 277 ಮತ್ತು 28 ಕೊಠಡಿಗಳು ಕ್ರಮವಾಗಿ ಸಣ್ಣ ದುರಸ್ತಿ ಮತ್ತು ಪೂರ್ಣ ಪ್ರಮಾಣದ ದುರಸ್ತಿ ಕೆಲಸವನ್ನು ತ್ವರಿತಗಾಗಿ ಕೈಗೆತ್ತಿಕೊಳ್ಳಬೇಕಿದೆ.
ಕೆಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಹಳೆಯದಾಗಿದೆ. ಹೊಸ ಕೊಠಡಿಗಳ ನಿರ್ಮಾಣದ ಅಗತ್ಯ ಇದೆ. ಶಿಥಿಲಗೊಂಡಿರುವ ಕೊಠಡಿಗಳನ್ನು ಬಂದ್ ಮಾಡಿ ಪರ್ಯಾಯ ಕಟ್ಟಡದಲ್ಲಿ ತರಗತಿ ನಡೆಸಲಾಗುತ್ತಿದೆ. ಹೀಗೆ ಅನೇಕ ಶಾಲೆಗಳ ಕಟ್ಟಡ ಸಡಿಲಗೊಂಡಿವೆ. ಕೆಲ ಕಡೆ ನೆಲಸಮಗೊಳಿಸುವ ಕೆಲಸ ಪ್ರಗತಿಯಲ್ಲಿ ಇದೆ.ಈ ಹಿಂದೆ ನೆಲಸಮಗೊಳಿಸಿದ್ದ ಕಟ್ಟಡದ ಮರು ಕಾಮಗಾರಿ ಆರಂಭವಾಗದ ಕಾರಣ ಮಕ್ಕಳ ಪಾಠಕ್ಕೆ ತೊಂದರೆಯಾಗಿದೆ.
ಶಾಲೆ ಕೊಠಡಿಗಳ ತುರ್ತು ದುರಸ್ತಿಗೆ 53 ಕೋಟಿ ರೂ. ಹಾಗೂ 302 ಹೊಸ ಕೊಠಡಿಗಳ ನಿರ್ಮಾಣಕ್ಕೆ 43 ಕೋಟಿ ರೂ. ಅನುದಾನವನ್ನು ಶಿಕ್ಷಣ ಇಲಾಖೆಯು ಕೇಳಿತ್ತು. ಆದರೆ, ರಾಜ್ಯ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಬಂದಿಲ್ಲ. ದುರಸ್ತಿ ಕಾಮಗಾರಿಗೆ ಬಿಡುಗಡೆಯಾಗಿರುವ 2 ಕೋಟಿ ರೂ. ಯಾವುದಕ್ಕೂ ಸಾಲುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಎನ್‌ಡಿಆರ್‌ಎಫ್, ಎಂ-ನರೇಗಾ ಯೋಜನೆ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ ವಿವಿಧ ಅನುದಾನಗಳು ವಿವಿಧ ಕಂಪನಿಗಳ ಸಿಎಸ್‌ಆರ್ ಅನುದಾನಗಳನ್ನು ಬಳಸಿಕೊಂಡು ಸರ್ಕಾರಿ ಶಾಲೆ ಕಟ್ಟಡಗಳ ದುರಸ್ತಿ ಮಾಡುವ ಪ್ರಯತ್ನ ನಡೆದಿದೆ. ಆದಾಗ್ಯೂ, ಇದು ಸಾಕಾಗುತ್ತಿಲ್ಲ ಎಂದೂ ಹೇಳಿದರು.
ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. 302 ಹೊಸ ಕೊಠಡಿಗಳ ನಿರ್ಮಾಣ ಆಗಬೇಕಿದೆ. ಆದರೀಗ ಎನ್‌ಡಿಆರ್‌ಎಫ್ ಅಡಿ 38 ಶಾಲೆಗಳ ಕೊಠಡಿ ದುರಸ್ತಿ ಸೇರಿದಂತೆ 200ಕ್ಕೂ ಹೆಚ್ಚು ಶಾಲೆಗಳ ಕೊಠಡಿಗಳ ದುರಸ್ತಿಗೆ ಸರ್ಕಾರದಿಂದ ಅನುದಾನ ದೊರೆಯುವ ನಿರೀಕ್ಷೆ ಇದೆ. ಆದ್ಯತೆ ಮೇರೆಗೆ ಕಾಮಗಾರಿ ತೆಗೆದುಕೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.
ಶಾಲಾ ಕೊಠಡಿಗಳಿಗೆ ರಾಜ್ಯ ಸರ್ಕಾರದಿಂದ 2 ಕೋಟಿ ರೂ. ಅನುದಾನ ಬಂದಿದೆ. ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದುಎಸ್.ಟಿ.ಜವರೇಗೌಡಉಪ ನಿರ್ದೇಶಕಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ