ಮೈಸೂರು: ಪ್ರಸ್ತಕ ಸಾಲಿನ ಮುಂಗಾರು ರಾಜ್ಯವನ್ನು ಪ್ರವೇಶಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಸೋಮವಾರವೂ ಉತ್ತಮ ವರ್ಷಧಾರೆಯಾಗಿದೆ.
ಕಳೆದ ನಾಲ್ಕೈದು ದಿನಗಳಿಂದಲೂ ಸುರಿಯುತ್ತಿರುವ ಮಳೆ ಆರ್ಭಟ ಸೋಮವಾರ ಸಹ ಮುಂದುವರಿಯಿತು. ಮೋಡ ಮುಸುಕಿದ ವಾತಾವರಣದಿಂದ ಪದೇ ಪದೆ ಮಳೆಯ ಸುರಿಯುತ್ತಿದ್ದರಿಂದ ಮಲೆನಾಡಿನ ತಂಪಿನ ಅನುಭವ ಎಲ್ಲೆಡೆ ಕಂಡುಬಂತು.
ಕೆಲ ದಿನಗಳಿಂದ ಪೂರ್ವ ಮುಂಗಾರಿನಿಂದ ಬಿಸಿಲಿನ ಧಗೆ ಕಡಿಮೆಯಾಗಿದೆ. ಇದೀಗ ಶುರುವಾಗಿರುವ ಮುಂಗಾರು ಸಮೃದ್ಧವಾಗಿ ಸುರಿಯುವ ಮುನ್ಸೂಚನೆ ನೀಡಿದ್ದು, ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 41.05 ಮಿಲಿ ಮೀಟರ್‌ನಷ್ಟು ಮಳೆ ಬಿದ್ದಿದೆ. ಇದು ವಾಡಿಕೆಗಿಂತ ಶೇ.802ಕ್ಕಿಂತ ಹೆಚ್ಚಾಗಿದೆ. ಅಲ್ಲದೆ ಕಳೆದ ಮೇ 20ರಿಂದ 26ರ ವರೆಗೆ 23.6 ಮಿ.ಮೀ ವಾಡಿಕೆಯಷ್ಟು ಮಳೆಯಾಗಬೇಕಿತ್ತು. ಆದರೆ 37.06 ಮಿ.ಮೀ. ಆಗಿದೆ. ಇದು ಶೇ.81ರಷ್ಟು ಅಧಿಕರವಾಗಿದೆ.
ಮೇ 1ರಿಂದ 26ರ ವರೆಗೆ 135.09 ಮಿ.ಮೀಟರ್‌ನಷ್ಟು ಮಳೆ ದಾಖಲಾಗಿದೆ. ಪೂರ್ವಮುಂಗಾರಿನ ಅವಧಿಯಾದ ಮಾ.1ರಿಂದ ಮೇ 26ರ ವರೆಗೆ 228.3 ಮಿ.ಮೀಟರ್‌ನಷ್ಟು ಮಳೆ ವರದಿಯಾಗಿದೆ. ಇದು ವಾಡಿಕೆಗಿಂತ ಶೇ.27ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಸಾಮಾನ್ಯವಾಗಿ 180 ಮಿ.ಮೀಟರ್ ಮಳೆಯಾಗುತ್ತಿತ್ತು.
ಕಳೆದ 24 ಗಂಟೆಯಲ್ಲಿ ಎಚ್.ಡಿ.ತಾಲೂಕಿನಲ್ಲಿ ಜಿಲ್ಲೆಯಲ್ಲೇ ಅಧಿಕ ಮಳೆ ದಾಖಲಾಗಿದೆ. 61.3 ಮಿ.ಮೀಟರ್ ಬಿದ್ದಿದೆ. ಸರಗೂರು ತಾಲೂಕಿನಲ್ಲಿ ಶೇ.59.05 ಮಿ.ಮೀಟರ್ ಮಳೆ ಸುರಿದಿದೆ. ಉಳಿದ ಹುಣಸೂರಿನಲ್ಲಿ ಶೇ.41.09 ಮಿ.ಮೀ., ಕೆ.ಆರ್.ನಗರದಲ್ಲಿ 21.09 ಮಿ.ಮೀ., ಮೈಸೂರಿನಲ್ಲಿ 28.06 ಮಿ.ಮೀ., ನಂಜನಗೂಡಿನಲ್ಲಿ 35.6 ಮಿ.ಮೀ., ಪಿರಿಯಾಪಟ್ಟಣದಲ್ಲಿ 51.02 ಮಿ.ಮೀ., ತಿ. ನರಸೀಪುರದಲ್ಲಿ 17 ಮಿ.ಮೀ., ಸಾಲಿಗ್ರಾಮದಲ್ಲಿ 33.8 ಮಿ.ಮೀ. ಮಳೆ ದಾಖಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಮೇ 20ರಿಂದ 26ರ ವರೆಗೆ ಸರಗೂರಿನಲ್ಲಿ ವಾಡಿಕೆಗಿಂತ ಶೇ. 259 ಮಿ.ಮೀ., ಎಚ್.ಡಿ.ಕೋಟೆಯಲ್ಲಿ ಶೇ.241 ಮಿ.ಮೀ., ಪಿರಿಯಾಪಟ್ಟಣದಲ್ಲಿ ಶೇ.196ರಷ್ಟು ಮಳೆ ಬಿದ್ದಿದೆ. ಈ ಅವಧಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ವಾಡಿಕೆಗಿಂತ ಉತ್ತಮ ವರ್ಷಧಾರೆಯಾಗಿದೆ. ಆದರೆ ತಿ.ನರಸೀಪುರದಲ್ಲಿ ಮಾತ್ರ ಶೇ.4ರಷ್ಟು ಕಡಿಮೆ ಮಳೆಯಾಗಿದೆ.
ಉತ್ತಮ ಮಳೆಯಿಂದಾಗಿ ಜಿಲ್ಲೆಯ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಕೇರಳ ಜಿಲ್ಲೆಯ ವಯನಾಡು ಜಿಲ್ಲೆಯಲ್ಲಿ ಅಧಿಕ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ 13,037 ಕ್ಯೂಸೆಕ್‌ನಷ್ಟು ಒಳಹರಿವು ಇದೆ. 2,284 ಅಡಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯದ ಕಬಿನಿಯಲ್ಲಿ ಕೇವಲ 4 ದಿನದಲ್ಲಿ ಮೂರು ಅಡಿಯಷ್ಟು ನೀರು ಹೆಚ್ಚಾಗಿದೆ. ಇದರಿಂದ ಸೋಮವಾರದ ನೀರಿನ 2,263.52 ಅಡಿಯಷ್ಟಾಗಿದೆ.
ಕಳೆದ 10 ದಿನಗಳ ಹಿಂದೆ ಒಳ ಹರಿವಿನ ಪ್ರಮಾಣ ನೂರು ಕ್ಯೂಸೆಕ್ ಸಹ ದಾಟಿರಲಿಲ್ಲ. ಆದರೀಗ ಒಂದೇ ಸಲಕ್ಕೆ ಹತ್ತು ಸಾವಿರ ಕ್ಯೂಸೆಕ್ ಗಡಿ ತಲುಪಿದೆ. ಶೀಘ್ರದಲ್ಲೇ ಕಬಿನಿ ಜಲಾಶಯ ಭರ್ತಿಯಾಗುವ ಮುನ್ಸೂಚನೆ ನೀಡಿದೆ.
ನುಗು ಜಲಾಶಯದಲ್ಲಿ 954 ಕ್ಯೂಸೆಕ್ ಒಳಹರಿವು ಇದೆ. 2,380 ಗರಿಷ್ಠ ನೀರಿನ ಸಂಗ್ರಹ ಇರುವ ನುಗು ಡ್ಯಾಂನಲ್ಲಿ ಪ್ರಸ್ತುತ ನೀರಿನ ಮಟ್ಟ 2,353 ಅಡಿಯಷ್ಟಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ಪ್ರಮುಖ ಜಲಾಶಯಗಳಾದ ಶ್ರೀರಂಗಪಟ್ಟಣದ ಕೆಆರ್‌ಎಸ್‌ಗೆ 2,053 ಕ್ಯೂ, ಕೊಡಗು ಜಿಲ್ಲೆಯ ಹಾರಂಗಿ ಡ್ಯಾಂಗೆ 1,693 ಕ್ಯೂ. ನೀರು ಹರಿದು ಬರುತ್ತಿದೆ. ಮುಂಗಾರು ಆರಂಭದಲ್ಲಿ ಎಲ್ಲ ಜಲಾಶಯಗಳ ಒಳಹರಿವು ವೃದ್ಧಿಯಾಗಿರುವುದು ಶುಭಸೂಚಕವಾಗಿದೆ.
ಮುಂಗಾರು ಆರಂಭವಾಗುವುದರೊಂದಿಗೆ ಮೇ 28 ರವರೆಗೆ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರದವರೆಗೆ ಗಾಳಿಯ ವೇಗ ಗಂಟೆಗೆ 60 ಕಿ.ಮೀ. ಇರಲಿದೆ. ಜಿಲ್ಲೆಯಲ್ಲೂ ಭಾರಿ ಮಳೆಯಾಗುವ ನಿರೀಕ್ಷೆ ಇದೆ.