ಜಿಲ್ಲೆ

ಮೈಸೂರು ಜಿಲ್ಲೆಯಲ್ಲಿ 9 ಲಕ್ಷ ಮನೆ ಬೆಳಗಿದ ಗೃಹಜ್ಯೋತಿ

ಮಂಜುನಾಥ ತಿಮ್ಮಯ್ಯ ಮೈಸೂರು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಯಿಂದ ಜಿಲ್ಲೆಯ 9 ಲಕ್ಷ ಮನೆಗಳು ಬೆಳಗುತ್ತಿವೆ. ಇದರಿಂದ ಫಲಾನುಭವಿಗಳು ಹಸನ್ಮುಖಿಯಾದರೆ, ಸೆಸ್ಕ್ ಮೇಲೆ ಆರ್ಥಿಕ ಹೊರೆ ಬಿದ್ದಿದೆ.

ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಲಾಭವನ್ನು ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಪಡೆದುಕೊಳ್ಳಲಾಗುತ್ತಿದೆ. ಶೇ.99ಕ್ಕಿಂತ ಹೆಚ್ಚಿನ ಗ್ರಾಹಕರು ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಕಡಿಮೆ ಸಂಖ್ಯೆಯ ಗ್ರಾಹಕರು ನೋಂದಣಿಯಾಗಲು ಬಾಕಿ ಇದ್ದಾರೆ. ಬಡವರೊಂದಿಗೆ ಮಧ್ಯಮ ವರ್ಗದವರು, ಸಿರಿವಂತರು ಸಹ ಯೋಜನೆಯಡಿ ಉಚಿತವಾಗಿ ಕರೆಂಟ್ ಪಡೆದುಕೊಳ್ಳುತ್ತಿದ್ದಾರೆ.

ಶೂನ್ಯ ಬಿಲ್‌ನಿಂದ ದುಡ್ಡು ಉಳಿತಾಯ

ಈ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ದೊರೆಯುತ್ತದೆ. ಇದರಿಂದ ಯೋಜನೆಗಿಂತ ಮೊದಲು 400ರಿಂದ 700 ರೂ. ವಿದ್ಯುತ್ ಬಿಲ್ ಬರುತ್ತಿದ್ದ ಮನೆಗೆ ಇದೀಗ ಬಹುತೇಕ ಶೂನ್ಯ ಬಿಲ್ ಬರುತ್ತಿದೆ. ಒಂದು ಕುಟುಂಬ ಕಡಿಮೆ ಎಂದರೂ 500-600 ರೂ. ದುಡ್ಡು ಉಳಿತಾಯವಾಗುತ್ತಿದೆ. ಹೀಗಾಗಿಯೇ ಫಲಾನುಭವಿಗಳು ಸಂತಸಗೊಂಡಿದ್ದಾರೆ.

5,486 ಗ್ರಾಹಕರ ನೋಂದಣಿ ಬಾಕಿ:

ಗೃಹ ಜ್ಯೋತಿ ಯೋಜನೆಯಲ್ಲಿ ಜಿಲ್ಲೆ ಶೇ.99.41ರಷ್ಟು ಗುರಿ ಸಾಧನೆ ಮಾಡಿದೆ. 9,24,115 ಗ್ರಾಹಕರು ಈ ಯೋಜನೆಗೆ ಅರ್ಹರು. ಈ ಪೈಕಿ 9,18,629 ನೋಂದಣಿಯಾಗಿದ್ದಾರೆ. ಇದರಲ್ಲಿ 5,486 ಗ್ರಾಹಕರು ನೋಂದಣಿಯಾಗಿಲ್ಲ. ಇವರ ಪ್ರಮಾಣ ಶೇ.0.59ರಷ್ಟಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ಶೇ.97, ಸಾಲಿಗ್ರಾಮ ತಾಲೂಕಿನಲ್ಲಿ ಶೇ.98ರಷ್ಟು ಪ್ರಗತಿಯಾಗಿದೆ. ಉಳಿದ ತಾಲೂಕಿನಲ್ಲಿ ಶೇ.99ರಷ್ಟು ಗ್ರಾಹಕರು ಈ ಯೋಜನೆಯಡಿ ಲಾಭ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ಗ್ರಾಹಕರು ಮಾಸಿಕ ಬಳಕೆ ಸರಾಸರಿ 46 ಯೂನಿಟ್‌ನಷ್ಟು ಇದೆ.

ಸಾಲಿಗ್ರಾಮದಲ್ಲಿ ಕಡಿಮೆ ಫಲಾನುಭವಿಗಳು:

ಜಿಲ್ಲೆಯಲ್ಲಿ ಮೈಸೂರು ತಾಲೂಕಿನಲ್ಲಿ ಹೆಚ್ಚಿನ ಫಲಾನುಭವಿಗಳಿದ್ದಾರೆ. ಸಾಲಿಗ್ರಾಮ ತಾಲೂಕಿನಲ್ಲಿ ಕಡಿಮೆ ಫಲಾನುಭವಿಗಳಿದ್ದಾರೆ. ಮೈಸೂರು ತಾಲೂಕಿನಲ್ಲೇ ನಾಲ್ಕೂವರೆ ಲಕ್ಷ ಗೃಹಜ್ಯೋತಿಯ ಗ್ರಾಹಕರು ಇರುವುದು ವಿಶೇಷ. ನಂತರದ ಸ್ಥಾನದಲ್ಲಿರುವ ನಂಜನಗೂಡು ತಾಲೂಕಿನಲ್ಲಿ 1.04 ಲಕ್ಷ ಗ್ರಾಹಕರಿದ್ದಾರೆ. ಉಳಿದ ತಾಲೂಕಿನಲ್ಲಿ 75 ಸಾವಿರಕ್ಕಿಂತ ಕಡಿಮೆ ಫಲಾನುಭವಿಗಳಿದ್ದಾರೆ. ಕೊನೆ ಸ್ಥಾನದಲ್ಲಿರುವ ಸಾಲಿಗ್ರಾಮದಲ್ಲಿ ಬರೀ 27,245 ಫಲಾಭವಿಗಳಿದ್ದಾರೆ ಎಂದು ಅಂಕಿ-ಅಂಶ ತಿಳಿಸಿದೆ.

468 ಕೋಟಿ ರೂ. ವಿದ್ಯುತ್ ವೆಚ್ಚ:

ಗೃಹಜ್ಯೋತಿ ಯೋಜನೆಯು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ಪಾಲಿಗೆ ನಿಜಕ್ಕೂ ಬಿಸಿ ತುಪ್ಪವಾಗಿದೆ. ದೊಡ್ಡ ಆರ್ಥಿಕ ಹೊರೆಯಾಗಿದೆ. ಆಗಸ್ಟ್ ಅಂತ್ಯಕ್ಕೆ 468.84 ಕೋಟಿ ರೂ. ವಿದ್ಯುತ್ ವೆಚ್ಚವಾಗಿದೆ. ಪ್ರತಿ ತಿಂಗಳು 36 ಕೋಟಿ ರೂ. ವ್ಯಯಿಸಲಾಗುತ್ತಿದೆ. ಇಷ್ಟು ದೊಡ್ಡ ಮೊತ್ತವನ್ನು ರಾಜ್ಯ ಸರ್ಕಾರವು ಸಹಾಯಧನದ ರೂಪದಲ್ಲಿ ಸೆಸ್ಕ್‌ಗೆ ಪಾವತಿಸಿದೆ.

ಮನೆಗೆ ಶಿಫ್ಟ್ ಆದರೂ ಸೌಲಭ್ಯ ಮುಂದುವರಿಕೆ:

ಮನೆ ಬದಲಾಯಿಸಿದ ನಂತರ ಗೃಹಜ್ಯೋತಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಮನೆಯಿಂದ ಇನ್ನೊಂದು ಮನೆಗೆ ಶಿಫ್ಟ್ ಆದ ನಂತರ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಹಳೆಯ ಮನೆಯ ಆರ್.ಆರ್. ಸಂಖ್ಯೆಯನ್ನು ಡಿ-ಲಿಂಕ್ ಮಾಡುವ ಸೌಲಭ್ಯ ಇದೀಗ ಜನರಿಗೆ ಲಭ್ಯವಿದೆ.

ಮನೆ ಬದಲಿಸುವ ಸಂದರ್ಭಲ್ಲಿ ಆಧಾರ್ ನಂಬರ್ ಜತೆ ಲಿಂಕ್ ಆಗಿರುವ ಆರ್.ಆರ್. ನಂಬರ್ ವಿವರ ಪರಿಶೀಲಿಸಿ ಡಿ-ಲಿಂಕ್ ಮಾಡಬಹುದು. ಹೊಸ ಮನೆಗೆ ಗೃಹಜ್ಯೋತಿ ಲಾಭ ಪಡೆಯಲು ಸದ್ಯ ಯಾವುದೇ ಆಧಾರ್ ಜತೆ ಲಿಂಕ್ ಆಗಿರದ ಆರ್ .ಆರ್. ನಂಬರ್‌ಗೆ ಲಿಂಕ್ ಮಾಡಬಹುದು. ಅಂದರೆ, ಈ ಹಿಂದೆ ಮನೆಯಲ್ಲಿ ವಾಸವಿದ್ದರೂ ಡಿ-ಲಿಂಕ್ ಮಾಡಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.