ಜಿಲ್ಲೆ

ಮೈಸೂರು ಚಲೋ ಸಂಭ್ರಮಾಚರಣೆ

ಮೈಸೂರು: ಜಿಲ್ಲೆ ಹಾಗೂ ನಗರ ಸ್ವಾತಂತ್ರ್ಯ ಹೋರಾಟಗಾರ ಸಂಘದ ವತಿಯಿಂದ ಮೈಸೂರು ಚಲೋ ಸಂಭ್ರಮಾಚರಣೆ ನಗರದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಗುರುವಾರ ನಡೆಯಿತು.

ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ರಾಷ್ಟ್ರ ಧ್ವಜಾರೋಹಣ ನಡೆಸಲಾಯಿತು. ಜತೆಗೆ, ರಾಮಸ್ವಾಮಿ ವೃತ್ತದಲ್ಲಿರುವ ಚಳವಳಿಯಲ್ಲಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರ ರಾಮಸ್ವಾಮಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೈ.ಸಿ.ರೇವಣ್ಣ ಮಾತನಾಡಿ, 1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ಬಂದರೂ ಮೈಸೂರಿನಲ್ಲಿ ರಾಜಮನೆತನದ ಆಡಳಿತವಿತ್ತು. ಆ ಬಳಿಕ ಹಳೇ ಮೈಸೂರು ರಾಜ್ಯದಲ್ಲೂ ಪ್ರಜಾಪ್ರಭುತ್ವ ಆಡಳಿತ ಜಾರಿಗೆ ತರಬೇಕೆಂದು ತೀವ್ರ ಹೋರಾಟ ನಡೆಯಿತು.

ಈ ಹಿನ್ನೆಲೆಯಲ್ಲಿ ಹಳೇ ಮೈಸೂರು ಪ್ರಾಂತ್ಯದಲ್ಲಿ ರಾಜರ ಆಳ್ವಿಕೆ ಕೊನೆಗೊಳಿಸಿ ತ್ರಿವರ್ಣ ಧ್ವಜ ಹಾರಿಸಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಇದಕ್ಕಾಗಿ ಸೆ.1ರಿಂದ ಅ.14ರವರೆಗೆ ಮೈಸೂರು ಚಲೋ ಚಳವಳಿ ನಡೆದದ್ದು ಈಗ ಇತಿಹಾಸ. ರಾಜಾಳ್ವಿಕೆ ಕೊನೆಯಾಗಿ ಜನಪರ ಸರ್ಕಾರ ರಚನೆಯಾದದ್ದು 1947ರ ಅ.24ರಂದು. ಹೀಗಾಗಿ, ಆ ದಿನವನ್ನು ಮೈಸೂರು ಚಲೋ ದಿನ ಎಂದು ಆಚರಿಸಲಾಗುತ್ತದೆ ಎಂದು ಹೇಳಿದರು.

ಸಂಘದ ಕಾರ್ಯದರ್ಶಿ ಡಿ.ರವಿ, ಕಾರ್ಯಾಧ್ಯಕ್ಷ ಯೋಗಾನಂದ, ಮುಖಂಡರಾದ ವೇದಂಬ, ನಾಗರತ್ನ, ಗಿರಿಜಾ, ಅಶ್ವತ್ಥನಾರಾಯಣ್, ಭಾಗ್ಯಲಕ್ಷ್ಮೀ, ಕಮಲಮ್ಮ, ವಿಘ್ನೇಶ್ವರ ಭಟ್, ನಾಗೇಶ್ ಯಾದವ್, ಪಾಪಣ್ಣ, ಚರಣ್, ಸುಕನ್ಯಾ, ಗೀತಾ, ಮಧು, ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್, ಬಿಜೆಪಿಯ ಜೋಗಿ ಮಂಜು ಇದ್ದರು.