ರಾಮನಗರ: ಮುಡಾ ಹಗರಣ ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷಗಳು ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಎರಡನೇ ದಿನ ಯಶಸ್ವಿಯಾಗಿ ಪೂರ್ಣಗೊಂಡಿತು.
ಬಿಡದಿಯ ಮಂಜುನಾಥ ಕನ್ವೆಷನ್ ಹಾಲ್‌ನಲ್ಲಿ ಶನಿವಾರ ರಾತ್ರಿ ವಾಸ್ತವ್ಯ ಹೂಡಿದ್ದ ನಾಯಕರು, ಎರಡನೇ ದಿನವೂ ಹುಮ್ಮಸ್ಸಿನಿಂದ 22 ಕಿ.ಮೀ. ಹೆಜ್ಜೆ ಹಾಕುವ ಮೂಲಕ ಕಾರ್ಯಕರ್ತರಿಗೆ ಜೋಷ್ ತುಂಬಿದರು. ರಾತ್ರಿ 8.30ರ ವೇಳೆಗೆ ಕೆಂಗಲ್‌ನಲ್ಲಿ 2ನೇ ದಿನದ ಯಾತ್ರೆ ಕೊನೆಗೊಂಡಿತು.
ಬಿಡದಿ ಪಟ್ಟಣದಲ್ಲಿ ಭಾನುವಾರ ಬೆಳಗ್ಗೆ ಸುಮಾರು 10 ಗಂಟೆಗೆ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಬಿಡದಿ ಪಟ್ಟಣದಲ್ಲಿ ಕೇಂದ್ರ ಸಚಿವ ಕುವಾರಸ್ವಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಆದಿಯಾಗಿ ರಾಜ್ಯ ನಾಯಕರು ತೆರೆದ ವಾಹನದಲ್ಲಿ ಕಾರ್ಯಕರ್ತರನ್ನು ಉದ್ದೇಶಿ ವಾತನಾಡಿ ಪಾದಯಾತ್ರೆಗೆ ಚಾಲನೆ ನೀಡಿದರು.
ಸೇಬಿನ ಹಾರದ ಸ್ವಾಗತ: ಇನ್ನು ಬಿಡದಿಯಿಂದ ಹೊರಟ ಪಾದಯಾತ್ರೆ ರಾಮನಗರಕ್ಕೆ ತಲುವಷ್ಟರಲ್ಲಿ ಸಂಜೆ 5 ಗಂಟೆ ಆಗಿತ್ತು. ರೇಷ್ಮೆ ನಗರಿಗೆ ಆಗಮಿಸುತ್ತಿದ್ದಂತೆ ಬೃಹತ್ ಸೇಬಿನ ಹಾರದ ಮೂಲಕ ಪದಾಯಾತ್ರೆಯ ಮುಂದಾಳತ್ವ ವಹಿಸಿದ್ದ ನಿಖಿಲ್ ಮತ್ತು ವಿಜಯೇಂದ್ರವನ್ನು ಸ್ವಾಗತಿಸಲಾಯಿತು. ಈ ವೇಳೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಜಯಕಾರಗಳನ್ನು ಹಾಕುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಹೂವಿನ ಮಳೆ, ಸೆಲ್ಫಿ ಬ್ರೇಕ್: ಬಿಡದಿಯಿಂದ ರಾಮನಗರಕ್ಕೆ ಬರುವ ದಾರಿ ಉದ್ದಕ್ಕೂ ಸಾವಿರಾರು ಮಂದಿ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಈ ವೇಳೆ ಕೆಲವು ಗ್ರಾಮಗಳ ಬಳಿ ಹೂವಿನ ವೃಷ್ಠಿ ಸುರಿಸುವ ಮೂಲಕ ತಮ್ಮ ನೆಚ್ಚಿನ ನಾಯಕರನ್ನು ಕಾರ್ಯಕರ್ತರು ಸ್ವಾಗತಿಸಿದರು. ರಾಮನಗರ ಪ್ರವೇಶಿಸುತ್ತಿದ್ದಂತೆ ಅಭಯ ಆಂಜನೇಯನ ಬೃಹತ್ ಮೂರ್ತಿಗೆ ಕ್ರೇನ್ ಮೂಲಕ ವಿಜಯೇಂದ್ರ ಮತ್ತು ನಿಖಿಲ್ ಮಾಲಾರ್ಪಣೆ ಮಾಡಿದರು. ನಂತರ ಇವರಿಗೆ ದಾರಿ ಉದ್ದಕ್ಕೂ ಹೂವಿನ ಮಳೆ ಸುರಿಸಿ ಕಾರ್ಯಕರ್ತರು ಸ್ವಾಗತಿಸುವ ಜೊತೆಗೆ, ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಿದದ್ದು ಕಂಡು ಬಂತು.