ಜಿಲ್ಲೆ

ಮೈಸೂರು ಚಲೋ ಪಾದಯಾತ್ರೆ ಹಾಸನದಿಂದ ಬಿಜೆಪಿ ಕಾರ್ಯಕರ್ತರು ಪ್ರಯಾಣ

ಹಾಸನ: ಮುಡಾ ಹಗರಣ ಖಂಡಿಸಿ ಬಿಜೆಪಿ-ಜೆಡಿಎಸ್ ನೇತೃತ್ವದಲ್ಲಿ ನಡೆಯುತ್ತಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿ ಭಾಗವಹಿಸಲು ಬುಧವಾರ ಹಾಸನದಿಂದ ಬಿಜೆಪಿ ಕಾರ್ಯಕರ್ತರು ಪ್ರಯಾಣ ಬೆಳೆಸಿದರು.
ಬೆಂಗಳೂರಿನಿಂದ ಆರಂಭವಾಗಿರುವ ಪಾದಯಾತ್ರೆ ಮಂಡ್ಯದಲ್ಲಿ ಸಮಾವೇಶಗೊಂಡಿತು. ಆ. 10ಕ್ಕೆ ಮೈಸೂರು ತಲುಪಿ ಯಾತ್ರೆ ಅಂತ್ಯವಾಗಲಿದೆ. ಹಾಸನದಿಂದ ಒಂಬತ್ತು ಬಸ್‌ಗಳಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ತೆರಳಿದರು.
ಬಿಜೆಪಿ ನಗರಾಧ್ಯಕ್ಷ ಮಂಜು ಅವರು ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಸದಾ ಕಿಡಿಕಾರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅವ್ಯಾಹತ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ತಮ ಪ್ರಭಾವ ಬಳಸಿ 14 ನಿವೇಶನಗಳನ್ನು ಕುಟುಂಬದವರ ಹೆಸರಿಗೆ ಖಾತೆ ಮಾಡಿಸಿಕೊಂಡಿರುವ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಅನರ್ಹರು. ರಾಜ್ಯದ ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಭ್ರಷ್ಟಾಚಾರದಿಂದ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಹೆಸರು ಹಾಳು ಮಾಡಿರುವ ಸಿದ್ದರಾಮಯ್ಯ ಕೂಡಲೇ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್.ನಾರಾಯಣಗೌಡ ಅವರು ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಅನುದಾನವನ್ನು ಲೋಕಸಭೆ ಚುನಾವಣೆಗೆ ಬಳಸಿಕೊಂಡಿರುವ ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರಿಯಲು ಅನರ್ಹ. ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡ ವರ್ಗಕ್ಕೆ ಮೀಸಲಿಟ್ಟಿದ್ದ 25 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ ತುಳಿತಕ್ಕೊಳಗಾದ ಸಮಾಜಕ್ಕೆ ಅನ್ಯಾಯ ಮಾಡಿದೆ. ಈ ಸರ್ಕಾರ ತೊಲಗಬೇಕೆಂದು ಆಗ್ರಹಿಸಿದರು.
ರೈತ ಮೋರ್ಚಾದ ಉಪಾಧ್ಯಕ್ಷ ಮಹೇಶ್, ಬಿಜೆಪಿ ಮುಖಂಡರಾದ ಪ್ರೀತಿವರ್ಧನ್, ಹನಮಂತಪುರ ಪ್ರೇಮಕುಮಾರ್ ಇತರರಿದ್ದರು.