ಮೈಸೂರು: ಮೈಸೂರು ಚಲೋ ಚಳವಳಿಯ ಅಮೃತ ಮಹೋತ್ಸವದ ಅಂಗವಾಗಿ ನಗರದಲ್ಲಿ ಸ್ವಾತಂತ್ರೃ ಹೋರಾಟಗಾರರಿಂದ ಸೋಮವಾರ ಮೆರವಣಿಗೆ ನಡೆಯಿತು.
ಮೈಸೂರು ನಗರ ಹಾಗೂ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಆಶ್ರಯದಲ್ಲಿ ನಾರಾಯಣಶಾಸ್ತ್ರಿ ರಸ್ತೆಯ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಿಂದ ಕುದುರೆ ಸಾರೋಟುಗಳಲ್ಲಿ ಸ್ವಾತಂತ್ರೃ ಹೋರಾಟಗಾರರನ್ನು ಕೂರಿಸಿ ರಾಮಸ್ವಾಮಿ ವೃತ್ತ, ಜೆಎಲ್‌ಬಿ ರಸ್ತೆ, ಸೀತಾವಿಲಾಸ ರಸ್ತೆ, ಜಗನ್ಮೋಹನ ಅರಮನೆ, ನಾರಾಯಣಶಾಸ್ತ್ರಿ ರಸ್ತೆ ಮೂಲಕ ಮರಳಿ ಸ್ವಾತಂತ್ರೃ ಹೋರಾಟಗಾರರ ಉದ್ಯಾನ ತಲುಪಿತು. ರಾಮಸ್ವಾಮಿ ವೃತ್ತದಲ್ಲಿ ರಾಮಸ್ವಾಮಿ ನೆನಪಿಗಾಗಿ ಪ್ರತಿಷ್ಠಾಪಿಸಿರುವ ವೀರಗಲ್ಲಿಗೆ ಮಾಲಾರ್ಪಣೆ ಮಾಡಲಾಯಿತು.
ಹಾರ್ಡ್ವಿಕ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಹುತಾತ್ಮ ರಾಮಸ್ವಾಮಿ ಭಾವಚಿತ್ರ ಹಿಡಿದು, ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆ ಸಾಗುವ ಮಾರ್ಗದಲ್ಲಿ ರಾಮಸ್ವಾಮಿ ಪರ ಘೋಷಣೆಗಳು ಮೊಳಗಿದವು. ಅಲ್ಲದೆ, ವಿದ್ಯಾರ್ಥಿಗಳು ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ಮತ್ತು ಅಂದಿನ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ವೇಷ ಧರಿಸಿ ಗಮನ ಸೆಳೆದರು.
ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಆರಂಭಕ್ಕೂ ಮುನ್ನ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ವೈ.ಸಿ.ರೇವಣ್ಣ ಅವರು ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಸುಬ್ಬರಾಯನಕೆರೆಯಲ್ಲಿರುವ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ದೇಶಕ್ಕೆ ಆಗಸ್ಟ್‌ನಲ್ಲಿಯೇ ಸ್ವಾತಂತ್ರೃ ಬಂದರೂ ಮೈಸೂರು ಪ್ರಾಂತ್ಯವನ್ನು ಒಕ್ಕೂಟದಲ್ಲಿ ಸೇರ್ಪಡೆಗೊಳಿಸಲು ಅಂದಿನ ರಾಜರು ಮುಂದಾಗಲಿಲ್ಲ. ಹೀಗಾಗಿ, ಮೈಸೂರಿನಲ್ಲಿ ಎರಡನೇ ಸ್ವಾತಂತ್ರೃ ಚಳವಳಿ ಆರಂಭಗೊಂಡಿತು. ಚಳವಳಿ ತೀವ್ರಗೊಂಡು ಪ್ರತಿಭಟನೆ ನಡೆಸುವಾಗ 1947ರ ಅಕ್ಟೋಬರ್ 24ರಂದು ಮೈಸೂರು ಚಲೋ ಸಂದರ್ಭದಲ್ಲಿ ಹಾರ್ಡ್ವಿಕ್ ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದ ಬಾಣಾವರ ರಾಮಸ್ವಾಮಿ ಗುಂಡಿನೇಟಿಗೆ ಬಲಿಯಾದರು. ಅವರ ನೆನಪಿಗಾಗಿ ರಾಮಸ್ವಾಮಿ ವೃತ್ತ ನಿರ್ಮಿಸಲಾಗಿದೆ ಎಂದು ವೈ.ಸಿ.ರೇವಣ್ಣ ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರು ರಾಮಸ್ವಾಮಿ ಅವರ ಶೌರ್ಯವನ್ನು ಶ್ಲಾಘಿಸಿದರು. ಸಂಘದ ಉಪಾಧ್ಯಕ್ಷ ಡಾ.ಎಂ.ಸೋಮಶೇಖರಯ್ಯ, ಕಾರ್ಯದರ್ಶಿ ಎ.ಯೋಗಾನಂದ, ನಿವೃತ್ತ ಪ್ರಾಧ್ಯಾಪಕ ಪಂಡಿತಾರಾಧ್ಯ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ನಾಲಾಬೀದಿ ರವಿ, ಮುಖಂಡರಾದ ಬೋಗಾದಿ ಸಿದ್ದೇಗೌಡ, ಸಂಘದ ಪದಾಧಿಕಾರಿಗಳಾದ ಸಿ.ಆರ್.ರಂಗಶೆಟ್ಟಿ, ಹಾಲೇಗೌಡ, ವೇದಾಂಬ, ಗಿರಿಜಾ ಅಶ್ವತ್ಥ್ ನಾರಾಯಣ, ನವ್ಯಶ್ರೀ, ಸಂಘದ ಗ್ರಂಥಪಾಲಕ ಡಿ.ರವಿ, ಹಾರ್ಡ್ವಿಕ್ ಶಾಲೆಯ ಕೃಷ್ಣಾನಾಯಕ್ ಇತರರು ಇದ್ದರು.