ಮೈಸೂರು: ಕೇಂದ್ರ ಸರ್ಕಾರದ 2023-24ನೇ ಸಾಲಿನ ಬಜೆಟ್‌ನಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲೆಗಳಿಗೆ ಏನಾದರೂ ಕೊಟ್ಟಿರುವುದನ್ನು ಸಂಸದ ಪ್ರತಾಪ್ ಸಿಂಹ ಬಹಿರಂಗಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.
ಮೈಸೂರು-ಕುಶಾಲನಗರ ರೈಲ್ವೆ ಯೋಜನೆ, ನಾಗನಹಳ್ಳಿ ಟರ್ಮಿನಲ್ ಯೋಜನೆ, ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿ ಬಗ್ಗೆ ಮಾಹಿತಿ ಇಲ್ಲ. ಹಾಗಾದರೆ ಮೈಸೂರು-ಕೊಡಗಿಗೆ ಏನು ನೀಡಲಾಗಿದೆ? ಪ್ರತಾಪ್ ಸಿಂಹ ಎಲ್ಲಿದ್ದಾರೆ? 8 ವರ್ಷಗಳಿಂದ ಯಾವ ಯೋಜನೆ ತಂದಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕೇಂದ್ರದಲ್ಲಿ 8 ವರ್ಷಗಳ ಆಡಳಿತ ನಡೆಸಿರುವ ಬಿಜೆಪಿ ಆಡಳಿತ ಅವಧಿಯಲ್ಲಿ 120 ಲಕ್ಷ ಕೋಟಿ ರೂ. ಸಾಲ ಮಾಡಿರುವುದೇ ಸಾಧನೆ. ಪ್ರತಿ ವರ್ಷ 10.81 ಲಕ್ಷ ಕೋಟಿ ರೂ. ಬಡ್ಡಿ ಕಟ್ಟಲಾಗಿದೆ. ಮನಮೋಹನ್ ಸಿಂಗ್ ಸರ್ಕಾರದ ಕಾಲದಲ್ಲಿ ಜಿಡಿಪಿ ಶೇ.8.7 ಇದ್ದದ್ದು, ಈಗ ಶೇ.6ಗೆ ಇಳಿಕೆಯಾಗಿದೆ. ಆದಾಯ ಮಿತಿ 7 ಲಕ್ಷ ರೂ.ವರೆಗೂ ಕಟ್ಟಬೇಕಾಗಿಲ್ಲ ಎನ್ನುವುದು ಶುದ್ಧ ಸುಳ್ಳು ಎಂದು ನುಡಿದರು.
ಈ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ದೊಡ್ಡ ಗಿಮಿಕ್ ಮಾಡಿದ್ದಾರೆ. ಭದ್ರಾ ಯೋಜನೆಗೆ ಹಣ ಬಿಡುಗಡೆ ಮಾಡುತ್ತೇವೆ ಎಂದಿರುವುದು ಚುನಾವಣಾ ದೃಷ್ಟಿಯಿಂದಲೇ ಹೊರತು ಇದು ಜಾರಿಗೆ ಬರುವ ಹೊತ್ತಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರಲ್ಲ ಎಂದು ಹೇಳಿದರು.
ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಸ್ತೆ ನಿರ್ಮಾಣ ಮಾಡಲು 14 ಪಟ್ಟು ಸಾಲ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಟೋಲ್ ವಿಧಿಸಿ ಹಣ ಮಾಡ್ತಾ ಇದ್ದಾರೆ. ಬಡಜನರಿಗೆ ಉದ್ಯೋಗ ಕೊಡುವ ನರೇಗಾ ಯೋಜನೆ ವಿಸ್ತರಣೆ ಇಲ್ಲ. ರಸಗೊಬ್ಬರ ಸಬ್ಸಿಡಿ ಹಣದಲ್ಲಿ ಶೇ.1.7 ಕಡಿತಗೊಳಿಸಲಾಗಿದೆ. ಅಲ್ಪಸಂಖ್ಯಾತರಿಗೆ ಯಾವುದೇ ಕೊಡುಗೆ ನೀಡಿಲ್ಲ.
ಒಬ್ಬ ವ್ಯಕ್ತಿಯ ಮೇಲೆ 3.5 ಲಕ್ಷ ರೂ. ಸಾಲ ಹೊರಿಸಿದ್ದಾರೆ. ಇನ್ನೂ ರಾಜ್ಯದ 1.5 ಲಕ್ಷ ಸಾಲ ರೂ. ಸೇರಿಸಿದರೆ ಒಟ್ಟು 5 ಲಕ್ಷ ರೂ. ಆಗುತ್ತದೆ. ಭಾವನಾತ್ಮಕ ವಿಷಯ ಕೆದುಕುತ್ತಿದ್ದಾರೆಯೇ ಹೊರತು, ಪೆಟ್ರೋಲ್, ಡಿಸೇಲ್ ಬೆಲೆಯನ್ನು ಇಳಿಕೆ ಮಾಡಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಏಕೆ ಇಂಧನದ ಬೆಲೆ ಇಳಿಸಿಲ್ಲ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರವನ್ನು ಕೇಳುವಷ್ಟು ಧೈರ್ಯ ರಾಜ್ಯದ ಸಂಸದರಿಗೆ ಇಲ್ಲ. ನೀವು ಕೊಟ್ಟ ಕಾರ್ಯಕ್ರಮ ಬಗ್ಗೆ ಹೇಳಿ, ಚರ್ಚೆಗೆ ಬರುವಂತೆ ಸವಾಲು ಹಾಕಿದರು.
ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಪೊಲೀಸರು ಅವಕಾಶ ಕೊಡುತ್ತಿಲ್ಲ. ಕಾಶ್ಮೀರ ಫೈಲ್ಸ್ ಚಿತ್ರವನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ತೋರಿಸಲಾಗುತ್ತಿದೆ. ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಮಾತ್ರ ತಡೆ ಏಕೆ? ಎಂದು ಪ್ರಶ್ನಿಸಿದರು